Bhoomige Bandha Bhagavantha: ಶಿವಪ್ರಸಾದ್ ಬೆನ್ನಿಗಂಟಿದ ಸಂಕಷ್ಟ: ಒಂದು ಸುಳ್ಳಿನಿಂದ ಮುಂದೇನಾಗಬಹುದು..?
'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಆ ಭಗವಂತನೇ ಭೂಮಿಗೆ ಇಳಿದು ಬಂದಿದ್ದಾನೆ. ಮನುಷ್ಯ ಮಾಡುವ ತಪ್ಪುಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದಾನೆ. ಶಿವಪ್ರಸಾದ್‌ನನ್ನು ಉದಾಹರಣೆಯಾಗಿ ಇಟ್ಟುಕೊಂಡು ಭಗವಂತ ಯಾರಿಗೆ ಒಲಿಯುತ್ತಾನೆ. ಅವನು ಮನುಷ್ಯರಿಂದ ಏನನ್ನು ಬಯಸುತ್ತಾನೆ. ಅವನ ಮನ ಗೆಲ್ಲುವುದು ಹೇಗೆ? ಮನುಷ್ಯನಾದವನು ಯಾವ ದಾರಿಯಲ್ಲಿ ನಡೆಯಬೇಕು ಎನ್ನುವ ಸತ್ಯವನ್ನು ತಿಳಿಸಿಕೊಡುತ್ತಿದ್ದಾನೆ.
ಸದಾ ಸುಳ್ಳು ಹೇಳದೇ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಹಾಗೂ ಅನ್ಯಾಯ ಮಾಡದ ಶಿವಪ್ರಸಾದ್ ನಡೆಗೆ ಮೆಚ್ಚಿದ ಆ ಭಗವಂತ ಭೂಮಿಗೆ ಇಳಿದು ಬಂದಿದ್ದಾನೆ. ಶಿವಪ್ರಸಾದ್ ಮಾಡುವ ಪ್ರತಿಯೊಂದು ಕೆಲಸಕ್ಕೂ ಭಗವಂತ ಸಹಾಯ ಮಾಡುತ್ತಿದ್ದಾನೆ. ಶಿವಪ್ರಸಾದ್ ಜೊತೆಗೆ ಇದ್ದುಕೊಂಡು, ಆತನ ಗೊಂದಲಗಳಿಗೆ ಆತನಿಂದಲೇ ಸ್ಪಷ್ಟನೆ ಸಿಗುವಂತೆ ಮಾಡುತ್ತಿದ್ದಾನೆ. ಇದು ಶಿವಪ್ರಸಾದ್‌ಗೂ ಖುಷಿ ಕೊಡುತ್ತಿದೆ. ಶಿವಪ್ರಸಾದ್ ತನ್ನ ಪರಿಶ್ರಮದಿಂದ ಈಗ ಸ್ವಂತ ಮನೆಯನ್ನು ಖರೀದಿ ಮಾಡಿದ್ದಾನೆ.

ಮನೆ ಖರೀದಿಸುವ ಭರದಲ್ಲಿ ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದಾನೆ. ಮನೆ ಖರೀದಿಸಲು ಬ್ಯಾಂಕ್‌ನಲ್ಲಿ ಲೋನ್ ಮಾಡಿದ್ದಾನೆ. ಇದರ ಇಎಂಐ ಬೇರೆ ಕಟ್ಟಬೇಕು. ಇದರ ನಡುವೆಯೇ ಗೃಹಪ್ರವೇಶ ಮಾಡಲು ಮತ್ತಷ್ಟು ಕೈ ಸಾಲ ಕೂಡ ಮಾಡಿಕೊಂಡಿದ್ದಾನೆ. ಈಗ ಈ ಸಾಲವನ್ನು ಕೂಡ ತೀರಿಸಬೇಕಿದೆ. ಶಿವಪ್ರಸಾದ್‌ಗೆ ಈಗ ತನ್ನ ಜವಾಬ್ದಾರಿ ಹೆಚ್ಚಾಗಿದೆ. ಕೈಯಲ್ಲಿ ಹಣ ಇಲ್ಲದೇ ಕಟ್ಟಿ ಹಾಕಿದಂತಾಗಿದೆ.
ಇದೇ ಸಂದರ್ಭದಲ್ಲಿ ಶಿವಪ್ರಸಾದ್‌ಗೆ ಆಫರ್ ಒಂದು ಬಂದಿದೆ. ಅದೇನೆಂದರೆ, ಮುಂಬೈನಲ್ಲಿ ತಮ್ಮ ರಾಜಾ ಅಂಡರ್‌ವೇರ್ ಕಂಪನಿಯನ್ನು ಎಕ್ಸ್‌ಟೆಂಡ್ ಮಾಡಬೇಕಿದೆ. ಇದಕ್ಕಾಗಿ ಶಿವಪ್ರಸಾದ್‌ನನ್ನು ಮೀಟಿಂಗ್ ಅಟೆಂಡ್ ಮಾಡಲು ಮುಂಬೈಗೆ ಹೋಗುವಂತೆ ಅವರ ಬಾಸ್ ತಿಳಿಸಿದ್ದಾರೆ. ಮುಂಬೈಗೆ ಹೋಗಲು ಸಾವಿರಾರು ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಲು, ಫ್ಲೈಟ್‌ನಲ್ಲಿ ಪ್ರಯಾಣ ಮಾಡಲು ಹೇಳಿದ್ದಾರೆ. ಆದರೆ ಈಗ ಶಿವಪ್ರಸಾದ್ ಎಡವಟ್ಟು ಒಂದನ್ನು ಮಾಡಿಕೊಂಡಿದ್ದಾನೆ.

ಮನೆಯಲ್ಲಿ ಎಲ್ಲರೂ ಈ ಹಣವನ್ನು ಉಳಿಸಲು ಶಿವಪ್ರಸಾದ್‌ಗೆ ಟ್ರೈನ್‌ನಲ್ಲಿ ಹೋಗಿ, ಚಿಕ್ಕ ಹೋಟೆಲ್‌ನಲ್ಲಿ ತಂಗುವಂತೆ ಸೂಚಿಸಿದ್ದಾರೆ. ಕಾಶಿ ಕೂಡ ಡುಪ್ಲಿಕೇಟ್ ಬಿಲ್‌ಗಳನ್ನು ತಯಾರಿಸಿ ಕೊಡುತ್ತಾನೆ. ಮನೆಯವರೆಲ್ಲರೂ ಶಿವಪ್ರಸಾದ್ ತಲೆಯನ್ನು ಕೆಡಿಸಿದ್ದಾರೆ. ಸುಳ್ಳು ಹೇಳಲು ಇಷ್ಟವಿಲ್ಲದಿದ್ದರೂ ಈಗ ಶಿವಪ್ರಸಾದ್ ಹಣ ಉಳಿಸುವ ಸಲುವಾಗಿ ಮನೆಯವರ ಮಾತನ್ನು ಒಪ್ಪಿದ್ದಾನೆ. ಟ್ರೈನ್‌ನಲ್ಲಿ ಹೋಗಲು ಆಫೀಸಿನಲ್ಲಿ ಸುಳ್ಳು ಹೇಳಿ ಎರಡು ದಿನ ರಜೆ ತೆಗೆದುಕೊಂಡಿದ್ದಾನೆ. ಮುಂಬೈಗೆ ಹೊರಟಾಗ ಭಗವಂತ ಎದುರಾಗಿದ್ದಾನೆ.
ಶಿವಪ್ರಸಾದ್ ಬೇರೆ ದಾರಿ ಇಲ್ಲದೇ, ಭಗವಂತನಿಗೆ ಸುಳ್ಳು ಹೇಳಿದ್ದಾನೆ. ಫ್ಲೈಟ್‌ನಲ್ಲಿ ಹೋಗುತ್ತಿರುವುದಾಗಿ ಹೇಳಿ ಭಗವಂತನಿಂದ ಎಸ್ಕೇಪ್ ಆಗಿದ್ದಾನೆ. ಮುಂಬೈಗೆ ಟ್ರೈನ್‌ನಲ್ಲಿ ಹೋಗಿ ಮೀಟಿಂಗ್ ಮುಗಿಸಿ, ಪ್ರಾಜೆಕ್ಟ್ ಅಪ್ರೂವಲ್ ಪಡೆದು ವಾಪಸ್ ಕೂಡ ಬಂದಿದ್ದಾನೆ. ಆದರೆ, ಭಗವಂತ ಶಿವಪ್ರಸಾದ್ ತನಗೆ ಸುಳ್ಳು ಹೇಳಿರುವುದಕ್ಕೆ. ಮುಂದೆ ಬರುವ ಕಷ್ಟವನ್ನು ನೀನೇ ಎದುರಿಸು. ಸುಳ್ಳು ಹೇಳುವುದು ತಪ್ಪು ಎನ್ನುವುದು ನಿನಗೆ ಅರ್ಥವಾಗುವವರೆಗೂ ನಾನು ನಿನ್ನ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿ ಹೋಗಿದ್ದಾನೆ.

ಆದರೆ ಇನ್ಮುಂದೆ ಶಿವಪ್ರಸಾದ್ ಯಾವೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ. ಭಗವಂತ ಭಕ್ತನ ಕಷ್ಟಕ್ಕೆ ಓಗೊಡುತ್ತಾನೋ. ಇಲ್ಲ ಮಾಡಿದ ತಪ್ಪಿಗೆ ಅನುಭವಿಸು ಎಂದು ಹೇಳುತ್ತಾನೋ ಗೊತ್ತಿಲ್ಲ.


Click it and Unblock the Notifications











