BBK12: ಹೆಣ್ಣು ಮಕ್ಕಳಿಗೆ ಗಿಲ್ಲಿ ಕಿರುಕುಳ? ದೂರು ಕೊಟ್ಟ ಮಹಿಳೆ ಆರೋಪ ಏನು?
ಬಿಗ್‌ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ವೀಕ್ಷಕರ ಗಮನ ಸೆಳೆದಿದ್ದಾನೆ. ಆದರೆ ಆತ ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ನಿನ್ನೆ(ನವೆಂಬರ್ 17) ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಸುದ್ದಿ ಆಗಿತ್ತು.
ಹೆಚ್. ಸಿ ಕುಶಾಲ ಎಂಬುವವರು ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿ ವಿರುದ್ಧ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಆಕೆ ಪಬ್ಲಿಕ್ ಟಿವಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. ಗಿಲ್ಲಿ ವಿರುದ್ಧ ತಮ್ಮ ಆರೋಪ ಏನು ಎನ್ನುವುದನ್ನು ಮಾತನಾಡಿದ್ದಾರೆ. ಕುಶಾಲ ಅವರು ನೀಡಿದ ದೂರು ಆಧರಿಸಿ ಮಹಿಳಾ ಆಯೋಗ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ದೂರುದಾರೆ ಕುಶಾಲ ಮಾತನಾಡಿ "ಗಿಲ್ಲಿ ವಿರುದ್ಧ ದೂರು ಕೊಟ್ಟಿರುವುದು ನಿಜ. ನಮಗೆ ವೈಯಕ್ತಿಕವಾಗಿ ಆತನ ಮೇಲೆ ಯಾವುದೇ ದ್ವೇಷ ಇಲ್ಲ. ನಾನು ಎಲ್ಲಾ ಸೀಸನ್ ನೋಡ್ತಾ ಬಂದಿದ್ದೇನೆ. ಈ ಬಾರಿ ಗಿಲ್ಲಿ ನಡೆದುಕೊಳ್ಳುವ ರೀತಿ, ಹೆಣ್ಣು ಮಕ್ಕಳನ್ನು ಕೀಟಲೆ ಮಾಡುವ ಪರಿ ಅತಿಯಾಯಿತು. ರಿಷಾ ಗೌಡ ಬಟ್ಟೆ ತಂದು ಗಿಲ್ಲಿ ಅಲ್ಲಿ ಹಾಕಿದ್ದು ಬಹಳ ಬೇಸರ ತಂದಿತ್ತು" ಎಂದು ಹೇಳಿದ್ದಾರೆ.
ಹೆಣ್ಣು ಮಕ್ಕಳ ಬಟ್ಟೆ ಮುಟ್ಟಲು ಯಾರು ಅಧಿಕಾರ ಕೊಟ್ಟರು ಎಂದು ಕುಶಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಮ್ಮ ಮನೆಗಳಲ್ಲಿ ಕೂಡ ಪುರುಷರು ಮಹಿಳೆಯರ ಬಟ್ಟೆ ಮುಟ್ಟಲ್ಲ. ಬಿಗ್‌ಬಾಸ್ ಶೋನಲ್ಲಿ ಗಿಲ್ಲಿ ಯೋಚನೆ ಮಾಡಬೇಕಿತ್ತು. ಗಿಲ್ಲಿ ನೀನು 50 ಲಕ್ಷ ರೂ. ಗೆಲ್ಲು ಬೇಕಿದ್ರೆ, ಆದರೆ ಹೆಣ್ಣು ಮಕ್ಕಳಿಗೆ ಟಾರ್ಚರ್ ಕೊಡಬೇಡ. ಇದೇ ಕಾರಣಕ್ಕೆ ಆಯೋಗಕ್ಕೆ ದೂರು ನೀಡಿದ್ದೇನೆ. ಕಾಮಿಡಿ ಕಾಮಿಡಿ ಆಗಿರಬೇಕು. ಹೆಣ್ಣು ಮಕ್ಕಳನ್ನು ಟಾಂಟ್ ಮಾಡುವುದು, ರೇಗಿಸುವುದು ಸರಿಯಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಿಲ್ಲಿಗೆ ರಿಷಾ ಹಲ್ಲೆ ಮಾಡಿದ್ದು ಸರೀನಾ ತಪ್ಪಾ? ಎನ್ನುವುದನ್ನು ಬಿಗ್‌ಬಾಸ್ ಆಯೋಜಕರು ತೀರ್ಮಾನಿಸಲಿ. ಆದರೆ ಗಿಲ್ಲಿ ಮಾಡಿದ್ದು ತಪ್ಪು ಎಂದು ನನ್ನ ಮನಸ್ಸಿಗೆ ಅನ್ನಿಸಿತು. ನನಗೆ ಇಷ್ಟವಾದ ಶೋ ಇದು. ಗಿಲ್ಲಿ ಮೇಲೆ ಬೇರೆ ಯಾವುದೇ ವೈಯಕ್ತಿಕ ದ್ವೇಷ ನನಗಿಲ್ಲ. ನನಗೆ ಯಾವುದೇ ಪ್ರಚಾರ ಬೇಕಿಲ್ಲ. ರಿಷಾ ಬಗ್ಗೆ ಬಿಗ್‌ಬಾಸ್ ಕ್ರಮ ಕೈಗೊಳ್ಳಲಿ ಬೇಕಿದ್ದರೆ. ಆದರೆ ಹೆಣ್ಣು ಮಕ್ಕಳ ಬಟ್ಟೆ ಮುಟ್ಟಿದ್ದು ತಪ್ಪು. ಈ ಬಗ್ಗೆ ಬಿಗ್‌ಬಾಸ್ ಪ್ರತಿಕ್ರಿಯಿಸಿ ಎಚ್ಚರಿಕೆ ಕೊಡಲಿಲ್ಲ. ಸುದೀಪ್ ಸರ್ ಮಾತ್ರ ಮಾತನಾಡಿ ಅಲ್ಲಿಗೆ ಬಿಟ್ಟರು ಎಂದು ಕುಶಾಲ ಹೇಳಿದ್ದಾರೆ.
ಕೂಡಲೇ ಗಿಲ್ಲಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬರಬೇಕು ಎಂದು ನಾನು ಹೇಳಲ್ಲ. ಆದರೆ ಆತನಿಗೆ ತನ್ನ ತಪ್ಪು ಗೊತ್ತಾಗಬೇಕು. ಗಿಲ್ಲಿ ಟಾಂಗ್ ಕೊಡುತ್ತಾ ಕಾಮಿಡಿ ಮಾಡುವುದು ಬಿಟ್ಟು ಸಮಾಜಕ್ಕೆ ಯಾವುದೇ ಸಂದೇಶ ನೀಡಿಲ್ಲ ಎಂದು ಕುಶಾಲ ತಿಳಿಸಿದ್ದಾರೆ. ಆಯೋಗ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಮುಂದಿನ ಕ್ರಮ ಏನಾಗುತ್ತದೆ ನೋಡೋಣ ಎಂದಿದ್ದಾರೆ.
ಈಗಾಗಲೇ ಬಿಗ್‌ಬಾಸ್ -12 ಶೋ 50 ದಿನ ಪೂರೈಸಿ 100ನೇ ದಿನದತ್ತ ಸಾಗುತ್ತಿದೆ. ಗಿಲ್ಲಿ ಜನಪ್ರಿಯತೆ ಕೂಡ ಹೆಚ್ಚುತ್ತಲೇ ಇದೆ. ಕುಶಾಲ ಅವರು ಪ್ರಚಾರಕ್ಕಾಗಿ ಇಂತಹ ಆರೋಪ ಮಾಡುತ್ತಿದ್ದಾರೆ. ಗಿಲ್ಲಿ ನಟ ಸಹಜವಾಗಿ ತಮ್ಮ ಆಟ ಆಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆತ ಟ್ರೋಫಿ ಗೆಲ್ಲೋದು ಗ್ಯಾರಂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











