ಬಿಗ್ ಬಾಸ್ ಸ್ಪರ್ಧಿಯ ಮಾಜಿ ಬಾಯ್‌ಫ್ರೆಂಡ್ ಅರೆಸ್ಟ್
ನಮ್ಮ ಸುತ್ತ ಮುತ್ತ ಒಂದಾದ ಮೇಲೊಂದರಂತೆ ಸುಳ್ಳು ಹೇಳಿ, ಮುಖಕ್ಕೆ ಬಣ್ಣ ಹಚ್ಚದೆಯೇ ಒಬ್ಬರಿಗಿಂತ ಒಬ್ಬರು ಅಭಿನಯಿಸುವ ಹಲವಾರು ಜನ ಇರುತ್ತಾರೆ. ಒಂದು ಸುಳ್ಳನ್ನೇ ನಿಜಾ ಎಂದು ಸಾಬೀತು ಮಾಡಲು ಹೋಗಿ ಸುಳ್ಳಿನ ಸರಮಾಲೆಯನ್ನೇ ಪೋಣಿಸುತ್ತಾರೆ. ಸುಳ್ಳು ಹೇಳಿ ಎಷ್ಟೇ ನಂಬಿಕೆಯನ್ನು ಗಳಿಸುವ ಪ್ರಯತ್ನವನ್ನು ಅವರು ಮಾಡಿದರು ಕೂಡ ಒಂದಿಲ್ಲೊಂದು ದಿನ ಮುಖವಾಡ ಕಳಚಿ ಬಿದ್ದೇ ಬೀಳುತ್ತೆ.
ಸುಳ್ಳಿನ ಮೇಲೆ ಕಟ್ಟಿದ ಸೌಧ, ಸುಳಿಗಾಳಿಗೂ ಉರುಳಿ ಬೀಳುತ್ತದೆ ಎನ್ನುವುದು ಕೂಡ ಇವರಿಗೆ ಅರಿವು ಇರುವುದಿಲ್ಲ. ಹೀಗೆ ಸುಳ್ಳಿನ ಕಥೆಗಳನ್ನು ದಿನನಿತ್ಯ ಹೆಣೆಯುವ ವಿಚಿತ್ರವಾದ ಕ್ಯಾರೆಕ್ಟರ್ ಒಂದು ಸದ್ಯ ''ಬಿಗ್ ಬಾಸ್'' ಮನೆಯಲ್ಲಿದೆ. ಆ ವ್ಯಕ್ತಿಯ ಹೆಸರು ತಾನ್ಯಾ ಮಿತ್ತಲ್.

ಐಶಾರಾಮಿ ಮನೆಯಲ್ಲಿ ವಾಸ.. ಕೈಗೊಬ್ಬರು.. ಕಾಲಿಗೊಬ್ಬರು ಆಳು..ಸುತ್ತ ಮುತ್ತ ಒಂದು ಡಜನ್ ಬಾಡಿಗಾರ್ಡ್‌ಗಳು..ನಾನು ನೀರು ಕುಡಿಯುವುದು ಕೂಡ ಬೆಳ್ಳಿ ಬಟ್ಟಲಿನಲ್ಲಿಯೇ.. ಹೀಗೆ ದಿನಾ ''ಬಿಗ್ ಬಾಸ್'' ಮನೆಯಲ್ಲಿ ಪುಂಖಾನುಪುಂಖವಾಗಿ ಪುಂಗುವ ತಾನ್ಯಾ ಮಿತ್ತಲ್ ಈ ಬಾರಿಯ ''ಬಿಗ್ ಬಾಸ್'' ಮನೆಯಿಂದ ಹೊರ ಬರುವುದು ಯಾವಾಗ ಎನ್ನುವುದು ಗೊತ್ತಿಲ್ಲವಾದರು ಸದ್ಯ ಇವರ ಮಾಜಿ ಬಾಯ್‌ಫ್ರೆಂಡ್‌ನ ಪೊಲೀಸರು ಬಂಧಿಸಿದ್ದಾರೆ.
ಹೌದು, ಬಾಲರಾಜ್.. ಹಿಂದಿಯ ''ಬಿಗ್ ಬಾಸ್'' ಸೀಸನ್ 19ರ ಸ್ಫರ್ಧಿ ತಾನ್ಯಾ ಮಿತ್ತಲ್ ಅವರ ಮಾಜಿ ಗೆಳೆಯ. ''ಬಿಗ್ ಬಾಸ್'' ಪ್ರೇಕ್ಷಕರ ಹೃದಯ ಗೆಲ್ಲಲು ಮನೆಯಲ್ಲಿ ಸುಳ್ಳಿನ ಮಹಲನ್ನು ತಾನ್ಯಾ ನಿರ್ಮಾಣ ಮಾಡುತ್ತಿದ್ದಾಗ ಹೊರಗಡೆ ತಾನ್ಯಾ ಅವರ ಜನ್ಮಕುಂಡಲಿಯನ್ನು ಹಂಚಿಕೊಂಡವರು ಈ ಬಾಲರಾಜ್.
ತಾನ್ಯಾ ಹೇಳುತ್ತಿರುವುದೆಲ್ಲವೂ ಸುಳ್ಳು ಅವಳ ಮಾತನ್ನು ನಂಬಬೇಡಿ ಎಂದು ಸಂದರ್ಶನಗಳಲ್ಲಿ ಹೇಳಿದ್ದ ಬಾಲರಾಜ್ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ನೀರು ಕುಡಿಯಲ್ಲ ಎಂದು ಅವಳು ಹೇಳಿದ್ದಾಳೆ. ಆದರೆ ನನ್ನ ಬಳಿ ಇರುವ ಪ್ಲಾಸ್ಟಿಕ್ ಬಾಟಲಿಯಿಂದ ಅವಳು ಹಲವು ಬಾರಿ ನೀರು ಕುಡಿದಿದ್ದಾಳೆ ಎಂದು ಹೇಳಿದ್ದರು.
ಇಂಥಾ ಬಾಲರಾಜ್ ಅವರನ್ನು ಸದ್ಯ ಮುಂಬೈ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ''ಟೆಲ್ಲಿ ಮಸಾಲಾ'' ವರದಿಯನ್ನು ಮಾಡಿದೆ. ಇವರ ಬಂಧನಕ್ಕೆ ನಿಖರವಾದ ಕಾರಣ ಗೊತ್ತಿಲ್ಲವಾದರು ಸದ್ಯ ಬಾಲರಾಜ್ ಅವರ ಬಂಧನದ ಸುದ್ದಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

''ದೈನಿಕ್ ಬಾಸ್ಕರ್'' ವರದಿಯ ಪ್ರಕಾರ ಬಾಲರಾಜ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ಧರ್ಮ ಮತ್ತು ಸಮುದಾಯದ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿದ್ದರು. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.
ಇನ್ನೂ ಬಾಲರಾಜ್ ಕೇವಲ ತಾನ್ಯಾ ಮಿತ್ತಲ್ ಅವರ ಮಾಜಿ ಬಾಯ್‌ಫ್ರೆಂಡ್ ಮಾತ್ರ ಆಗಿರಲಿಲ್ಲ.ನಟಿ ಜೋಯಾ ಖಾನ್ ಅವರ ಮಾಜಿ ಬಾಯ್‌ಫ್ರೆಂಡ್ ಕೂಡ ಹೌದು. ಇತ್ತೀಚೆಗಷ್ಟೇ ಜೋಯಾ ಖಾನ್ ''ಟೆಲಿ ಟಾಕ್''ಗೆ ನೀಡಿದ ಸಂದರ್ಶನದಲ್ಲಿ ಬಾಲರಾಜ್ ಸಿಂಗ್ ವಿರುದ್ದ ಆರೋಪ ಮಾಡಿದ್ದರು. ಬಾಲರಾಜ್ ಸಿಂಗ್‌ನಿಂದ ನಾನು ಮಾನಸಿಕ ಮತ್ತು ದೈಹಿಕ ಹಿಂಸೆ ಅನುಭವಿಸಿದ್ದೇನೆ ಎಂದು ಹೇಳಿದ್ದ ಜೋಯಾ ಖಾನ್ ಆತ ನನಗೆ ಬೆದರಿಕೆ ಹಾಕಿದ್ದ. ಇಷ್ಟೇ ಅಲ್ಲ ನನ್ನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಕೂಡ ಬೆದರಿಸಿದ್ದ ಎಂದು ಹೇಳಿದ್ದರು. ಅವನಿಂದ ತೀವ್ರ ಹಿಂಸೆ, ನೋವು ಅನುಭವಿಸಿದ್ದೇನೆ ಎಂದು ಕೂಡ ಹೇಳಿದ್ದರು.
ಈ ಹಿನ್ನೆಲೆ ಬಾಲರಾಜ್ ಸಿಂಗ್ ವಿರುದ್ದ ಜೋಯಾ ಖಾನ್ ಕೂಡ ದೂರು ನೀಡುವ ಸಾಧ್ಯತೆ ಇದೆ, ಹೀಗಾಗಿಯೇ ಬಾಲರಾಜ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎನ್ನುವ ಅನುಮಾನ ಸದ್ಯ ಹಲವರಲ್ಲಿದೆ. ಅಂದ್ಹಾಗೇ ಬಾಲರಾಜ್ ಸಿಂಗ್ ಅವರನ್ನು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಳುಹಿಸುವ ಉದ್ದೇಶ ಕಾರ್ಯಕ್ರಮದ ಆಯೋಜಕರಿಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈಗ ಬಾಲರಾಜ್ ಸಿಂಗ್ ಅವರನ್ನು ಅರೆಸ್ಟ್ ಮಾಡಲಾಗಿದೆ.


Click it and Unblock the Notifications











