'ಶಾರದೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ 'ತ್ರಿಪುರ ಸುಂದರಿ'
'ತ್ರಿಪುರ ಸುಂದರಿ'ಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದ ದಿವ್ಯಾ ಸುರೇಶ್ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. 'ತ್ರಿಪುರ ಸುಂದರಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ದಿವ್ಯಾ ಸುರೇಶ್ ಇದೀಗ ಹೊಚ್ಚ ಹೊಸ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ 'ಶಾರದೆ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ದಿವ್ಯಾ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಗಂಧರ್ವ ಕನ್ಯೆ ಆಮ್ರಪಾಲಿಯಾಗಿ ಅಭಿನಯಿಸಿರುವ ದಿವ್ಯಾ ಸುರೇಶ್ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಗಂಧರ್ವ ಕನ್ಯೆಯಾಗಿ ನಟಿಸಲು ಅವಕಾಶ ಸಿಕ್ಕಾಗ ದಿವ್ಯಾ ಅವರಿಗೆ ಬಹಳ ಖುಷಿಯಾಗಿತ್ತು. ಧಾರಾವಾಹಿಯ ಕಥೆ ಕೇಳಿದ ತಕ್ಷಣ ಆಕೆಗೆ ಖುಷಿಯಾಗಿದ್ದು ಮಾತ್ರವಲ್ಲ ಪಾತ್ರ ಬಹಳ ಚಾಲೆಂಜಿಂಗ್ ಆಗಿದೆ ಎಂದೂ ಎನಿಸಿತು. ಫ್ಯಾಂಟಸಿ ಧಾರಾವಾಹಿಗಳನ್ನು ಒಪ್ಪಿಕೊಳ್ಳಬೇಕೆಂದರೆ ಅದು ಸುಲಭದ ಮಾತಲ್ಲ. ಅದರ ಹಿಂದೆ ಬಹಳಷ್ಟು ಶ್ರಮವಿರುತ್ತದೆ. ಬಿಗ್ ಬಾಸ್ ನಂತರ ಸಿಕ್ಕ ಮೊದಲ ಅವಕಾಶ ಇದು. ಈ ರೀತಿಯ ಒಂದು ವಿಶೇಷ ಪಾತ್ರದಲ್ಲಿ ಅವಕಾಶ ಸಿಗುತ್ತದೆ ಎಂದು ನಿರೀಕ್ಷೆಯು ಮಾಡಿರಲಿಲ್ಲ ಎಂದು ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಾಗ ದಿವ್ಯಾ ಸುರೇಶ್ ಹೇಳಿಕೊಂಡಿದ್ದರು.
ಸಣ್ಣ ಗ್ಯಾಪ್ ನ ನಂತರ 'ಶಾರದೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿರುವ ದಿವ್ಯಾ ಅವರಿಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು. ಸಣ್ಣ ವಯಸ್ಸಿನಿನಿಂದಲೂ ನಟಿಯಾಗಬೇಕು, ಬಣ್ಣದ ಜಗತ್ತಿನಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಬಯಕೆ ಹೊಂದಿದ್ದ ಈಕೆ ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ತದ ನಂತರ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಈಕೆ ಕಿರುತೆರೆ, ಬೆಳ್ಳಿತೆರೆ ಇವೆರಡರಲ್ಲೂ ನಟನಾ ಛಾಪನ್ನು ಪಸರಿಸಿದ ಚೆಲುವೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ ಹೆಂಡ್ತಿ ಎಂಬಿಬಿಎಸ್' ಧಾರಾವಾಹಿಯಲ್ಲಿ ನಾಯಕಿ ಗೀತಾಳಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು ದಿವ್ಯಾ ಸುರೇಶ್. ತದ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ ನಟಿಸಿರುವ ದಿವ್ಯಾ ಸುರೇಶ್ ನೆಗೆಟಿವ್ ರೋಲ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಇದೀಗ ಮೂರನೇ ಬಾರಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ದಿವ್ಯಾ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ.

'9 ಹಿಲ್ಟನ್ ಹೌಸ್', 'ಥರ್ಡ್ ಕ್ಲಾಸ್' ಹಾಗೂ 'ರೌಡಿ ಬೇಬಿ', 'ಹಿರಣ್ಯ' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಕಿರುತೆರೆ, ಹಿರಿತೆರೆ ಎರಡರಲ್ಲೂ ದಿವ್ಯಾ ಸುರೇಶ್ ನಟಿಸಿದ್ದರು. ನಟಿಸುವುದಕ್ಕೆ ನನಗೆ ಕಿರುತೆರೆ ಅಥವಾ ಹಿರಿತೆರೆ ಎಂಬ ಯಾವುದೇ ವ್ಯತ್ಯಾಸವಿಲ್ಲ. ಹಾಗಿದ್ದರೂ ನಾನು ಹೆಚ್ಚಿನ ಪ್ರಾಮುಖ್ಯತೆ ಸಿನಿಮಾಗಳಿಗೆ ಕೊಡುತ್ತೇನೆ.
ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಬಯಕೆ. ಇಲ್ಲಿಯ ತನಕ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಉತ್ತಮ ಪಾತ್ರಗಳಿಗೆ ಕಾಯುತ್ತಿದ್ದೇನೆ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ದಿವ್ಯಾ ಸುರೇಶ್.


Click it and Unblock the Notifications











