ಆ ಸಿನಿಮಾ ಕಥೆಯನ್ನೇ ಹೋಲುತ್ತಿದೆ 'ಭೂಮಿಗೆ ಬಂದ ಭಗವಂತ' ಧಾರಾವಾಹಿ!
ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಎರಡು ಧಾರಾವಾಹಿಗಳು ಪ್ರಸಾರ ಕಾಣಲು ಸಜ್ಜಾಗಿವೆ. ಆದರೆ, ಪ್ರೈಂ ಟೈಂನಲ್ಲಿ ಪ್ರಸಾರ ಕಾಣುವ ಸಲುವಾಗಿ ಕಾಯುತ್ತಿವೆ. 'ಭೂಮಿಗೆ ಬಂದ ಭಗವಂತ' ಧಾರವಾಹಿ ಪ್ರೋಮೊ ಆ ಸಿನಿಮಾ ಕಥೆಯನ್ನು ನೆನಪಿಸುತ್ತಿರುವುದು ಸುಳ್ಳಲ್ಲ.
ಈಗಾಗಲೇ ವಾಹಿನಿಯ ಪ್ರೈಂ ಟೈಂನಲ್ಲಿ ಧಾರಾವಾಹಿಗಳು ಮೂಡಿ ಬರುತ್ತಿವೆ. 'ಪಾರು', 'ಪುಟ್ಟಕ್ಕನ ಮಕ್ಕಳು', 'ಗಟ್ಟಿಮೇಳ', 'ಹಿಟ್ಲರ್ ಕಲ್ಯಾಣ', 'ಶ್ರೀರಸ್ತು ಶುಭಮಸ್ತು', 'ಸತ್ಯ' ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿಗಳು ಪ್ರಸಾರವಾಗುತ್ತಿವೆ.
ಸಂಜೆ 6.30 ಯಿಂದ 10 ರ ವರೆಗೂ ಸ್ಲಾಟ್ ಫುಲ್ ಆಗಿದೆ. ಆದರೆ 'ಸೀತಾ ರಾಮ' ಹಾಗೂ 'ಭೂಮಿಗೆ ಬಂದ ಭಗವಂತ' ಧಾರಾವಾಹಿಗಳು ಪ್ರಸಾರ ಕಾಣಲು ಸಜ್ಜಾಗಿವೆ. ಹಾಗಾಗಿ ಯಾವುದಾದರೂ ಧಾರಾವಾಹಿ ಕಥೆ ಮುಗಿಸಿ ಹೊಸ ಧಾರಾವಾಹಿಗೆ ಜಾಗ ಮಾಡಿ ಕೊಡಬೇಕಿದೆ.

ಧಾರಾವಾಹಿ ಪ್ರಸಾರ ಯಾವಾಗ?
ಕಳೆದ ಕೆಲ ತಿಂಗಳ ಹಿಂದಷ್ಟೇ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಪ್ರಸಾರ ಆರಂಭಿಸಿದೆ. ಇದಕ್ಕಾಗಿ 'ಜೊತೆ ಜೊತೆಯಲಿ' ಧಾರಾವಾಹಿಯ ಸ್ಲಾಟ್ ಬದಲಾಯಿಸಲಾಗಿತ್ತು. ಇನ್ನು ಉಳಿದ ಎರಡು ಧಾರಾವಾಹಿಗಳಿಗಾಗಿ ಯಾವ ಧಾರಾವಾಹಿಯ ಸ್ಲಾಟ್ ಅನ್ನು ಬದಲಿಸುತ್ತಾರೋ ಗೊತ್ತಿಲ್ಲ. ಬಹುಶಃ 'ಗಟ್ಟಿಮೇಳ' ಮತ್ತು 'ಸತ್ಯ' ಧಾರಾವಾಹಿಯ ಸಮಯವನ್ನು ಬದಲಾಯಿಸಬಹುದು ಎಂದು ಪ್ರೇಕ್ಷಕರು ಆಲೋಚಿಸಿದ್ದಾರೆ. ಯಾಕೆಂದರೆ ಇತ್ತೀಚೆಗೆ ಈ ಎರಡೂ ಧಾರಾವಾಹಿಗಳು ತೀರಾ ಸಪ್ಪೆಯಾಗಿವೆ.

ಭೂಮಿಗೆ ಬಂದ ಭಗವಂತನ ಕಥೆ!
'ಸೀತಾ ರಾಮ' ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ನಟಿ ವೈಷ್ಣವಿ ಗೌಡ ಅವರು ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ನಟ ಗಗನ್ ಚಿನ್ನಪ್ಪ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಪ್ರೇಮ ಕಥೆಯಾಗಿದೆ. ಇನ್ನು 'ಭೂಮಿಗೆ ಬಂದ ಭಗವಂತ' ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಇದರಲ್ಲಿ ನಾಯಕಿ ಪಾತ್ರವನ್ನು ನಟಿ ಕೃತಿಕಾ ರವೀಂದ್ರ ನಿಭಾಯಿಸಿದ್ದಾರೆ. ನಾಯಕನ ಪಾತ್ರದಲ್ಲಿ ನವೀನ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ಇದೊಂದು ಮಧ್ಯಮ ವರ್ಗದ ಸಂಸಾರದ ಕಥೆಯಾಗಿದೆ. ಆದರೆ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯ ಕಥೆ ಆ ಸಿನಿಮಾ ಕಥೆಯನ್ನು ಹೋಲುತ್ತಿದೆ.

'ಮುಕುಂದ ಮುರಾರಿ' ಕಥೆ
ಉಪೇಂದ್ರ- ಸುದೀಪ್ ನಟನೆಯ 'ಮುಕುಂದ ಮುರಾರಿ; ಸಿನಿಮಾವನ್ನು ನೀವೆಲ್ಲಾ ಈಗಾಗಲೇ ನೋಡಿರಬೇಕು. ಈ ಚಿತ್ರದಲ್ಲಿ ಉಪೇಂದ್ರ ನಾಸ್ತಿಕನ ಪಾತ್ರದಲ್ಲಿಯೂ, ಸುದೀಪ್ ಶ್ರೀಕೃಷ್ಣ ದೇವರ ಪಾತ್ರದಲ್ಲಿಯೂ ನಟಿಸಿದ್ದರು. ಚಿತ್ರದ ನಾಯಕ ಮುಕುಂದ ತನ್ನ ಅಂಗಡಿ ಭೂಕಂಪದಿಂದ ನಾಶವಾದಾಗ ದೇವರ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡುತ್ತಾನೆ. ನಷ್ಟ ಪರಿಹರಿಸಿ ಕೊಡುವಂತೆ ಕೇಳುತ್ತಾನೆ. ದೇವರಿಂದ ತನಗೆ ಮೋಸವಾಗಿದೆ ಎಂದು ವಾದ ಮಾಡುತ್ತಾನೆ. ಸದಾ ದೇವರನ್ನು ಬೈಯುತ್ತಿರುತ್ತಾನೆ. ಆಗ ಶ್ರೀಕೃಷ್ಣನು ಪ್ರತ್ಯಕ್ಷನಾಗುತ್ತಾನೆ. ಅಂದಹಾಗೆ ಹಿಂದಿಯಲ್ಲಿ ಬಂದಿದ್ದ 'ಓ ಮೈ ಗಾಡ್' ಚಿತ್ರವನ್ನು ನಂದ ಕಿಶೋರ್ ಕನ್ನಡದಲ್ಲಿ 'ಮುಕುಂದ ಮುರಾರಿ' ಸಿನಿಮಾ ಮಾಡಿದ್ದರು. ಸಿನಿಮಾದಲ್ಲಿ ಶ್ರೀಕೃಷ್ಣ ಚಿತ್ರದ ನಾಯಕನ ಸಹಾಯಕ್ಕೆ ಬಂದರೆ ಈ ಧಾರಾವಾಹಿಯಲ್ಲಿ ಈಶ್ವರ ಪ್ರತ್ಯಕ್ಷನಾಗುತ್ತಿದ್ದಾನೆ.

ದೇವರನ್ನೇ ಬೈಯುವ ನಾಯಕ!
'ಭೂಮಿಗೆ ಬಂದ ಭಗವಂತ' ಧಾರಾವಾಹಿ ಕಥೆ ಕೂಡ ಹೆಚ್ಚು ಕಮ್ಮಿ 'ಮುಕುಂದ ಮುರಾರಿ' ಚಿತ್ರವನ್ನು ನೆನಪಿಸುತ್ತಿದೆ. ಚಿತ್ರದ ಟೈಟಲ್ ಹಾಗೂ ಪ್ರೋಮೋ ಇದನ್ನು ಸಾರಿ ಸಾರಿ ಹೇಳುತ್ತಿದೆ. ಮಧ್ಯಮ ವರ್ಗದ ವ್ಯಕ್ತಿ ನಿತ್ಯ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂದು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ. ತನ್ನ ಸಮಸ್ಯೆಗಳಿಗೆಲ್ಲಾ ಆ ದೇವರೇ ಕಾರಣ ಎಂದು ಬೈಯುತ್ತಿರುತ್ತಾನೆ. ಕೊನೆಗೆ ಆ ದೇವರೇ ಪ್ರತ್ಯಕ್ಷನಾಗಿ ಆತನ ಸಹಾಯಕ್ಕೆ ಬರ್ತಾನೆ. ದೇವರು ಪ್ರತ್ಯಕ್ಷನಾದರೂ ತಿಳಿಯದ ನಾಯಕ ದೇವರ ಬಳಿಯೇ ದೇವರು ಸಿಗಲಿ ಮಾಡ್ತೀನಿ ಎಂದು ಹೇಳುತ್ತಾನೆ. ಪ್ರೋಮೋ ನೋಡಿದರೆ, ಇದು ಪಕ್ಕಾ ಮುಕುಂದ ಮುರಾರಿ ಚಿತ್ರದ ಕಥೆಯಂತೆಯೇ ಇದೆ. ಆದರೆ, ಧಾರಾವಾಹಿಯ ಕಥೆ ಯಾವ ರೀತಿ ಮುಂದುವರೆಯುತ್ತದೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications











