ಮಹಾಮಳೆಗೆ ಹೈರಾಣಾದ ಬಿಗ್ ಬಾಸ್ ಸ್ಫರ್ಧಿ ; ಮನೆಯೊಳಗೆ ನುಗ್ಗಿದ ನೀರು
ಕರುನಾಡಿನಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.50ಕ್ಕಿಂತ ಕಡಿಮೆ ಮಳೆಯಾಗಿದೆ. ಇನ್ನು ಪ್ರತಿ ವರ್ಷ ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಇರುತ್ತೆ.
ಆದರೆ ಈ ವರ್ಷ ಅಲ್ಲಿಯೂ ಕೂಡ ಮಳೆ ಹೆಚ್ಚಿಲ್ಲ. ಈ ಹಿನ್ನೆಲೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ, ಪಕ್ಕದ ಮುಂಬೈನಲ್ಲಿ ಇದಕ್ಕೆ ತದ್ವಿರುದ್ದವಾದ ವಾತಾವರಣ ಇದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಅಲ್ಲಿ ಮಳೆ ಅಬ್ಬರ ಇದೆ. ಅದರಲ್ಲಿಯೂ 24 ಗಂಟೆಯಲ್ಲಿ 100 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಇನ್ನು ಪ್ರಕೃತಿಯ ಮುಂದೆ ಯಾರು ನಿಲ್ಲಲಾರರು. ಪ್ರಕೃತಿಗೆ ಶ್ರೀಮಂತ ಮತ್ತು ಬಡವ ಎಂಬ ಭೇದ ಭಾವ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಅಶ್ನೂರ್ ಕೌರ್ ಅವರ ಮನೆ ಜಲಾವೃತಗೊಂಡಿದೆ. ಬಹುಮಹಡಿ ಕಟ್ಟದಲ್ಲಿದ್ದರೂ ಕೂಡ ಮಳೆರಾಯನಿಂದ ಅಶ್ನೂರ್ ಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಹೌದು, ಅಶ್ನೂರ್ ಕೌರ್.. ಹಿಂದಿ ಕಿರುತೆರೆಯ ಚೆಲುವೆ. ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ''.. ''ಪಟಿಯಾಲಾ ಬೇಬ್ಸ್''.. ''ಸ್ಕೂಲ್ ಫ್ರೆಂಡ್ಸ್''.. ''ಸುಮನ್ ಇಂದೋರಿ''.. ಇವರು ಅಭಿನಯಿಸಿರುವ ಕೆಲ ಜನಪ್ರಿಯ ಧಾರಾವಾಹಿಗಳು.
ಇನ್ನು ಕಳೆದ ವರ್ಷ ಸಲ್ಮಾನ್ ಖಾನ್ ಸಾರಥ್ಯದ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ಕೂಡ ಅಶ್ನೂರ್ ಹೋಗಿದ್ದರು. ಆ ಸೀಸನ್‌ನ ಅತ್ಯಂತ ಕಿರಿಯ ಸ್ಫರ್ಧಿ (21) ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದ್ದರು. ಹೆಚ್ಚು ಕಡಿಮೆ 14 ವಾರ ಮನೆಯಲ್ಲಿದ್ದರು. 8ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
ಇಂಥಾ ಅಶ್ನೂರ್ ಕೌರ್ ಅವರ ಐಶಾರಾಮಿ ಮನೆಗೆ ನಿನ್ನೆ (ಜುಲೈ 1) ನೀರು ನುಗ್ಗಿದೆ. ಇಡೀ ಲಿವಿಂಗ್ ರೂಮ್ ಜಲಾವೃತಗೊಂಡಿದೆ. ಮಳೆಯಿಂದಾದ ಈ ಅವಾಂತರವನ್ನು ಅಶ್ನೂರ್ ಕೌರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಅಶ್ನೂರ್ ಕೌರ್ ಅವರ ಮನೆಯ ಬಾಲ್ಕನಿದಿಂದ ಮಳೆಯ ನೀರು ಮನೆಯೊಳಗೆ ನುಗ್ಗಿದೆ. ಮನೆ ಜಲಾವೃತಗೊಂಡಿದೆ. ನೆಲದ ಮೇಲೆ ಹಾಕಲಾಗಿದ್ದು ದುಬಾರಿ ಕಾರ್ಪೆಟ್‌ಗಳು ಹಾನಿಗೊಳಗಾಗಿದ್ದು ಮನೆಯ ಬೇರೆ ವಸ್ತುಗಳು ಕೂಡ ಹಾನಿಗೊಳಗಾಗಿವೆ.
ವೇಗವಾಗಿ ನೀರು ಮನೆಯೊಳಗೆ ನುಗ್ಗುತ್ತಿದ್ದರೆ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಲು ಮನೆಯ ಕೆಲಸದವರು ಹರಸಾಹಸ ಪಟ್ಟಿದ್ಧಾರೆ. ವ್ಯಾಕ್ಯೂಮ್ ಕ್ಲೀನರ್‌ಗಳು, ವೈಪರ್‌ಗಳು ಮತ್ತು ಮಾಪ್‌ಗಳನ್ನು ಹಿಡಿದು ಒಳಗೆ ಬಂದ ನೀರನ್ನು ಹೊರ ಹಾಕುವ ಪ್ರಯತ್ನ ಮಾಡಿದ್ದಾರೆ.
ಸಾಮಾನ್ಯವಾಗಿ ಅಪಾರ್ಟ್‌ಮೆಂಟ್‌ನ ಮೇಲ್ಘಾಗದಲ್ಲಿ ನೀರು ನುಗ್ಗುವುದಿಲ್ಲ. ಅದರಲ್ಲಿಯೂ ಸೆಲೆಬ್ರಿಟಿಗಳ ಮನೆ ಅಂದರೆ ಅಲ್ಲಿ ತುಸು ಹೆಚ್ಚೇ ಮುತುವರ್ಜಿ ವಹಿಸಿರಲಾಗಿರುತ್ತೆ. ತಾರೆಯರು ಕೂಡ ಅಳೆದು ತೂಗಿ ಮನೆಯನ್ನು ಖರೀದಿ ಮಾಡಿರುತ್ತಾರೆ. ಆದರೆ, ಹವಾಮಾನ ವೈಪರೀತ್ಯದ ಮುಂದೆ ಮನುಷ್ಯನ ಲೆಕ್ಕಾಚಾರ, ಟೆಕ್ನಾಲಜಿ, ಎಲ್ಲವೂ ತಲೆ ಕೆಳಗಾಗುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಫ್ಲಾಟ್ ಬಹುಮಹಡಿ ಕಟ್ಟಡದ ಎತ್ತರದಲ್ಲಿದ್ದರೂ ಅಶ್ನೂರ್ ಕೌರ್ ಗೆ ಈ ಮುಜುಗರ ತಪ್ಪಿಲ್ಲ.
ಇನ್ನು ಬಾಲ್ಕನಿಯ ನೀರು ಸರಾಗವಾಗಿ ಹರಿದುಹೋಗಲು ನಿರ್ಮಿಸಲಾದ ಡ್ರೈನೇಜ್ ವ್ಯವಸ್ಥೆಯಲ್ಲಿ ಮಣ್ಣು ಅಥವಾ ಕಸಕಡ್ಡಿಗಳು ಸಿಲುಕಿಕೊಂಡಾಗ ನೀರು ಅಲ್ಲಿಯೇ ಸಂಗ್ರಹಗೊಂಡು ಮನೆಯೊಳಗೆ ಹರಿಯುತ್ತದೆ. ಇದು ಮಹಾನಗರಗಳಲ್ಲಿ ಗಗನಚುಂಬಿ ಬಿಲ್ಡಿಂಗ್‌ಗಳಲ್ಲಿ ವಾಸ ಮಾಡುತ್ತಿರುವವರಿಗೆ ಹೊಸದಾಗಿ ಕಾಡುತ್ತಿರುವ ಸಮಸ್ಯೆ.
ಇದಲ್ಲದೇ ಮಳೆಯ ಜೊತೆ ಗಾಳಿಯೂ ಕೂಡ ಬೀಸಿದಾಗ ಅಪಾರ್ಟ್‌ಮೆಂಟ್‌ಗಳ ಸ್ಲೈಡಿಂಗ್ ಗ್ಲಾಸ್ ಬಾಗಿಲುಗಳಿಂದ ಮತ್ತು ಕಿಟಕಿಯ ಸಂಧಿಗಳಿಂದ ನೀರು ಮನೆಯ ಅಂಗಳ ತಲುಪುತ್ತೆ. ಮನೆಯನ್ನು ತೇವಗೊಳಿಸುವುದಲ್ಲದೇ ಗೋಡೆಗಳನ್ನು ಮತ್ತು ಪೀಠೋಪಕರಣಗಳು ಕೂಡ ಇದರಿಂದ ಹಾಳಾಗುತ್ತವೆ. ಅಶ್ನೂರ್ ಮನೆಯಲ್ಲಿ ಕೂಡ ಡ್ರೈನೇಜ್ ಪೈಪ್‌ಗಳ ಬ್ಲಾಕೇಜ್‌ದಿಂದ ನೀರು ಲಿವಿಂಗ್ ರೂಮ್ ಒಳಗೆ ನುಗ್ಗಿರುವ ಸಾಧ್ಯತೆ ಇದೆ. ನಿನ್ನೆಯ ಈ ಮಹಾಮಳೆಯಿಂದ ಮುಂಬೈನ ಆಧುನಿಕ ವಸತಿ ಸಂಕೀರ್ಣ ಮತ್ತು ಒಳಚರಂಡಿ ನಿರ್ವಹಣೆಯ ಕುರಿತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.


Click it and Unblock the Notifications