'ಬಿಗ್ ಬಾಸ್'ನಿಂದ ಹೊರಬಂದು ಮತ್ತೆ 'ಅಡುಗೆ ಮನೆ' ಸೇರಿದ ಸುಜಾತ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ಕೇಡಿ, ಮನೆಹಾಳಿ ಸಿತಾರ ದೇವಿ ಪಾತ್ರದಲ್ಲಿ ಸುಜಾತ ಕಾಣಿಸಿಕೊಂಡಿದ್ದರು. 'ರಾಧಾ ರಮಣ' ಧಾರಾವಾಹಿ ಮುಗಿಯುತ್ತಿದ್ದಂತೆಯೇ, 'ಬಿಗ್ ಬಾಸ್' ಮನೆಯೊಳಗೆ ಸುಜಾತ ಕಾಲಿಟ್ಟರು.
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಮೊದಮೊದಲು ಪ್ರಬಲ ಸ್ಪರ್ಧಿಯಾಗಿ ಸುಜಾತ ಗುರುತಿಸಿಕೊಂಡರು. 'ಬಿಗ್ ಬಾಸ್' ಮನೆಯೊಳಗೆ 'ಕಿಚನ್' ನೇತೃತ್ವ ವಹಿಸಿಕೊಂಡಿದ್ದರು ಸುಜಾತ.
ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿ ಸುಜಾತ ಇದ್ದಾಗ, 'ಬಿಗ್ ಬಾಸ್' ಮನೆಯಲ್ಲಾದ ರಂಪಾಟ ಅಷ್ಟಿಷ್ಟಲ್ಲ. ಆಪಲ್ ವಿಷಯಕ್ಕೆ ದೊಡ್ಡ ಗಲಾಟೆ ನಡೆದಿದ್ದು ನಿಮಗೆಲ್ಲ ನೆನಪಿರಬಹುದು. ಆದ್ರೆ, ಅದ್ಯಾವಾಗ ಚಟುವಟಿಕೆಯೊಂದರಲ್ಲಿ ಸುಜಾತ ಕಾಲಿಗೆ ಪೆಟ್ಟಾಯ್ತೋ, ಆಗ್ಲಿಂದ ಕಿಚನ್ ಗೆ ಸುಜಾತ ಗುಡ್ ಬೈ ಹೇಳಿದರು.
ಕಾಲಿಗೆ ಏಟು ಬಿದ್ದ ಮೇಲೆ ಬಹುತೇಕ ಸೈಲೆಂಟ್ ಆಗ್ಬಿಟ್ಟ ಸುಜಾತ ಕಳೆದ ವಾರವಷ್ಟೇ 'ಬಿಗ್ ಬಾಸ್' ಮನೆಯಿಂದ ಔಟ್ ಆದರು. 'ಬಿಗ್ ಬಾಸ್' ಮನೆಗೆ ಗುಡ್ ಬೈ ಹೇಳಿದ್ಮೇಲೆ ಮತ್ತೊಂದು ಅಡುಗೆ ಮನೆ ಕಡೆಗೆ ಸುಜಾತ ಮುಖ ಮಾಡಿದ್ದಾರೆ. ಏನಿದು ಅಂತೀರಾ.. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸುಜಾತ ಕಿಚನ್ ದರ್ಬಾರ್
'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಪಡೆದ ಮೇಲೆ ಸುಜಾತ ಸುಮ್ಮನೆ ಕೂತಿಲ್ಲ. ಮತ್ತೆ ಬಣ್ಣ ಹಚ್ಚಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಕಿಚನ್ ದರ್ಬಾರ್' ಕಾರ್ಯಕ್ರಮದಲ್ಲಿ ಸುಜಾತ ಮರಳಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ 'ಕಿಚನ್ ದರ್ಬಾರ್' ಶೂಟಿಂಗ್ ಸೆಟ್ ಗೆ ಸುಜಾತ ಹಾಜರ್ ಆಗಲಿದ್ದಾರೆ.

ಸ್ಟಾರ್ ಗಳು ಅಡುಗೆ ಮಾಡಿದ್ದ ಕಾರ್ಯಕ್ರಮ
'ಕಿಚನ್ ದರ್ಬಾರ್' ಎಂಬ ಅಡುಗೆ ಕಾರ್ಯಕ್ರಮಕ್ಕೆ ಸುಜಾತ ಹೋಸ್ಟ್ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ, ಶುಭಾ ಪೂಂಜಾ, ಸಿಂಧು ಲೋಕನಾಥ್, ರೂಪಾ ಅಯ್ಯರ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡು ರುಚಿ ರುಚಿಯಾದ ಅಡುಗೆ ರೆಸಿಪಿಗಳನ್ನು ತೋರಿಸಿಕೊಟ್ಟಿದ್ದರು.

ಬ್ರೇಕ್ ತೆಗೆದುಕೊಂಡಿದ್ದ ಸುಜಾತ
'ಬಿಗ್ ಬಾಸ್' ನಿಂದ ಕರೆ ಬಂದ ಮೇಲೆ 'ಕಿಚನ್ ದರ್ಬಾರ್' ಕಾರ್ಯಕ್ರಮದಿಂದ ಸುಜಾತ ಬ್ರೇಕ್ ತೆಗೆದುಕೊಂಡಿದ್ದರು. ಆದ್ರೀಗ, 'ಬಿಗ್ ಬಾಸ್'ಶೋದಿಂದ ಸುಜಾತ ಔಟ್ ಆಗಿದ್ದಾರೆ. ಹೀಗಾಗಿ, ಮತ್ತೆ 'ಕಿಚನ್ ದರ್ಬಾರ್' ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ ಸುಜಾತ.

ಸೀರಿಯಲ್ ನಿರ್ದೇಶಕರಿಂದಲೂ ಬುಲಾವ್
ಅತ್ತ ಹೊಸ ಹೊಸ ಸೀರಿಯಲ್ ಗಳಲ್ಲೂ ನಟಿಸುವಂತೆ ಸುಜಾತಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದ್ರೆ, ಫ್ಯಾಮಿಲಿ ಜೊತೆಗೆ ಸ್ವಲ್ಪ ಸಮಯ ಕಳೆಯಬೇಕು ಎಂದುಕೊಂಡಿರುವ ಸುಜಾತ ಸದ್ಯಕ್ಕೆ ಯಾವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.


Click it and Unblock the Notifications