ಶೋನಿಂದ ಹೊರಬಿದ್ದ ಮೇಲೆ 'ಬಿಗ್ ಬಾಸ್; ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಸ್ಫರ್ಧಿ..!
ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮದ ಮೇಲೆ ಪ್ರಕರಣ ದಾಖಲಿಸಲು ಬಿಗ್ ಬಾಸ್‌ನ ಸ್ಫರ್ಧಿಯೊಬ್ಬರು ಮುಂದಾಗಿದ್ದಾರೆ ಅನ್ನುವುದು ಈ ಕ್ಷಣದ ಬ್ರೇಕಿಂಗ್ ನ್ಯೂಸ್.
ಹೌದು, ಅಸಲಿಗೆ ಬಿಗ್ ಬಾಸ್ ಹೇಗೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರ ಪಾಲಿಗೆ ಎರಡನೇ ಮನೆಯೋ ಅದೇ ರೀತಿ ಬಾಲಿವುಡ್‌ನ ಬ್ಯಾಚುಲರ್ ಸಲ್ಮಾನ್ ಖಾನ್ ಅವರಿಗೆ ಕೂಡ ಬಿಗ್ ಬಾಸ್ ಎರಡನೇ ಮನೆ. ಕಳೆದ 18 ವರ್ಷದಿಂದ ದಣಿಯದೇ ಈ ಕಾರ್ಯಕ್ರಮವನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಇಂತಹ ಬಿಗ್ ಬಾಸ್ ವಿರುದ್ಧ ಈಗ ಹಿಂದಿಯಲ್ಲಿ ಸ್ಫರ್ಧಿಯೊಬ್ಬರು ತಿರುಗಿ ಬಿದ್ದಿದ್ದಾರೆ. ಆ ಸ್ಫರ್ಧಿಯ ಹೆಸರು ಸಾರಾ ಅರ್ಫೀನ್ ಖಾನ್.

ನಟಿಯಾಗಿ ನಿರೂಪಕಿಯಾಗಿ ಗಮನ ಸೆಳೆದ ಸಾರಾ ಮೊನ್ನೆ ಮೊನ್ನೆ ವಿವಾದವನ್ನು ಮಾಡಿಕೊಂಡು ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ. ಟಾಸ್ಕ್ ಸಮಯದಲ್ಲಿ ತಾವು ಕೆಳಗೆ ಬೀಳಲು ಕರಣ್ ವೀರ್ ಮೆಹ್ರಾ ಕಾರಣವೆಂದು ಆರೋಪವನ್ನು ಮಾಡಿದ್ದಾರೆ. ಸ್ಫರ್ಧಿಗಳನ್ನು ತಳ್ಳಾಡುವ ಸಮಯದಲ್ಲಿ ಕರಣ್ ಮಧ್ಯ ಪ್ರವೇಶಿಸಿದ್ದಕ್ಕೆ ನಾನು ಕೆಳಗೆ ಬಿದ್ದಿದ್ದು ಎಂದು ಆಕ್ರೋಶವನ್ನು ಕೂಡ ಸಾರಾ ಹೊರ ಹಾಕಿದ್ದಾರೆ. ಆದರೂ ಕೂಡ ಸಾರಾ ಅವರನ್ನು ಮನೆಯಾಚೆ ಕಳುಹಿಸಲಾಗಿದೆ.
ಇದರಿಂದ ಕೆರಳಿ ಕೆಂಡವಾಗಿರುವ ಸಾರಾ ಅರ್ಫೀನ್ ಖಾನ್ ಈಗ ಬಿಗ್ ಬಾಸ್ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ಧಾರೆ. ಕರಣ್ ನನ್ನ ಮೇಲೆ ಕೈ ಮಾಡಿದ್ದಾನೆ. ಆತನ ಮೇಲೆ ಬಿಗ್ ಬಾಸ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾನು ನನ್ನ ಲಾಯರ್ ಸಂಪರ್ಕ ಮಾಡುತ್ತೇನೆ' ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ ನ ಇತಿಹಾಸದಲ್ಲಿಯೇ ಈ ರೀತಿಯ ಮಾತುಗಳನ್ನು ಯಾರು ಆಡಿಲ್ಲ. ಬಿಗ್ ಬಾಸ್‌ಗೆ ಬೆದರಿಕೆಯನ್ನು ಕೂಡ ಯಾರು ಹಾಕಿಲ್ಲ. ಆದರೆ, ಸಾರಾ ಅರ್ಫೀನ್ ಖಾನ್ ಬಿಗ್ ಬಾಸ್‌ಗೆ ಬೆದರಿಕೆಯನ್ನು ಹಾಕಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ವಿಚಾರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ಸಾರಾ ಅರ್ಫೀನ್ ಖಾನ್ ಬಿಗ್ ಬಾಸ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗುತ್ತಾರಾ ಅಥವಾ ಇದೆಲ್ಲ ಪಬ್ಲಿಸಿಟಿ ಗಿಮಿಕ್ಕಾ ಎಂದು ಚರ್ಚೆಯನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ.
ಇನ್ನು ಸುದೀಪ್ ಅವರಂತೆಯೇ ಸಲ್ಮಾನ್ ಖಾನ್ ಕೂಡ ಈ ತರಹದ ಪ್ರಕರಣಗಳಲ್ಲಿ ಸ್ಫರ್ಧಿಗಳಿಗೆ ಸರಿಯಾದ ಕ್ಲಾಸ್ ತೆಗೆದುಕೊಂಡ ಉದಾಹರಣೆಗಳಿವೆ. ಈ ಹಿನ್ನೆಲೆ ಸಾರಾ ಅರ್ಫಿನ್ ಖಾನ್ ವಿಚಾರದಲ್ಲಿ ಕೂಡ ಸಲ್ಮಾನ್ ಖಾನ್ ಮಾತನಾಡುತ್ತಾರಾ ಎನ್ನುವ ಪ್ರಶ್ನೆ ಕೂಡ ಈಗ ಅನೇಕರನ್ನು ಕಾಡುತ್ತಿದೆ. ಇಂದಿನ ವಾರಾಂತ್ಯದ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಅವರು ಸಾರಾ ಅರ್ಫಿನ್ ಖಾನ್ ಅವರ ಈ ಬೆದರಿಕೆಗೆ ಉತ್ತರವನ್ನು ಕೊಡಬಹುದು ಎನ್ನುವ ನಿರೀಕ್ಷೆ ಕೂಡ ಅಭಿಮಾನಿಗಳಿಗಿದೆ.


Click it and Unblock the Notifications











