BBK12: ಕುರಿ ಪ್ರತಾಪ್ ಸೋಲಿಗೆ ಪ್ರಥಮ್ ಗೆಲುವಿಗೆ ಒಂದೇ ಕಾರಣ; ಗಿಲ್ಲಿ ಸಕ್ಸಸ್ ಸೀಕ್ರೆಟ್ ಕೂಡ ಅದೇ!
ಅಭಿಮಾನಿಗಳ ಆಸೆ ಈಡೇರಿದೆ. ಗಿಲ್ಲಿ ಬಿಗ್‌ಬಾಸ್ ಟ್ರೋಫಿ ಗೆದ್ದು ಬೀಗಿದ್ದಾರೆ. ಮಂಡ್ಯಹೈದ ಗಿಲ್ಲಿ ನಟನ ಅಭೂತಪೂರ್ವ ಗೆಲುವು ಗಮನ ಸೆಳೆದಿದೆ. ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಒಟ್ಟು 60 ಲಕ್ಷ ರೂ. ನಗದು ಬಹುಮಾನದ ಜೊತೆಗೆ ಒಂದು ಕಾರ್ ಗಿಲ್ಲಿಗೆ ಸಿಕ್ಕಿದೆ. ಅಭಿಮಾನಿಗಳಿಗೆ ಈ ಗೆಲುವನ್ನು ಅರ್ಪಿಸಿದ್ದಾರೆ.
ಎಲ್ಲಾ ವಿಧದಲ್ಲಿ ತಮಗಿಂತ ಪ್ರಬಲ ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಹಾಗೆ ನೋಡಿದ್ರೆ ಫಿಸಿಕಲ್ ಟಾಸ್ಕ್‌ಗಳಲ್ಲಿ ಗಿಲ್ಲಿ ಪ್ರದರ್ಶನ ಉತ್ತಮವಾಗಿ ಇರಲಿಲ್ಲ. ಬರೀ ಎಂಟರ್‌ಟೈನ್‌ಮೆಂಟ್ ಮೂಲಕ ಗಿಲ್ಲಿ ವೀಕ್ಷಕರ ಮನಸೂರೆಗೊಂಡಿದ್ದರು. ಅಭಿಮಾನಿ ಬಳಗ ಸೃಷ್ಟಿಸಿಕೊಂಡುಬಿಟ್ಟರು. ಎಲ್ಲರನ್ನು ಕಾಲೆಳೆಯುವ ಭರದಿಂದ ಕೆಲವೊಮ್ಮೆ ಎಡವಟ್ಟು ಆಗಿದ್ದು ಇದೆ. ಆದರೆ ಅದನ್ನೆಲ್ಲಾ ಮೀರಿ ಗಿಲ್ಲಿ ಗೆಲುವಿನ ಜರ್ನಿ ಮುಂದುವರೆಸಿದ್ದರು.

ಫಿನಾಲೆಗೆ ತಿಂಗಳು ಬಾಕಿ ಇರುವಾಗಲೇ ಗಿಲ್ಲಿ ವಿನ್ನರ್ ಎಂದು ವೀಕ್ಷಕರು ಷರಾ ಬರೆದುಬಿಟ್ಟರು. ಅದೇ ನಿಜವಾಗಿಬಿಡ್ತು. ಈ ಹಿಂದೆ ಬಿಗ್‌ಬಾಸ್ ಶೋನಲ್ಲಿ ಅಚ್ಚರಿಯ ಫಲಿತಾಂಶ ಬಂದಿದ್ದು ಇದೆ. ಅರುಣ್ ಸಾಗರ್ ರೀತಿ ಗಿಲ್ಲಿಗೂ ಟ್ರೋಫಿ ಕೈತಪ್ಪಿಬಿಡುತ್ತಾ ಎನ್ನುವ ಸಣ್ಣ ಅನುಮಾನ ಕೆಲವರನ್ನು ಕಾಡುತಿತ್ತು. ಆದರೆ ಕೊನೆ ಎರಡು ವಾರಗಳಲ್ಲಿ ಗಿಲ್ಲಿ ಬಗೆಗಿನ ಕ್ರೇಜ್ ನೋಡಿ ಗೆಲುವು ಸುಲಭ ಎನ್ನುವುದು ಗೊತ್ತಾಗಿ ಹೋಯಿತು. ಎಷ್ಟು ಕೋಟಿ ಮತಗಳು ಗಿಲ್ಲಿಗೆ ಸಿಗುತ್ತದೆ ಎನ್ನುವುದು ಮಾತ್ರ ಕೊನೆಗೆ ಕುತೂಹಲ ಮೂಡಿಸಿತ್ತು.
ಅಷ್ಟಕ್ಕೂ ಗಿಲ್ಲಿ ಗೆಲುವಿನ ಸೀಕ್ರೆಟ್ ಏನು? ಎನ್ನುವ ಪ್ರಶ್ನೆ ಮೂಡುವುದು ಸಹಜ. ಮೇಲ್ನೋಟಕ್ಕೆ ಗಿಲ್ಲಿ ಕಾಮಿಡಿ ಟೈಮಿಂಗ್, ಎಲ್ಲರನ್ನು ಮಾತಲ್ಲೇ ಸೋಲಿಸುವ ಪರಿ ಆತನನ್ನು ಗೆಲ್ಲಿಸಿತು ಎಂದು ಬಿಡಿಸಿ ಹೇಳಬೇಕಿಲ್ಲ. ಆದರೆ ಅದಕ್ಕಿಂತ ಮುಖ್ಯವಾಗಿ ಗಿಲ್ಲಿ ಸ್ಟ್ರ್ಯಾಟರ್ಜಿ ಚೆನ್ನಾಗಿತ್ತು. ಅದು ಧೈರ್ಯವಾಗಿ ಮುನ್ನುಗ್ಗುವುದು. ಪ್ರಥಮ್ ಹಾಗೂ ಹನುಮಂತ ಅವರ ಆಟ ನೋಡ್ಕೊಂಡು ತಾವು ಬಿಗ್‌ಬಾಸ್ ಮನೆ ಒಳಗೆ ಬಂದಿದ್ದಾಗಿ ಸ್ವತಃ ಗಿಲ್ಲಿ ಹೇಳಿದ್ದರು.

ಕುರಿ ಪ್ರತಾಪ್ ಸೋಲಿಗೆ, ಪ್ರಥಮ್ ಮತ್ತು ಗಿಲ್ಲಿಯ ಅದ್ಭುತ ಗೆಲುವಿನ ಸೀಕ್ರೆಟ್ ಒಂದೇ ಅಂದ್ರೇ ನಂಬ್ಲೇಬೇಕು. ಸೀಸನ್ 7ರಲ್ಲಿ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದರು. ಗಿಲ್ಲಿಗಿಂತಲೂ ಕುರಿ ಪ್ರತಾಪ್ ಒಳ್ಳೆ ಎಂಟರ್‌ಟೈನರ್. ಆದರೆ ಗಿಲ್ಲಿಗೆ ಸಿಕ್ಕ ಕ್ರೇಜ್ ಅವರಿಗೆ ಸಿಗಲಿಲ್ಲ. ಕಾರಣ ಕುರಿ ಪ್ರತಾಪ್ ಬಿಗ್‌ಬಾಸ್ ಮನೆಯಲ್ಲಿ ಕೊಂಚ ಭಯದಲ್ಲೇ ಆಟ ಆಡಿದ್ದರು. ಹುಷಾರಾಗಿ ಆಡ್ಬೇಕು.. ಸುತ್ತಾ ಕ್ಯಾಮರಾ ಇದೆ, ಜನ ನೋಡ್ತಿರ್ತಾರೆ. ಎಡವಟ್ಟು ಆಗಬಾರದು.. ವೀಕೆಂಡ್ ಸುದೀಪ್ ಸರ್ ಬೈತಾರೆ ಅಂತೆಲ್ಲಾ ಗೊಂದಲದಲ್ಲೇ ಪ್ರತಾಪ್ ಆಡಿದ್ದರು. ಆದರೆ ಗಿಲ್ಲಿ ಆ ತಪ್ಪು ಮಾಡ್ತಿಲ್ಲ ಎಂದು ಸ್ವತಃ ಕುರಿ ಪ್ರತಾಪ್ ಹೇಳಿದ್ದರು.
ಹೌದು ಗಿಲ್ಲಿ ಮೊದಲಿನಿಂದಲೂ ಅಗ್ರೆಸ್ಸಿವ್ ಆಗಿಯೇ ಆಟ ಆಗಿದ್ದರು. ಕಾಮಿಡಿ ಮಾಡುವ ಭರದಲ್ಲಿ ಕೆಲವೊಮ್ಮೆ ಲಿಮಿಟ್ ಕ್ರಾಸ್ ಆಗಿ ಸಮಸ್ಯೆ ಆಗಿತ್ತು. ವೀಕೆಂಡ್ ಪಂಚಾಯ್ತಿ ವೇಳೆ ಸುದೀಪ್ ನಯವಾಗಿಯೇ ಚಾಟಿ ಬೀಸಿದ್ದರು. "ನಿಮ್ಮನ್ನು ಬೆಳೆಸಿದ ಅದೇ ನಾಲಿಗೆ ನಿಮ್ಮನ್ನು ಹಾಳು ಮಾಡ್ಬಹುದು" ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೂ ಗಿಲ್ಲಿ ತಮ್ಮ ನಡೆ ಬದಲಿಸಲಿಲ್ಲ. ಬೇರೆ ಸ್ಪರ್ಧಿಗಳ ಕಾಲೆಳೆಯುವುದು, ರೋಸ್ಟ್ ಮಾಡುವುದು ಬಿಡಲಿಲ್ಲ.
ಮುಖ್ಯವಾಗಿ ಕಾವ್ಯಾ ವಿಚಾರದಲ್ಲಿ ಗಿಲ್ಲಿ ತಮ್ಮ ಮಾತು ಬದಲಿಸಲಿಲ್ಲ. ಕೊನೆಯವರೆಗೂ ಆಕೆಯ ಪರವಾಗಿಯೇ ನಿಂತಿದ್ದರು. ಅವರಿಬ್ಬರ ನಡುವೆ ಸ್ನೇಹ ಇದ್ಯೋ, ಪ್ರೀತಿ ಇದ್ಯೋ ಅದು ಬೇರೆ ವಿಷಯ.. ಆದರೆ ಆಕೆಯನ್ನು ಗಿಲ್ಲಿ ಮಾತ್ರ ಬಿಟ್ಟುಕೊಡಲಿಲ್ಲ. ಒಂದು ಹಂತದಲ್ಲಿ ಆಕೆ ನಾಮಿನೇಟ್ ಮಾಡಿದ್ರು, ಆ ಬಳಿಕ ಕೂಡ ಸ್ನೇಹ ಮುಂದುವರೆಸಿದರು. ಕಾವು ಕಾವು ಎನ್ನುತ್ತಲೇ ಇದ್ದರು. ಪ್ರೀ ಫಿನಾಲೆ ವೇದಿಕೆಯಲ್ಲಿ ಇನ್ನುಳಿದ 5 ಸ್ಪರ್ಧಿಗಳಿಗೆ ಯಾವ ಸ್ಥಾನ ಕೊಡ್ತೀರಾ ಅಂದಾಗ ಕೂಡ ಕಾವ್ಯಾ ಅವರನ್ನು ತಮಗಿಂತ ಮೇಲೆ ಇಟ್ಟರು. ಹೀಗೆ ಗಿಲ್ಲಿ ಯಾವತ್ತು ತಮ್ಮ ಲೆಕ್ಕಾಚಾರ ಬದಲಿಸಲಿಲ್ಲ.
ಕೊನೆಯ 2 ವಾರ ಕೊಂಚ ಎಂಟರ್‌ಟೈನ್‌ಮೆಂಟ್ ಕಮ್ಮಿ ಆಯಿತು ಎನ್ನುವುದು ಬಿಟ್ಟರೆ ಇಡೀ ಸೀಸನ್ ಗಿಲ್ಲಿ ವೀಕ್ಷಕರನ್ನು ರಂಜಿಸಿದ್ದರು. ಬಿಗ್‌ಬಾಸ್ ಸೀಸನ್-4ರಲ್ಲಿ ಪ್ರಥಮ್ ಕೂಡ ಇದೇ ರೀತಿ ಆಟ ಆಡಿದ್ದರು. ಯಾರು ಏನೇ ಅಂದ್ರು ತಲೆ ಕೆಡಿಸಿಕೊಳ್ಳಲಿಲ್ಲ. ಅವರು ಕೆಲವೊಮ್ಮೆ ಅತಿಯಾಗಿ ಆಡಿದ್ದು ಇದೆ. ವೀಕ್ಷಕರು ಅದನ್ನೆಲ್ಲಾ ಗಂಭೀರವಾಗಿ ಪರಿಗಣಿಸಲೇ ಇಲ್ಲ. ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಸರ್ ಎಚ್ಚರಿಕೆ ಕೊಟ್ಟಾಗ ತಪ್ಪು ತಿದ್ದಿಕೊಳ್ಳುತ್ತಿದ್ದರು. ಆದರೆ ಸಂಪೂರ್ಣವಾಗಿ ಸೈಲೆಂಟ್ ಆಗಲಿಲ್ಲ. ಫಿನಾಲೆ ವೇದಿಕೆಯಲ್ಲಿ ಕೂಡ ಒಳ್ಳೆ ಹುಡುಗ ಪ್ರಥಮ್ ಬಾಡಿ ಲಾಂಗ್ವೇಜ್ ಬದಲಾಗಿರಲಿಲ್ಲ.


Click it and Unblock the Notifications











