ಬಿಗ್ ಬಾಸ್ ಮನೆಯಲ್ಲಿ ಡಬಲ್ ಶಾಕ್, ಒಬ್ಬರಲ್ಲ.. ಇಬ್ಬರು ಔಟ್
ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಜ್ವರ ಹರಡಿದೆ. ಮಲಯಾಳಂನಲ್ಲಿ ''ಬಿಗ್ ಬಾಸ್''ನ ಪ್ರಯಾಣ ಬಹುತೇಕ ಅರ್ಧ ಮುಕ್ತಾಯವಾಗಿದ್ದು, ತೆಲುಗಿನಲ್ಲಿ ಕೂಡ ''ಬಿಗ್ ಬಾಸ್'' ಶುರುವಾಗಿ ಒಂದು ವಾರವಾಗಿದೆ.
ಹಿಂದಿಯಲ್ಲಿ ಕೂಡ ''ಬಿಗ್ ಬಾಸ್'' ಶುರುವಾಗಿದ್ದು ಕನ್ನಡದಲ್ಲಿ ಇದೇ ಸೆಪ್ಟೆಂಬರ್ 27ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಇನ್ನು ''ಬಿಗ್ ಬಾಸ್'' ಹಲವರ ಕನಸು. ಈ ಹಿನ್ನೆಲೆ ಅವಕಾಶ ಸಿಕ್ಕ ತಕ್ಷಣವೇ ಎಲ್ಲಾ ಭಾಷೆಯಲ್ಲಿ ಕೂಡ ಅನೇಕರು ''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಅತ್ಯುತ್ಸಾಹದಿಂದ ಹೋಗುತ್ತಾರೆ.

ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.
ಹೀಗಾಗಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಹೀಗೆ ಹಿಂದಿಯ ''ಬಿಗ್ ಬಾಸ್'' ಮನೆಯಿಂದ ಈ ವಾರ ಒಬ್ಬರಲ್ಲ ಇಬ್ಬರನ್ನು ಹೊರಗಡೆ ಕಳುಹಿಸಲಾಗಿದೆ. ಈ ಮೂಲಕ ಮನೆಯಲ್ಲಿದ್ದ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೆ ಡಬಲ್ ಶಾಕ್‌ನ್ನು ಬಿಗ್ ಬಾಸ್ ನೀಡಿದೆ.
ಹೌದು, ಈ ಬಾರಿ ಹಿಂದಿ ''ಬಿಗ್ ಬಾಸ್'' ಮನೆಯಲ್ಲಿ ಪೋಲೆಂಡ್ ಮೂಲದ ನಟಿ ಮತ್ತು ಡ್ಯಾನ್ಸರ್ ಆದ ನಟಾಲಿಯಾ ಜಾನೋಜೆಕ್, ಯೂಟ್ಯೂಬರ್ ಮೃದುಲ್ ತಿವಾರಿ, ಡ್ಯಾನ್ಸರ್ ಕೊರಿಯೋಗ್ರಾಫರ್ ಆವೇಜ್ ದರ್ಬಾರ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ನಗ್ಮಾ ಮಿರಜಕರ್ ಅವರು ಡೇಂಜರ್ ಝೋನ್‌ನಲ್ಲಿದ್ದರು.
ಈ ನಾಲ್ವರ ಪೈಕಿ ಮೃದುಲ್ ತಿವಾರಿ ಮನೆಯಾಚೆ ಹೊರ ಹೋಗುತ್ತಾರೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ.. ಈ ವಾರ ಸಲ್ಮಾನ್ ಖಾನ್ ಬದಲು ಕಾರ್ಯಕ್ರಮದ ನಿರೂಪಣೆ ಮಾಡಲು ಬಂದಿದ್ದ ಫರಾ ಖಾನ್ ಮೊದಲು ನಟಾಲಿಯಾ ಅವರನ್ನು ಮನೆಯಾಚೆ ಹೋಗುವಂತೆ ಹೇಳಿದರು.

ನಟಾಲಿಯಾ ನಿರ್ಗಮನದ ಸುದ್ದಿಯನ್ನು ಕೇಳಿ ಮನೆಯ ಮಂದಿಯೆಲ್ಲಾ ಶಾಕ್ ಆಗಿದ್ದ ಸಮಯದಲ್ಲಿಯೇ ಫರಾ ಖಾನ್ ಮತ್ತೊಂದು ಬಾಂಬ್ ಸಿಡಿಸಿದರು. ನಟಾಲಿಯಾ ಜೊತೆಯಲ್ಲಿಯೇ ಅತಿ ಕಡಿಮೆ ಮತಗಳನ್ನು ಪ್ರೇಕ್ಷಕರಿಂದ ಪಡೆದ ನಗ್ಮಾ ಅವರನ್ನು ಕೂಡ ಮನೆಯಿಂದ ಹೊರ ದಬ್ಬಿದರು. ಈ ಮೂಲಕ ''ಬಿಗ್ ಬಾಸ್'' ಮನೆಗೆ ಮತ್ತು ''ಬಿಗ್ ಬಾಸ್'' ಪ್ರೇಕ್ಷಕರಿಗೆ ಡಬಲ್ ಶಾಕ್ ನೀಡಿದರು ಫರಾ ಖಾನ್.
ಇನ್ನು ''ಬಿಗ್ ಬಾಸ್'' ಮನೆಯಲ್ಲಿ ಆವೇಜ್ ಖಾನ್ ಮತ್ತು ನಗ್ಮಾ ನಡುವೆ ಪ್ರೇಮಾಂಕುರವಾಗಿತ್ತು. ಮಂಡಿಯೂರಿ ಆವೇಜ್ ಖಾನ್ ತೀರಾ ಇತ್ತೀಚೆಗಷ್ಟೇ ಪ್ರಪೋಸ್ ಕೂಡ ಮಾಡಿದ್ದರು. ಈ ಹಿನ್ನೆಲೆ ಮನೆಯಿಂದ ನಗ್ಮಾ ನಿರ್ಗಮನವಾಗುತ್ತಿರುವ ಸುದ್ದಿಯನ್ನು ಕೇಳಿ ಆವೇಜ್ ಖಾನ್ ಗಳಗಳನೆ ಕಣ್ಣೀರು ಹಾಕಿದರು. ಮನೆಯಲ್ಲಿ ಅವಳಿರದೇ ನಾನು ಇರಲು ಸಾಧ್ಯ ಇಲ್ಲ ಎಂದು ಅಲವತ್ತುಕೊಂಡರು. ಆ ನಂತರ ಆವೇಜ್ ಖಾನ್ ಅವರನ್ನು ಸಮಾಧಾನ ಮಾಡಿದ ನಗ್ಮಾ ಹೊರಗಡೆ ಹೋಗಿ ನಾನು ಮದುವೆಯ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳಿ ಆವೇಜ್ ಕೆನ್ನೆಗೆ ಮುತ್ತಿಟ್ಟು ಕಣ್ಣೀರು ಹಾಕುತ್ತಾ ಹೊರ ನಡೆದರು.
ಸದ್ಯ ಮನೆಯಿಂದ ನಗ್ಮಾ ಮತ್ತು ನಟಾಲಿಯಾ ಹೊರ ಬಂದಿದ್ದು ಮನೆಯಲ್ಲಿ ಇನ್ನೂ 17 ಜನ ಇದ್ದಾರೆ. ಈ 17 ಜನರಲ್ಲಿ ಕೊನೆವರೆಗೆ ಯಾರೆಲ್ಲಾ ಉಳಿಯುತ್ತಾರೆ. ಯಾರು ಟ್ರೋಪಿ ಮುಡಿಗೇರಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications