ಇನ್‌ಸ್ಟಾಗ್ರಾಮ್‌ನಲ್ಲಿ ರಘು ಅನ್‌ಫಾಲೋ ಮಾಡಿದ್ಯಾಕೆ? ಮೌನ ಮುರಿದ ಗಿಲ್ಲಿ ನಟ
ಬಿಗ್‌ಬಾಸ್ ಮನೆಯೇ ವಿಚಿತ್ರ. ಪರಸ್ಪರ ಪರಿಚಯ ಇರುವವರು, ಗುರುತು ಪರಿಚಯ ಇಲ್ಲದವರು 100 ದಿನಗಳ ಕಾಲ ಈ ಆಟದಲ್ಲಿ ಸ್ಪರ್ಧಿಗಳಾಗಿ ಒಂದು ಮನೆ ಒಳಗೆ ಬಂಧಿ ಆಗುತ್ತಾರೆ. ಆಟದ ನಡುವೆ ಕೆಲವರು ಬಹಳ ಆತ್ಮೀಯ ಸ್ನೇಹಿತರಾಗಿಬಿಡುತ್ತಾರೆ. ಮತ್ತೆ ಕೆಲವರು ಬದ್ಧ ಶತ್ರುಗಳಾಗಿಬಿಡುತ್ತಾರೆ. ಶೋ ಮುಗಿದ ಬಳಿಕ ಕೂಡ ಈ ಸ್ನೇಹ ಅಥವಾ ದ್ವೇಷವನ್ನು ಮುಂದುವರೆಸುತ್ತಾರೆ.
ಗಿಲ್ಲಿ ನಟ ಹಾಗೂ ಮ್ಯೂಟೆಂಟ್ ರಘು ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳಾಗಿದ್ದು ಗೊತ್ತೇಯಿದೆ. ಇಬ್ಬರ ನಡುವೆ ಒಳ್ಳೆ ಸ್ನೇಹ ಇತ್ತು. ಆದರೆ ಗಿಲ್ಲಿ ಅತಿಯಾಗಿ ಕಾಮಿಡಿ ಮಾಡುವುದು, ವೈಯಕ್ತಿಕ ವಿಚಾರಗಳ ಬಗ್ಗೆ ಕಾಮೆಂಟ್ ಮಾಡಿ ಮನೆಯಲ್ಲಿ ಕೆಲವರನ್ನು ಎದುರು ಹಾಕಿಕೊಂಡಿದ್ದರು. ಗಿಲ್ಲಿಯ ಅತಿರೇಕದ ಮಾತುಗಳಿಂದ ರಘು ಕೂಡ ಬೇಸರಗೊಂಡಿದ್ದರು. ಆದರೂ ಗಿಲ್ಲಿ, ರಘು ಹಾಗೂ ರಕ್ಷಿತಾ ನಡುವೆ ಆತ್ಮೀಯ ಸ್ನೇಹ ಸಂಬಂಧ ಇದೆ.

ಇನ್‌ಸ್ಟಾಗ್ರಾಮ್‌ನಲ್ಲಿ ರಘು ಇದ್ದಕ್ಕಿದ್ದಂತೆ ಗಿಲ್ಲಿನ ಅನ್‌ಫಾಲೋ ಮಾಡಿಬಿಟ್ಟಿದ್ದಾರೆ. ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಸದ್ದು ಮಾಡ್ತಿದೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ವಾ? ಭಿನ್ನಾಭಿಪ್ರಾಯ ಮೂಡಿದ್ಯಾ? ಅಷ್ಟಕ್ಕೂ ಗಿಲ್ಲಿ ಅಕೌಂಟ್ ಅನ್ನು ರಘು ಅನ್‌ಫಾಲೋ ಮಾಡಿದ್ದು ಯಾಕೆ ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆ ಸ್ವತಃ ಗಿಲ್ಲಿ ಈಗ ಪ್ರತಿಕ್ರಿಯಿಸಿದ್ದಾರೆ.
ಅದು ಯಾಕೆ ರಘು ಅಣ್ಣ ಅನ್‌ಫಾಲೋ ಮಾಡಿದ್ರೋ ನನಗೂ ಗೊತ್ತಿಲ್ಲ ಎಂದು ವಿಶ್ವವಾಣಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಗಿಲ್ಲಿ ಹೇಳಿದ್ದಾರೆ. "ಖಂಡಿತ ಈ ವಿಚಾರ ನನಗೆ ಗೊತ್ತಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿದ್ದು ನೋಡಿದ ಮೇಲೆ ಗೊತ್ತಾಯ್ತು. ನಾನು ಇನ್‌ಸ್ಟಾಗ್ರಾಮ್ ಅಷ್ಟು ನೋಡಲ್ಲ, ರೀಲ್ಸ್ ನೋಡಿ ಸುಮ್ಮನಾಗಿಬಿಡ್ತೀನಿ. ಫೋಟೊ, ವೀಡಿಯೋ ಪೋಸ್ಟ್ ಮಾಡೋದು ರೆಗ್ಯುಲರ್ ಆಗಿ ಆಕ್ಟೀವ್ ಆಗಿರುವುದು ಮಾಡಲ್ಲ. ಬಹುಶಃ ರಘು ಅಣ್ಣ ಫಾಲೋ ಮಾಡಿರ್ತಾರೆ. ನಾನು ಮಾಡಡಿಲ್ಲ, ಅಂತ ಬೇಸರ ಆಗಿರಬಹುದು. ಫೋನ್ ಮಾಡಿ ಮಾತನಾಡಬೇಕು. ಇನ್ನು ಮಾತನಾಡಿಲ್ಲ" ಎಂದಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳಲ್ಲಿ ಸ್ಪಂದನಾ, ಕಾವ್ಯಾ, ರಕ್ಷಿತಾ, ಸೂರಜ್ ಅವರನ್ನು ಗಿಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ರಘು ಅವಕಾಶವಾದಿ, ಗಿಲ್ಲಿಯನ್ನು ಬಳಸಿಕೊಂಡು ಈಗ ಬಿಟ್ಟರು, ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. "ಅದೆಲ್ಲಾ ಸುಳ್ಳು. ರಘು ಅಣ್ಣ ಇರುವ ಪರ್ಸನಾಲಿಟಿಗೂ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ. ಮಗುವಿನ ಮನಸ್ಸಿನವರು. ಅವ್ರು ಅವಕಾಶವಾದಿ ಅಲ್ಲ. ನಮ್ಮ ಸ್ನೇಹದಲ್ಲಿ ಯಾವುದೇ ಬಿರುಕು ಇಲ್ಲ. ವಾರದ ಹಿಂದೆ ಮನೆಗೆ ಊಟಕ್ಕೆ ಕರೆದಿದ್ದರು" ಎಂದು ಗಿಲ್ಲಿ ಹೇಳಿದ್ದಾರೆ.
ಆದಷ್ಟು ಬೇಗ ರಕ್ಷಿತಾ, ರಘು ಅವರನ್ನು ಭೇಟಿ ಮಾಡಬೇಕು. ಒಟ್ಟಿಗೆ ಊಟ ಮಾಡಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದೇವೆ. ಎಲ್ಲರೂ ತಮ್ಮ ಮನೆಗಳಿಗೆ ನನ್ನನ್ನು ಊಟಕ್ಕೆ ಕರೆಯುತ್ತಿದ್ದಾರೆ. ಆದರೆ ಹೋಗಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹೋಗಬೇಕು ಎಂದು ಗಿಲ್ಲಿ ಹೇಳಿದ್ದಾರೆ. 'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳು ಭಾಗಿ ಆಗಿದ್ದರು. ಆ ವೇದಿಕೆಯಲ್ಲಿ ನನಗೆ ಸರಿಯಾಗಿ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ.
'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಹೆಚ್ಚು ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ. ಗಿಲ್ಲಿ ಹಾಗೂ ಕಾವ್ಯಾ ಬಹಳ ಮಾತನಾಡಿದರು. ಅವರು ಮಾತನಾಡಲಿ ಪರವಾಗಿಲ್ಲ. ಆದರೆ ನನಗೆ ಯಾಕೆ ಕಮ್ಮಿ ಮಾತನಾಡಲು ಹೇಳಿದ್ರು ಎಂದು 'ಸಂಪೂರ್ಣ ನ್ಯೂಸ್' ವಾಹಿನಿ ಸಂದರ್ಶನದಲ್ಲಿ ರಕ್ಷಿತಾ ಹೇಳಿರುವುದು ವೈರಲ್ ಆಗ್ತಿದೆ.


Click it and Unblock the Notifications











