'ಬಾಯ್ಸ್ Vs ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಶೋಭಾ ಶೆಟ್ಟಿ
ಶೋಭಾ ಶೆಟ್ಟಿ ಬಗ್ಗೆ ಗೊತ್ತಾ ಎಂದು ಕೇಳಿದರೆ ಹೆಚ್ಚಿನವರು ತನು ಅಲ್ವಾ ಎಂದೇ ಕೇಳುತ್ತಾರೆ. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಶೋಭಾ ಶೆಟ್ಟಿ ತನು ಎಂದೇ ಪರಿಚಯ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿದ್ದ 'ಅಗ್ನಿಸಾಕ್ಷಿ'ಯಲ್ಲಿ ತನು ಪಾತ್ರದ ಮೂಲಕ ಜನಮನ ಗೆದ್ದಿದ್ದರು. ನಂತರ ತೆಲುಗು ಹಾಗೂ ತಮಿಳು ಧಾರಾವಾಹಿಗಳಲ್ಲಿಯೇ ಬಿಜಿಯಾದ ಈಕೆ ಅಲ್ಲೂ ನಟನಾ ಕಂಪನ್ನು ಪಸರಿಸಿದಾಕೆ.
ಧಾರಾವಾಹಿಗಳಷ್ಟೇ ಅಲ್ಲದೇ ಸಿನಿಮಾರಂಗಕ್ಕೂ ಕಾಲಿಟ್ಟ ಇವರು ಪುನೀತ್ ರಾಜಕುಮಾರ್ ಅವರ ಅಭಿನಯದ ಸಿನಿಮಾ 'ಅಂಜನಿಪುತ್ರ'ದಲ್ಲಿ ನಟಿಸಿದ್ದಾರೆ.
ತೆಲುಗಿನ 'ಕಾರ್ತಿಕ ದೀಪಂ' ಧಾರಾವಹಿಯಲ್ಲಿ ಡಾ.ಮೋನಿತಾ ಆಗಿ ನಟಿಸಿದ ಶೋಭಾ ಶೆಟ್ಟಿ ಆ ಪಾತ್ರದ ಮೂಲಕ ಬಹಳಷ್ಟು ಪಾಪ್ಯುಲಾರಿಟಿ ಪಡೆದ ಬೆಡಗಿ.
ಮಾತ್ರವಲ್ಲ ಶೋಭಾ ಶೆಟ್ಟಿಯ ಡಾ.ಮೋನಿತಾ ಪಾತ್ರ ಹಾಗೂ ಅಭಿನಯ ಇಂದಿಗೂ ತೆಲುಗು ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದೆ.

ಮುಂದೆ ತೆಲುಗು ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡರು ಶೋಭಾ ಶೆಟ್ಟಿ. ತೆಲುಗು ಬಿಗ್ ಬಾಸ್ ಸೀಸನ್ ಏಳರಲ್ಲಿ ಸ್ಪರ್ಧಿಯಾಗಿದ್ದ ನಟಿ ಶೋಭಾ ಶೆಟ್ಟಿ ಮೂಲತಃ ಕನ್ನಡದವರಾದರೂ ತೆಲುಗು ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ತಮ್ಮ ನೇರ ನಡೆ ನುಡಿ ಜೊತೆಗೆ ಸ್ಟ್ರಾಂಗ್ ಸ್ಪರ್ಧಿಯಾಗಿದ್ದರಿಂದ ತೆಲುಗು ಬಿಗ್ ಬಾಸ್ ಸೀಸನ್ ಏಳರಲ್ಲಿದ್ದರು. ನಟ ನಾಗಾರ್ಜುನ್ ಅವರು ನಡೆಸಿಕೊಡುವ ತೆಲುಗು ಬಿಗ್ ಬಾಸ್‌ನಲ್ಲಿ ಬರೋಬ್ಬರಿ 98 ದಿನಗಳ ಕಾಲ ಇದ್ದು ಇನ್ನೇನು ಫಿನಾಲೆಗೆ ಒಂದು ವಾರ ಇರುವಾಗ ಮನೆಯಿಂದ ಹೊರ ಬಿದ್ದಿದ್ದರು ನಟಿ ಶೋಭಾ ಶೆಟ್ಟಿ.
ಇದೀಗ ಹೆಚ್ಚುಕಮ್ಮಿ ಒಂದು ದಶಕದ ನಂತರ ಮತ್ತೆ ಕನ್ನಡ ಕಿರುತೆರೆಗೆ ನಟಿ ಶೋಭಾ ಶೆಟ್ಟಿ ವಾಪಸ್ ಆಗಿದ್ದಾರೆ. ಇನ್ನು ಕಿರುತೆರೆ ವೀಕ್ಷಕರಿಗೆ ತಿಳಿದಿರುವಂತೆ ಅದರಲ್ಲೂ ಬಿಗ್ ಬಾಸ್ ಅಭಿಮಾನಿಗಳಿಗಂತೂ ಗೊತ್ತೇ ಇರುವ ವಿಚಾರವೆಂದರೆ ನಟಿ ಶೋಭಾ ಶೆಟ್ಟಿ ಒಂದು ದಶಕದ ನಂತರ ಕನ್ನಡ ಕಿರುತೆರೆಗೆ ಕಾಲಿಟ್ಟರು. ಅದೂ ಕೂಡ ಬಿಗ್ ಬಾಸ್ ಸೀಸನ್ 11ರ ಮೂಲಕ.
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಬಗ್ಗೆ ಬಿಗ್ ಬಾಸ್ ಪ್ರೇಕ್ಷಕರಿಂದ ಹಾಗೂ ಶೋಭಾ ಶೆಟ್ಟಿ ಅಭಿಮಾನಿಗಳಿಂದ ಬಹಳಷ್ಟು ನಿರೀಕ್ಷೆ ಇತ್ತು. ನಿರೀಕ್ಷೆಗೆ ತಕ್ಕಂತೆ ಅವರು ಬಿಗ್ ಮನೆಯಲ್ಲಿ ಒಂದಷ್ಟು ಹವಾ ಮೂಡಿಸಿದ್ದು ನಿಜ. ಆದರೆ ಆರೋಗ್ಯ ಸಮಸ್ಯೆಗಳಾದ್ದರಿಂದ ಒಂದು ವಾರಕ್ಕೆ ತಮ್ಮನ ಮನೆಗೆ ವಾಪಸ್ ಆದರೂ ನಟಿ ಶೋಭಾ ಶೆಟ್ಟಿ. ಈ ವಿಚಾರ ಬಹಳಷ್ಟು ಪ್ರೇಕ್ಷಕರಿಗೆ ಬೇಸರ ತಂದಿತ್ತು. ಹೀಗಿರುವಾಗಲೇ ಈಗ 'ಬಾಯ್ಸ್ ವರ್ಸಸ್ ಗರ್ಲ್ಸ್' ಎಂಬ ಹೊಸ ರಿಯಾಲಿಟಿ ಶೋನಲ್ಲಿ ಶೋಭಾ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.
ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ಎಂಬ ರಿಯಾಲಿಟಿ ಶೋ ಫೆಬ್ರವರಿ ಒಂದರಿಂದ ತೆರೆ ಕಾಣಲಿದೆ. ಇದರಲ್ಲಿ ನಟಿ ಶೋಭಾ ಶೆಟ್ಟಿ ಕೂಡ ಇರುವುದು ಇದೀಗ ಖಚಿತವಾಗಿದೆ. ಈ ರಿಯಾಲಿಟಿ ಶೋ ಪ್ರೊಮೊ ಒಂದು ಬಿಡುಗಡೆಯಾಗಿದ್ದು ಅದರಲ್ಲಿ ಹಲವಾರು ಸ್ಪರ್ಧಿಗಳೊಂದಿಗೆ ನಟಿ ಶೋಭಾ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.
'ಬಾಯ್ಸ್ ವರ್ಸಸ್ ಗರ್ಲ್ಸ್' ಇದು ಜಿಗರ್ ಇರುವ ಹುಡುಗ ಹುಡುಗಿಯರ ಜಿದ್ದಾಜಿದ್ದಿ ಎಂಬ ಶೀರ್ಷಿಕೆ ಅಡಿಯ ಈ ವಿನ್ನರ್ ರಿಯಾಲಿಟಿ ಶೋ ಯಾವ ರೀತಿ ಜನಮನ ಗೆಲ್ಲಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅದರಲ್ಲಿ ಶೋಭಾ ಶೆಟ್ಟಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಪ್ರೇಕ್ಷಕರ ಹಾಗೂ ಅಭಿಮಾನಿಗಳ ಕುತೂಹಲವಾಗಿದೆ.


Click it and Unblock the Notifications











