'ಬಿಗ್ ಬಾಸ್' ಮನೆಯಲ್ಲಿ ಮುರಿದು ಬಿತ್ತು 'ವಿಚಿತ್ರ ಜೋಡಿ'ಯ ಪ್ರೇಮ.!
''ನನ್ನ ಮತ್ತು ಅನೂಪ್ ಜಲೋಟ ನಡುವೆ ಗುರು-ಶಿಷ್ಯೆ ಸಂಬಂಧ ಮಾತ್ರ ಇಲ್ಲ. ನಾವಿಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಈ ಗುಟ್ಟನ್ನು ನಾನು ಇಲ್ಲಿಯವರೆಗೂ ಯಾರೊಂದಿಗೂ ಹಂಚಿಕೊಂಡಿಲ್ಲ. ಈ ಸಂಗತಿ ಬಹಿರಂಗ ಆದಾಗ, ನನ್ನ ಕುಟುಂಬದವರಿಗೂ ಶಾಕ್ ಆಗುತ್ತೆ'' ಎಂದು ಕೊಂಚ ಕೂಡ ಅಂಜಿಕೆ ಇಲ್ಲದೆ 'ಬಿಗ್ ಬಾಸ್' ವೇದಿಕೆ ಮೇಲೆ ಜಸ್ಲೀನ್ ಮಥಾರು ಹೇಳಿದ್ದರು.
'ಬಿಗ್ ಬಾಸ್' ಮನೆಯಲ್ಲಿ ಜಸ್ಲೀನ್ ಮಥಾರು ಹಾಗೂ ಅನೂಪ್ ಜಲೋಟ ತಮ್ಮ ಪ್ರೀತಿಯನ್ನ ಸಮರ್ಥಿಸಿಕೊಂಡಿದ್ದರು. ಸಾಲದಕ್ಕೆ, 65 ವರ್ಷದ ಅನೂಪ್ ಜಲೋಟ ಕೆನ್ನೆಗೆ 28 ವರ್ಷದ ಜಸ್ಲೀನ್ ಮುತ್ತು ಕೊಟ್ಟಿದ್ದರು.
'ಬಿಗ್ ಬಾಸ್' ಮನೆಯಲ್ಲಿ ಈ ಜೋಡಿ ನಡುವೆ ಎಲ್ಲವೂ ಸರಿಯಾಗಿದೆ ಅಂತ ಅಂದುಕೊಳ್ಳುವಾಗಲೇ, ಅನೂಪ್ ಹಾಗೂ ಜಸ್ಲೀನ್ ನಡುವೆ ಮನಸ್ತಾಪ ಭುಗಿಲೆದ್ದಿದೆ.
ಟಾಸ್ಕ್ ನಲ್ಲಿ ಜಸ್ಲೀನ್ ನಡೆದುಕೊಂಡ ರೀತಿ ಅನೂಪ್ ಜಲೋಟಗೆ ಬೇಸರ ತರಿಸಿದೆ. ಹೀಗಾಗಿ 'ಜೋಡಿ'ಯಾಗಿರಲು, 'ಸಂಬಂಧ' ಮುಂದುವರೆಸಲು ಅನೂಪ್ ಜಲೋಟ ನಿರಾಕರಿಸಿದ್ದಾರೆ. ಮುಂದೆ ಓದಿರಿ...

ಎಲ್ಲವೂ ಆಗಿದ್ದು ನಾಮಿನೇಷನ್ ಟಾಸ್ಕ್ ನಿಂದ.!
'ಬಿಗ್ ಬಾಸ್-12' ಕಾರ್ಯಕ್ರಮದ ಮೂರನೇ ವಾರದ ನಾಮಿನೇಷನ್ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ನಾಮಿನೇಷನ್ ಪ್ರಕ್ರಿಯೆಗಾಗಿ 'ಬಿಗ್ ಬಾಸ್' ವಿಶೇಷ ಚಟುವಟಿಕೆ ನೀಡಿದ್ದರು. ಚಟುವಟಿಕೆ ಅನುಸಾರ, 'ವಿಚಿತ್ರ ಜೋಡಿ'ಯ ಪೈಕಿ ಒಬ್ಬರನ್ನು 'ಸಿಂಗಲ್' ಆಗಿರುವ ಸೆಲೆಬ್ರಿಟಿ 'ಕಿಡ್ನ್ಯಾಪ್' ಮಾಡಬೇಕಿತ್ತು. ಕಿಡ್ನ್ಯಾಪ್ ಆಗಿರುವ ವ್ಯಕ್ತಿ ಬಿಡುಗಡೆ ಆಗಬೇಕು ಅಂದ್ರೆ ಆತನ ಪಾರ್ಟ್ನರ್, ಸೆಲೆಬ್ರಿಟಿ ಸ್ಪರ್ಧಿ ಹೇಳಿದ ಕೆಲಸವನ್ನ ಮಾಡಬೇಕಿತ್ತು.

ಕಿಡ್ನ್ಯಾಪ್ ಆದ ಅನೂಪ್ ಜಲೋಟ
'ವಿಚಿತ್ರ ಜೋಡಿ'ಗಳ ಪೈಕಿ ಮೊದಲು ಕಿಡ್ನ್ಯಾಪ್ ಆಗಿದ್ದು ಅನೂಪ್ ಜಲೋಟ. 'ಬಿಗ್ ಬಾಸ್' ಮನೆಯಲ್ಲಿ ಸಿಂಗಲ್ ಆಗಿ ಬಂದಿರುವ ದೀಪಿಕಾ, ಅನೂಪ್ ರನ್ನ ಕಿಡ್ನ್ಯಾಪ್ ಮಾಡಿದರು. ಹೀಗಾಗಿ, ದೀಪಿಕಾ ಹೇಳಿದ ಕೆಲಸವನ್ನ ಅನೂಪ್ ಪಾರ್ಟ್ನರ್ ಜಸ್ಲೀನ್ ಮಥಾರು ಮಾಡಲೇಬೇಕಿತ್ತು.

ದೀಪಿಕಾ ಹೇಳಿದ ಕೆಲಸವೇನು.?
ತಮ್ಮ ಬಳಿ ಇರುವ ಎಲ್ಲಾ ಬಟ್ಟೆ, ಮೇಕಪ್ ಸಾಮಗ್ರಿಗಳನ್ನು ನಾಶ ಪಡಿಸಬೇಕು. ಹಾಗೇ, ಭುಜದವರೆಗೂ ತಲೆಕೂದಲನ್ನು ಕಟ್ ಮಾಡಿಕೊಳ್ಳಬೇಕು. ಇವನ್ನೆಲ್ಲಾ ಮಾಡಿದರೆ ಮಾತ್ರ ಅನೂಪ್ ರನ್ನ ಬಿಡುಗಡೆ ಮಾಡುವೆ ಎಂದು ಜಸ್ಲೀನ್ ಗೆ ದೀಪಿಕಾ ಹೇಳಿದರು.

ಜಸ್ಲೀನ್ ಮನಸ್ಸು ಮಾಡಲಿಲ್ಲ.!
ದೀಪಿಕಾ ಹೇಳಿದ ಕೆಲಸ ಮಾಡಲು ಜಸ್ಲೀನ್ ಒಪ್ಪಿಕೊಳ್ಳಲಿಲ್ಲ. ಹೀಗಾಗಿ, ಅನೂಪ್ ಹಾಗೂ ಜಸ್ಲೀನ್ ನಾಮಿನೇಟ್ ಆದರು. ನಾಮಿನೇಷನ್ ಪ್ರಕ್ರಿಯೆಯಿಂದ ದೀಪಿಕಾ ಸೇಫ್ ಆದರು.

ಬಾಕಿ ಜೋಡಿಗಳ ಕಥೆ ಬೇರೆ
'ಸಿಂಗಲ್ಸ್' ಕೊಟ್ಟ ಟಾಸ್ಕ್ ನ ಬಾಕಿ ಜೋಡಿಗಳು ಪೂರ್ಣಗೊಳಿಸಿ ನಾಮಿನೇಷನ್ ನಿಂದ ಸೇಫ್ ಆದರು. ಇದನ್ನೆಲ್ಲ ನೋಡಿ ಅನೂಪ್ ಜಲೋಟ ಮನಸ್ಸಿಗೆ ಬೇಸರ ಆಯ್ತು.

ಸಂಬಂಧ ಮುಂದುವರೆಸುವುದಿಲ್ಲ.!
ಟಾಸ್ಕ್ ನಲ್ಲಿ ಜಸ್ಲೀನ್ ನಡೆದುಕೊಂಡ ರೀತಿ ಹಾಗೂ ತೆಗೆದುಕೊಂಡ ನಿರ್ಧಾರದಿಂದಾಗಿ ಬೇಸೆತ್ತ ಅನೂಪ್, ''ಇನ್ಮುಂದೆ ಈ ಸಂಬಂಧ ಮುಂದುವರೆಸುವುದಿಲ್ಲ. 'ಬಿಗ್ ಬಾಸ್' ಮನೆಯಲ್ಲೂ ನಾನು ಜೋಡಿಯಾಗಿ ಆಟ ಆಡುವುದಿಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಅನೂಪ್ ಜಲೋಟ ಘೋಷಿಸಿದರು. ಜಸ್ಲೀನ್ ಎಷ್ಟೇ ಬಾರಿ 'ಕ್ಷಮೆ' ಕೇಳಿದರೂ, ಅನೂಪ್ ಮನಸ್ಸು ಬದಲಾಗಲಿಲ್ಲ.

ಮುಂದೆ ಏನಾಗುತ್ತೋ.?
ಇಂದು ಮುನಿಸಿಕೊಂಡಿರುವ ಜೋಡಿ ನಾಳೆ ಒಂದಾಗಬಹುದು, ಒಂದಾಗದೇ ಇರಲೂ ಬಹುದು. 'ಬಿಗ್ ಬಾಸ್' ಆಟ ಈ ಜೋಡಿ ಮೇಲೆ ಹೇಗೆ ಪರಿಣಾಮ ಬೀರುತ್ತೋ, ನೋಡಬೇಕು.


Click it and Unblock the Notifications











