ಗಿಲ್ಲಿ ಒಳ್ಳೆಯವ್ನು ಅಂತ ನಂಗೆ ಯಾವತ್ತೂ ಅನ್ನಿಸ್ಲಿಲ್ಲ- ಅಶ್ವಿನಿ ಗೌಡ
ಬಿಗ್‌ಬಾಸ್ ಶೋ ಮುಗಿದು ವಾರ ಕಳೆಯುತ್ತಾ ಬಂತು. ಆದರೂ ಗೆದ್ದವರ ಸಂಭ್ರಮಾಚರಣೆ, ಸೋತವರ ಬೇಸರದ ಮಾತುಗಳು ಮುಂದುವರೆದಿದೆ. ಮುಖ್ಯವಾಗಿ ಅಶ್ವಿನಿ ಗೌಡ ಶೋ ಫಲಿತಾಂಶದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ವೋಟ್‌ಗಳ ಸಂಖ್ಯೆ ಹೊರಗಿಟ್ಟರೆ ನಾನೇ ಗೆಲ್ಲೋದು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ದೊಡ್ಮನೆಯಲ್ಲಿ ನೋಡಿದಂತೆ ಯಾರ್ಯಾರ ಸ್ವಭಾವ ಹೇಗೆ ಎನ್ನುವ ಪ್ರಶ್ನೆಗೆ ತಮ್ಮದೇ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. "ಗಿಲ್ಲಿ ಒಳ್ಳೆಯವ್ನು ಅಂತ ನಂಗೆ ಯಾವತ್ತೂ ಅನ್ನಿಸ್ಲಿಲ್ಲ" ಎಂದು ಅಶ್ವಿನಿ ಹೇಳಿರುವುದು ವೈರಲ್ ಆಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಇಬ್ಬರ ನಡುವೆ ಸಾಕಷ್ಟು ಸಂಘರ್ಷ ನಡೆದಿತ್ತು. ನನ್ನ ಮೇಲೆ ಆರೋಪ ಮಾಡುತ್ತಾ, ಕಿರಿಕ್ ಮಾಡುತ್ತಲೇ ಗಿಲ್ಲಿ ಗೆದ್ದುಬಿಟ್ಟ. ಗಿಲ್ಲಿ ಬಡವ ಅಲ್ಲ, ಬಡವನ ರೀತಿ ನಾಟಕ ಮಾಡಿ ಗೆದ್ದಿದ್ದಾನೆ ಎಂದು ಕೂಡ ಅಶ್ವಿನಿ ಹೇಳಿರುವುದು ವೈರಲ್ ಆಗ್ತಿದೆ.

ಗಿಲ್ಲಿ ನಟನ ಕ್ರೇಜ್ ಹೇಗಿದೆ? ಎಷ್ಟು ದೊಡ್ಡಮಟ್ಟದಲ್ಲಿ ವೋಟ್ ಮಾಡಿ ಆತನನ್ನು ವೀಕ್ಷಕರು ಗೆಲ್ಲಿಸಿದ್ದಾರೆ ಎನ್ನುವುದು ಬಿಗ್‌ಬಾಸ್ ಮನೆ ಒಳಗೆ ಇದ್ದ ಸ್ಪರ್ಧಿಗಳಿಗೆ ಸರಿಯಾಗಿ ಗೊತ್ತಿಲ್ಲ ಅನ್ನಿಸುತ್ತದೆ. ನ್ಯೂಸ್ 18 ಕನ್ನಡ ಸುದ್ದಿ ವಾಹಿನಿ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ಆಡಿರುವ ಮಾತುಗಳು ವೈರಲ್ ಆಗ್ತಿದೆ.
ಯಾವ ಹಂತದಲ್ಲಿ ಗಿಲ್ಲಿ ಒಳ್ಳೆಯವ್ನು ಅನ್ನಿಸಿತು ಎನ್ನುವ ಪ್ರಶ್ನೆಗೆ ಅಶ್ವಿನಿ ಗೌಡ ಉತ್ತರಿಸಿದ್ದಾರೆ. "ಗಿಲ್ಲಿ ಒಳ್ಳೆಯವ್ನು ಅಂತ ನನಗೆ ಅನ್ನಿಸಲೇ ಇಲ್ಲ. ಯಾಕಂದ್ರೆ, ನಾವೆಲ್ಲಾ ಆಟ ಆಡಲು ಅಲ್ಲಿಗೆ ಹೋಗಿದ್ದೆವು. ಆದರೆ ಗಿಲ್ಲಿ ಆಟ ಆಡಲು ಬಂದಿರಲಿಲ್ಲ. ಎಲ್ಲರ ಮನಸ್ಥಿತಿ ಓದಿಕೊಂಡು ಆಟ ಆಡುವ ಹಾದಿ ಹೇಗೆ ತಪ್ಪಿಸಬೇಕು, ಹೇಗೆ ಹಾಳು ಮಾಡಬೇಕು ಎಂದು ಗಿಲ್ಲಿ ನೋಡ್ತಿದ್ದ. ಅದು ಕೂಡ ಆಟದ ಒಂದು ಭಾಗ, ನೇರನೇರಾ ಆಟ ಆಡುವುದು ಬೇರೆ, ಮತ್ತೊಬ್ಬರ ಆಟ ಕುಗ್ಗಿಸಿ ತನ್ನ ಆಟ ಆಡುವುದು ನನ್ನ ಬೇಳೆ ಬೇಯಿಸಿಕೊಳ್ಳುವುದು ಬೇರೆ. ಟಾಸ್ಕ್, ಮನೆ ಕೆಲಸದ ವಿಚಾರದಲ್ಲಿ ಗಿಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಬರೀ ತಮಾಷೆ ಮಾಡ್ಕೊಂಡಿದ್ದ" ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿ "ಇದು ಕಾಮಿಡಿ ಶೋ ಅಲ್ಲ. ವ್ಯಕ್ತಿತ್ವಗಳ ಆಟ. ಟಾಸ್ಕ್ ಅಂದ್ರೆ ನಾವು ಯುದ್ಧಭೂಮಿಗೆ ಇಳಿಯುತ್ತಿದ್ದೆವು. ಎಲ್ಲವೂ ಕಾಮಿಡಿ ಆಗಲ್ಲ. ಕೆಲವೊಮ್ಮೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅದು ಗಿಲ್ಲಿಯಿಂದ ಆಗಲಿಲ್ಲ" ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂರ್ನಾಲ್ಕು ದಿನಗಳಲ್ಲೇ ಗಿಲ್ಲಿ ಹಾಗೂ ಅಶ್ವಿನಿ ನಡುವೆ ಸಂಘರ್ಷ ಶುರುವಾಗಿತ್ತು. ಅದು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿತ್ತು.
ಬಿಗ್‌ಬಾಸ್ ಶೋ ಮುಗಿದ ಬಳಿಕ ಅಶ್ವಿನಿ ಗೌಡ ಹೇಗೆ ಮಾತನಾಡುತ್ತಾರೆ ಎಂದು ತೋರಿಸುವಂತೆ ಸುದೀಪ್ ಒಮ್ಮೆ ಕೇಳಿದ್ದರು. ಆಗ ಅಶ್ವಿನಿ ರೀತಿ ಇಮಿಟೇಟ್ ಮಾಡಿ ಗಿಲ್ಲಿ ಮಾತನಾಡಿದ್ದರು. ಅಶ್ವಿನಿ ಶೋ ಬಗ್ಗೆ ಹೇಗೆ ಕಾಮೆಂಟ್ ಮಾಡುತ್ತಾರೆ ಎಂದು ವಿವರಿಸಿದ್ದರು. ಈಗ ಆಕೆ ಅದೇ ರೀತಿ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಶ್ವಿನಿ ಗೌಡ ನಟಿಸಿದ್ದಾರೆ. ಕನ್ನಡಪರ ಹೋರಾಟಗಾರ್ತಿಯಾಗಿ ಗುರ್ತಿಸಿಕೊಂಡಿದ್ದಾರೆ. ನಾನು ಬಿಗ್‌ಬಾಸ್ ಶೋ ನೋಡುತ್ತಿರಲಿಲ್ಲ. ಅವಕಾಶ ಬಂದಾಗ ವಿಭಿನ್ನವಾಗಿ ಇರುತ್ತದೆ ಎಂದು ಒಪ್ಪಿಕೊಂಡೆ. ಗಿಲ್ಲಿ ಹಿಂದಿನ ಸೀಸನ್ ಎಲ್ಲಾ ನೋಡಿಕೊಂಡು ಬಂದಿದ್ದ. ಅದು ಆತನಿಗೆ ಪ್ಲಸ್ ಆಯಿತು. ಆದರೂ ನಾನು ಪ್ರಬಲ ಸ್ಪರ್ಧಿಯಾಗಿ ಗುರ್ತಿಸಿಕೊಂಡೆ. ಇಷ್ಟು ಸೀಸನ್‌ಗಳಲ್ಲಿ ನನ್ನಷ್ಟು ಪ್ರಬಲ ಸ್ಪರ್ಧಿ ಇರಲಿಲ್ಲ ಎಂದು ಅಶ್ವಿನಿ ಹೇಳಿದ್ದಾರೆ.


Click it and Unblock the Notifications











