ಬಿಗ್ ಬಾಸ್ ಬಳಿಕ 'ಶ್ರೀ ಗಂಧದ ಗುಡಿ'ಯಲ್ಲಿ ಬಡ್ಡಿ ಬಂಗಾರಮ್ಮ; ಮಂಜು ಭಾಷಿಣಿ ಪಾತ್ರದ ಗುಟ್ಟು ರಿವೀಲ್
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಗಂಧದ ಗುಡಿ'ಯಲ್ಲಿ ಇದೀಗ ಒಂದು ದೊಡ್ಡ ಸರ್ಪ್ರೈಸ್ ಕಾದಿದೆ. ಹೌದು, 'ಬಿಗ್ ಬಾಸ್ ಕನ್ನಡ ಸೀಸನ್ 12'ರಲ್ಲಿ ಸ್ಪರ್ಧಿಯಾಗಿದ್ದ ಮಂಜು ಭಾಷಿಣಿ ತಮ್ಮ ಪಯಣ ಮುಗಿಸಿ ಹೊರಬಂದಿದ್ದಾರೆ. ಆ ಬಳಿಕ ನಟಿ ಮಂಜು ಭಾಷಿಣಿ ಮತ್ತೆ ಕಿರುತೆರೆಗೆ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ 'ಗಂಧದ ಗುಡಿ' ಧಾರಾವಾಹಿಗೆ ಮಂಜು ಭಾಷಿಣಿ ಆಗಮಿಸಿದ್ದಾರೆ. ಈ ಭಾನುವಾರದ ( ನವೆಂಬರ್ 23) ಸಂಚಿಕೆಯಲ್ಲಿ ಮಂಜು ಭಾಷಿಣಿಯವರ ವಿಶೇಷ ಪಾತ್ರ ಅನಾವರಣವಾಗಿದೆ. ಬಿಗ್ ಬಾಸ್ ದೊಡ್ಮನೆಯಿಂದ ಬಂದ ನಂತರ ಅವರ ಮೊದಲ ಧಾರಾವಾಹಿ ಎಂಟ್ರಿ ಇದಾಗಿರುವುದು ವೀಕ್ಷಕರ ಕುತೂಹಲವನ್ನು ದುಪ್ಪಟ್ಟಾಗಿತ್ತು.

'ಸಿಲ್ಲಿ ಲಲ್ಲಿ'ಯ ಲಲಿತಾಂಬ ಮತ್ತು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಬಡ್ಡಿ ಬಂಗಾರಮ್ಮ ಪಾತ್ರಗಳಿಂದ ಜನಪ್ರಿಯರಾದ ಮಂಜು ಭಾಷಿಣಿ ಬಿಗ್ ಬಾಸ್‌ನಲ್ಲಿ ತಮ್ಮ ಮುಗ್ಧ ಮತ್ತು ನೇರ ಮಾತಿನಿಂದ ಗಮನ ಸೆಳೆದಿದ್ದರು. ಹೊಸ ಧಾರಾವಾಹಿಯಲ್ಲಿ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸಣ್ಣ ಸುಳಿವೂ ಸದ್ಯಕ್ಕೆ ಸಿಕ್ಕಿರಲಿಲ್ಲ. ಇಂದು ಪ್ರಸಾರವಾದ ಒಂದು ಗಂಟೆಗಳ ಮಹಾ ಸಂಚಿಕೆಯಲ್ಲಿ ಮಂಜು ಭಾಷಿಣಿ ಎಂಟ್ರಿಯಾಗಿದೆ.
'ಗಂಧದ ಗುಡಿ'ಯಲ್ಲಿ ಮಂಜು ಭಾಷಿಣಿ; ಹೈಲೈಟ್ಸ್ ಏನು?
'ಶ್ರೀ ಗಂಧದ ಗುಡಿ' ಧಾರಾವಾಹಿಯು ತನ್ನ ವಿಭಿನ್ನ ಕಥಾಹಂದರ ಮತ್ತು ಅತ್ಯುತ್ತಮ ತಾರಾಗಣದಿಂದ ಈಗಾಗಲೇ ಮನೆಮಾತಾಗಿದೆ. ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿಯು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದೀಗ ಮಂಜು ಭಾಷಿಣಿಯವರ ಆಗಮನದಿಂದ ಕಥೆಯಲ್ಲಿ ದೊಡ್ಡ ತಿರುವು ಸಿಗುವುದು ಖಚಿತ. ಅವರದ್ದು ನಾಯಕ-ನಾಯಕಿಯರಿಗೆ ಸಹಾಯ ಮಾಡುವ ಪಾಸಿಟಿವ್ ಪಾತ್ರವೇ? ಅಥವಾ ಕಥೆಗೆ ಸವಾಲು ಒಡ್ಡುವ ನೆಗಟಿವ್ ಪಾತ್ರವೇ? ಎಂಬುವುದಕ್ಕೆ ಭಾನುವಾರ ಸಂಜೆ 5 ಗಂಟೆಯ ಸಂಚಿಕೆಯಲ್ಲಿ ರಿವೀಲ್ ಆಗಿದೆ.
ಬಿಗ್ ಬಾಸ್ ನಂತರ ಮೊದಲ ಧಾರಾವಾಹಿ
ಬಿಗ್ ಬಾಸ್ ಮನೆಯೊಳಗೆ ಹೋಗುವ ಮುನ್ನ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ 'ಬಂಗಾರಮ್ಮ'ನಾಗಿ ಮಿಂಚಿದ್ದ ಮಂಜು ಭಾಷಿಣಿಯವರ ಪಾತ್ರಕ್ಕೆ ಅಲ್ಲಿ ಅಂತ್ಯ ಹಾಡಲಾಗಿತ್ತು. ಆ ಪಾತ್ರ ಸಾವಿನ ಮೂಲಕ ಕೊನೆಗೊಂಡಿತ್ತು. ಇದೀಗ ದೊಡ್ಮನೆಯಿಂದ ಹೊರಬಂದ ನಂತರ ಮಂಜು ಭಾಷಿಣೀ ಇದೇ ಮೊದಲ ಬಾರಿಗೆ ಧಾರಾವಾಹಿ ಸೆಟ್‌ಗೆ ಮರಳಿದ್ದಾರೆ. ಅವರ ಕಮ್ ಬ್ಯಾಕ್ ಅನ್ನು ಅತ್ಯಂತ ಕಾತರದಿಂದ ಎದುರು ನೋಡುತ್ತಿದ್ದ ವೀಕ್ಷಕರಿಗೆ ಥ್ರಿಲ್ ಸಿಕ್ಕಿದೆ.

ಪಾತ್ರದ ಗುಟ್ಟು ಬಿಟ್ಟುಕೊಡದ ನಟಿ
ಮಂಜು ಭಾಷಿಣಿ ಅವರ ಪಾತ್ರದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡಿದ್ದವು. ಅವರು ಹರಿಕಥೆ ಹೇಳುವ ಮೂಲಕ ಕಥೆಗೆ ಒಂದು ಧಾರ್ಮಿಕ ಆಯಾಮ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ, ಮಂಜ ಭಾಷಿಣಿಯಾಗಲಿ, ಕಲರ್ಸ್ ಕನ್ನಡ ಆಗಲಿ ಈ ಬಗ್ಗೆ ಚಿಕ್ಕದೊಂದು ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಸದ್ಯ ಶ್ರೀಗಂಧದ ಗುಡಿಗೆ ಮಂಜ ಭಾಷಿಣಿ ಪಾತ್ರ ಎಂಟ್ರಿ ಕೊಟ್ಟಿದೆ.
ವೀಕ್ಷಕರಿಗೆ ಸಖತ್ ಕುತೂಹಲ
ಮಂಜು ಭಾಷಿಣಿ 'ಶ್ರೀಗಂಧದ ಗುಡಿ' ಧಾರಾವಾಹಿಗೆ ಎಂಟ್ರಿ ಕೊಟ್ಟ ಪ್ರೋಮೋಗಳು ವೈರಲ್ ಆಗಿದ್ದವು. ಕಿರುತೆರೆ ವೀಕ್ಷಕರಲ್ಲಿ ಮಂಜು ಭಾಷಿಣಿಯ ಪಾತ್ರ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಒಟ್ಟಿನಲ್ಲಿ ಈ ಭಾನುವಾರದ 'ಗಂಧದ ಗುಡಿ' ಸಂಚಿಕೆಯು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಧಾರಾವಾಹಿಯಲ್ಲಿ ಇನ್ನೆಷ್ಟು ದಿನ ಮುಂದುವರೆಯುತ್ತಾರೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











