ಈ ಬಾರಿ ಬಿಗ್ ಬಾಸ್ ಮನೆಗೆ ಹೋಗ್ತಾರಾ ಈ ಖ್ಯಾತ ಕಿರುತೆರೆ ನಟಿ ?
ಪ್ರತಿ ವರ್ಷ ಬಿಗ್ ಬಾಸ್ ಸುತ್ತ ಮುತ್ತ ಕುತೂಹಲ ಮನೆ ಮಾಡುತ್ತೆ. ಈ ವರ್ಷ ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಕಾರ್ಯಕ್ರಮ ಶುರುವಾಗುವ ಒಂದೆರಡು ತಿಂಗಳ ಮುನ್ನವೇ ಸ್ಪರ್ಧಿಗಳ ಕುರಿತು ಚರ್ಚೆ ಶುರುವಾಗುತ್ತೆ. ಅಂತೆ-ಕಂತೆಯ ಸಂತೆಯಲ್ಲಿ ಹಲವಾರು ಜನರ ಹೆಸರು ಕೇಳಿ ಬರುತ್ತೆ.
ಆ ಭಾಷೆ ಈ ಭಾಷೆ ಅಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈ ಕುರಿತು ಪ್ರತಿ ವರ್ಷ ಚರ್ಚೆ ನಡೆಯುತ್ತಲೇ ಇರುತ್ತೆ. ಆ ಪೈಕಿ ಕೆಲವರು ನೇರಾನೇರವಾಗಿಯೇ ತಮ್ಮ ಕುರಿತು ಹರಡಿರುವ ಸುದ್ದಿಗೆ ಪ್ರತಿಕ್ರಿಯೆಯನ್ನು ಕೊಡುತ್ತಾರೆ. ಕೆಲವರು ಮೌನಕ್ಕೆ ಶರಣಾಗುವ ಮೂಲಕ ಅನುಮಾನವನ್ನು ಹೆಚ್ಚಿಸುತ್ತಾರೆ. ಉದಾಹರಣೆಗೆ ರತಿ ಪಾಂಡೆ.

ಹೌದು ರತಿ ಪಾಂಡೆ. ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಹರ್ ಘರ್ ಕುಚ್ ಕೆಹ್ತಾ ಹೈ'' .. ''ಹಿಟ್ಲರ್ ದೀದಿ''.. ''ಶಾದಿ ಮುಬಾರಕ್'' .. ''ರಾತ್ ಹೋನೆ ಕೋ ಹೈ''.. ಹೀಗೆ ಹಲವು ಧಾರಾವಾಹಿಯಲ್ಲಿ ಕಾಣಿಸಿಕೊಂಡ ರತಿ ಪಾಂಡೆ ಅವರಿಗೆ ''ಮೀಲೆ ಜಬ್ ಹಮ್ ತುಮ್'' ಧಾರಾವಾಹಿ ಹಣ ಮತ್ತು ಕೀರ್ತಿಯನ್ನು ತಂದು ಕೊಟ್ಟಿತ್ತು. ಇವತ್ತು ಕೂಡ ಅನೇಕರು ಇವರನ್ನು ಈ ಧಾರಾವಾಹಿಯಿಂದಲೇ ಗುರುತಿಸುತ್ತಾರೆ.
ಇಂಥಾ ರತಿ ಪಾಂಡೆ ಸದ್ಯ ಹಿಂದಿಯ ಬಿಗ್ ಬಾಸ್ ಸೀಸನ್ 19ರಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ಬಿಗ್ ಬಾಸ್ ಮನೆಗೆ ಬನ್ನಿ ಎಂದು ಆಯೋಜಕರು ಈ ಚೆಲುವೆಗೆ ಆಮಂತ್ರಣ ನೀಡಿದ್ದಾರೆ ಎಂದು ''ಫಿಲ್ಮಿಬೀಟ್ ಹಿಂದಿ''ಯಲ್ಲಿ ವರದಿಯಾಗಿದೆ. ''ನ್ಯೂಸ್ 24'' ಕೂಡ ರತಿ ಪಾಂಡೆಗೆ ಬಿಗ್ ಬಾಸ್ ಕಡೆಯಿಂದ ಆಫರ್ ಬಂದಿರುವುದಾಗಿ ವರದಿಯನ್ನು ಮಾಡಿದೆ.
ಸದ್ಯ ಬಿಗ್ ಬಾಸ್ ಜೊತೆ ತಮ್ಮ ಹೆಸರು ತಳುಕು ಹಾಕಿಕೊಂಡಿದ್ದಕ್ಕೆ ರತಿ ಪಾಂಡೆ ಇನ್ನು ಪ್ರತಿಕ್ರಿಯೆಯನ್ನು ನೀಡಿದಿದ್ದರೂ ಕೂಡ ಇವರ ಅಭಿಮಾನಿಗಳು ಸದ್ಯ ಈ ಸುದ್ದಿ ಕೇಳಿ ಖುಷಿಯಾಗಿದ್ದಾರೆ. ರತಿ ಪಾಂಡೆ ಬಿಗ್ ಬಾಸ್ ಮನೆಗೆ ಹೋದರೆ ಗೆಲ್ಲುವುದು ಖಚಿತ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.
ಅಂದ್ಹಾಗೇ ಹೆಚ್ಚು ಕಡಿಮೆ 19 ವರ್ಷಗಳಿಂದ ಕಿರುತೆರೆಯಲ್ಲಿ ಕೆಲಸ ಮಾಡಿಕೊಂಡು ಬಂದಿರುವ ರತಿ ಪಾಂಡೆ, ವೆಬ್ ಸೀರಿಸ್‌ನಲ್ಲಿ ಕೂಡ ಅಭಿನಯಿಸಿದ್ದಾರೆ. ಸದ್ಯ ಹಿಂದಿ ಕಿರುತೆರೆಯಿಂದ ಅಂತರ ಕಾಪಾಡಿಕೊಂಡಿರುವ ರತಿ ಪಾಂಡೆ ಭೋಜ್‌ಪುರಿ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇವರ ಚೊಚ್ಚಲ ಭೋಜ್‌ಪುರಿ ಚಿತ್ರ ''ರಂಗ್ ದೇ ಬಸಂತಿ'' ಕಳೆದ ವರ್ಷ ತೆರೆಗೆ ಬಂದಿತ್ತು. ಕೇಸರಿ ಲಾಲ್ ಯಾದವ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು.

ಹೀಗೆ ಕಿರುತೆರೆಯಿಂದ ಸದ್ಯ ಬೆಳ್ಳಿತೆರೆಗೆ ಶಿಫ್ಟ್ ಆಗಿರುವ ರತಿ ಪಾಂಡೆ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ನಿಜಕ್ಕೂ ರತಿ ಪಾಂಡೆ ಬಿಗ್ ಬಾಸ್ ಸ್ಫರ್ಧಿಯಾಗುತ್ತಾರಾ ಎನ್ನುವುದಕ್ಕೆ ಉತ್ತರ ಶೀಘ್ರದಲ್ಲಿಯೇ ಸಿಗಲಿದೆ.
ಇನ್ನುಳಿದಂತೆ ಈ ಬಾರಿಯ ಬಿಗ್ ಬಾಸ್ ಆಗಸ್ಟ್ 30ರಿಂದ ಶುರುವಾಗಲಿದೆ ಎನ್ನುವ ಮಾತು ಹಿಂದಿ ಕಿರುತೆರೆಯಲ್ಲಿ ಕೇಳಿ ಬರುತ್ತಿದೆ. ಎಂದಿನಂತೆ ಸಲ್ಮಾನ್ ಖಾನ್ ಈ ಬಾರಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲಿದ್ದು ಮೂರು ತಿಂಗಳ ಕಾರ್ಯಕ್ರಮಕ್ಕೆ 150 ಕೋಟಿ ಸಂಭಾವನೆಯನ್ನು ಸಲ್ಮಾನ್ ಪಡೆದಿದ್ದಾರೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್'' ವರದಿಯನ್ನು ಮಾಡಿದೆ. ಕೇವಲ ಸೆಲೆಬ್ರೀಟಿಗಳಿಗೆ ಮಾತ್ರ ಈ ಬಾರಿ ಮನೆಯಲ್ಲಿ ಪ್ರವೇಶ ಇದೆ. ಸಾಮಾನ್ಯ ಜನರನ್ನು ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್‌ಗಳನ್ನು ಹಿಂದಿ ಬಿಗ್ ಬಾಸ್ ಮನೆಯಿಂದ ಈ ಬಾರಿ ದೂರ ಇಡಲಾಗಿದೆ ಎಂದು ಕೂಡ ವರದಿಯಾಗಿದೆ.


Click it and Unblock the Notifications











