ಹಳಸಿದ ಅನ್ನ,ಪರ ಪುರುಷರ ಜೊತೆ ಒಂದೇ ಮನೆಯಲ್ಲಿ ವಾಸ ; ಬಿಗ್ ಬಾಸ್ ವಿರುದ್ಧ ಕೆರಳಿ ಕೆಂಡವಾದ ಖ್ಯಾತ ನಟಿ
ವರ್ಷಾನುವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಆಚೀಚೆ, ಈ ಬಾರಿ ಮನೆಯಲ್ಲಿ ಯಾರನ್ನೆಲ್ಲ ಕಣ್ತುಂಬಿಕೊಳ್ಳಬಹುದು ಎನ್ನುವ ಚಿಂತೆ ಕೆಲವರನ್ನು ಕಾಡಲು ಶುರುಮಾಡುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲು ಇನ್ನೂ ಒಂದೆರಡು ತಿಂಗಳು ಬಾಕಿ ಇರುವಾಗಲೇ ಕೆಲ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸದ್ದು ಮಾಡಲು ಶುರು ಮಾಡುತ್ತವೆ. ಈ ಬಾರಿ ಕೂಡ ಇದೇ ತರಹದ ವಾತಾವರಣ ಇದೆ.
ಕೇವಲ ಕನ್ನಡ ಮಾತ್ರ ಅಲ್ಲ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಬಹುದು ಎನ್ನುವ ಚರ್ಚೆ ಶುರುವಾಗಿದೆ. ಹಲವಾರು ಸ್ಟಾರ್‌ಗಳ ಹೆಸರು ಕೂಡ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿವೆ. ಆ ಪೈಕಿ.. ಕೆಲವರು ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇನ್ನು ಕೆಲವರು ಈ ಸುದ್ದಿಯನ್ನು ಕೇಳಿ ಓದಿ ಕೆಂಡ ಕಾರುತ್ತಿದ್ದಾರೆ. ಉದಾಹರಣೆಗೆ ತನುಶ್ರೀ ದತ್ತಾ .

ಹೌದು, ತನುಶ್ರೀ ದತ್ತಾ..'ಆಶಿಕ್ ಬನಾಯಾ ಆಪ್ನೇ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಚೆಲುವೆ. ಆ ನಂತರ ಚಿತ್ರಕ್ಕಿಂತ ವಿವಾದಗಳಿಂದನೇ ಸುದ್ದಿಯಾದ ತನುಶ್ರೀ 2018ರ ಆಚೀಚೆ ನಾನಾ ಪಾಟೇಕರ್ ಮೇಲೆ ಮೀಟೂ ಆರೋಪ ಮಾಡಿದ್ದರು. ಹಾಡೊಂದರ ಚಿತ್ರೀಕರಣ ಸಮಯದಲ್ಲಿ 'ನಾನಾ ಪಾಟೇಕರ್' ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಹೇಳಿದ್ದರು. ತಮ್ಮ ಈ ಹೇಳಿಕೆಯಿಂದ ತನುಶ್ರೀ ದತ್ತಾ ಆ ಕಾಲದಲ್ಲಿ ದೊಡ್ಡ ಸಂಚಲನವೇ ಸೃಷ್ಟಿ ಮಾಡಿದ್ದರು.
ಇಂಥಾ ತನುಶ್ರೀ ದತ್ತಾ ಅವರನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಕಳುಹಿಸುವ ಆಸೆ ಹಲವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ತನುಶ್ರೀ ದತ್ತಾ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿಯನ್ನು ಮುಂಬೈನಲ್ಲಿ ಹಲವರು ಮಾಡಿದ್ದಾರೆ. ತನುಶ್ರೀ ದತ್ತಾ ಬಿಗ್ ಬಾಸ್ ಮನೆಗೆ ಹೋಗುವುದು ಖಚಿತ ಎನ್ನುವ ಭವಿಷ್ಯವಾಣಿಯನ್ನು ಕೂಡ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತನುಶ್ರೀ ದತ್ತಾ ಈಗ ಕೆಂಡ ಕಾರಿದ್ಧಾರೆ.

ಹೌದು, ಈ ಕುರಿತು ''ನ್ಯೂಸ್ 9''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ತನುಶ್ರೀ ದತ್ತಾ... ಅದ್ಯಾಕೋ ಗೊತ್ತಿಲ್ಲ. ಪ್ರತಿವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಆಚೀಚೆ ನನ್ನ ಹೆಸರು ಕೇಳಿ ಬರಲು ಶುರುವಾಗುತ್ತೆ ಎಂದು ಹೇಳಿದ್ದಾರೆ. ಹಲವು ಜನ ನನಗೆ ಸಂಪರ್ಕ ಮಾಡ್ತಾರೆ, ನಿಮ್ಮ ಜೊತೆ ಒಂದು ಪ್ರಾಜೆಕ್ಟ್ ಮಾಡಬೇಕಿದೆ ಎನ್ನುತ್ತಾರೆ.. ಆದರೆ ಅಲ್ಲಿ ಹೋಗಿ ಅವರನ್ನು ಭೇಟಿಯಾದಾಗ ಅವರು ನನ್ನ ಕರೆಯುತ್ತಿರುವುದು ಬಿಗ್ ಬಾಸ್‌ಗೆ ಎಂದು ಗೊತ್ತಾಗುತ್ತೆ ಎಂದಿರುವ ತನುಶ್ರೀ ಪ್ರತಿ ವರ್ಷ ಈ ವ್ಯಕ್ತಿಗಳು ನನ್ನ ಕಾಡಲು ಶುರು ಮಾಡುತ್ತಾರೆ ಆಗ ಅವರನ್ನು ನಾನು ಅನಿವಾರ್ಯವಾಗಿ ಬ್ಲಾಕ್ ಮಾಡಬೇಕಾಗುತ್ತೆ ಎಂದು ಹೇಳಿದ್ದಾರೆ.
ಅವರು ನನ್ನನ್ನೂ ಅಹಂಕಾರಿ ಎಂದುಕೊಂಡರು ಪರವಾಗಿಲ್ಲ ಆದರೆ ನಾನು ಆ ವಿಷ ಕಕ್ಕುವ ಕಾರ್ಯಕ್ರಮಕ್ಕೆ ಹೋಗಲು ಬಯಸುವುದಿಲ್ಲ ಎಂದು ಹೇಳಿರುವ ತನುಶ್ರೀ ಹಳಸಿದ ಅಥವಾ ತಂಗಳ ಅನ್ನ/ಊಟ ತಿನ್ನುವುದು.. ಒಂದೇ ಮನೆಯಲ್ಲಿ ಪರ ಪುರುಷರ ಜೊತೆ ವಾಸ ಮಾಡುವುದು.. ಎಲ್ಲಕ್ಕಿಂತ ಹೆಚ್ಚಾಗಿ ಪುರುಷರ ಜೊತೆ ಬಾತ್‌ರೂಮ್ ಹಂಚಿಕೊಳ್ಳುವುದು.. ಇದೆಲ್ಲ ನನ್ನಿಂದ ಸಾಧ್ಯ ಇಲ್ಲ ಅವರ ಟಿಆರ್‌ಪಿಗಾಗಿ ನಾನು ಈ ಎಲ್ಲಾ ವಿಚಾರವನ್ನು ಒಪ್ಪುವುದು ಇಲ್ಲ ಎಂದು ಹೇಳಿದ್ದಾರೆ. ಈ ಮೂಲಭೂತ ಅಂಶವನ್ನು ಯಾರಾದರೂ ಅರ್ಥ ಮಾಡಿಕೊಳ್ಳದಿದ್ದರೆ ಅವರಷ್ಟು ಮೂರ್ಖರು ಬೇರೆ ಯಾರು ಇಲ್ಲ ಎಂದು ಕೂಡ ಹೇಳಿದ್ದಾರೆ.
ಮುಂದುವ್ರೆದು ಬಿಗ್ ಬಾಸ್ ಚಿತ್ರರಂಗದ ಪರ್ಯಾಯ ಅಲ್ಲ, ಬದುಕಲು ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕು ಅಂತೇನು ಇಲ್ಲ.. ನಾನು ಮ್ಯೂಸಿಕ್ ವಿಡಿಯೋಗಳನ್ನು ಮಾಡುತ್ತೇನೆ.. ಜಾಹೀರಾತುಗಳನ್ನು ಮಾಡುತ್ತೇನೆ.. ಸಿನಿಮಾ ಅಥವಾ ಧಾರಾವಾಹಿಯಲ್ಲಿ ಅತಿಥಿಯ ಪಾತ್ರವನ್ನು ಬೇಕಿದ್ದರೂ ಮಾಡುತ್ತೇನೆ ಆದರೆ ಬಿಗ್ ಬಾಸ್‌ನಲ್ಲಿ ಎಂದೆಂದೂ ಭಾಗವಹಿಸುವುದಿಲ್ಲ ಎಂದು ಹೇಳಿರುವ ತನುಶ್ರೀ ಎಲ್ಲಿಯೂ ಕೆಲಸ ಸಿಗದಿದ್ದರೆ ನಾನು ಮದುವೆಯಾಗುತ್ತೇನೆ.. ಮಕ್ಕಳನ್ನು ಮಾಡಿಕೊಂಡು ಅವರ ಜೊತೆ ನೆಮ್ಮದಿಯಿಂದ ಇರುತ್ತೇನೆ.. ಆಧ್ಯಾತ್ಮಿಕ ಚಿಂತನೆ ಮಾಡುತ್ತೇನೆ ಆದರೆ ಬಿಗ್ ಬಾಸ್‌ನಲ್ಲಿ ಕಾಲಿಡಲ್ಲ ಎಂದು ಪುನರುಚ್ಚಿಸಿದ್ದಾರೆ.


Click it and Unblock the Notifications











