Bigg Boss Hindi 17: ಹಿಂದಿಯಲ್ಲೂ ಬರುತ್ತಿದೆ ಬಿಗ್ ಬಾಸ್, ಸಲ್ಮಾನ್ ಖಾನ್ ಹೇಳಿದ್ದೇನು?
ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾಗುತ್ತಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್ ಬಾಸ್ ತನ್ನ 17 ನೇ ಸೀಸನ್‌ನೊಂದಿಗೆ ಮತ್ತೊಮ್ಮೆ ಕಿರುತೆರೆಗೆ ಮರಳಲು ಸಿದ್ಧವಾಗಿದೆ. ಬಿಗ್ ಬಾಸ್ ಹಿಂದಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಹಲವು ಪ್ರೋಮೋಗಳನ್ನು ಬಿಡುಗಡೆ ಮಾಡಿದೆ.
ಕಲರ್ಸ್ ಕನ್ನಡ ಪ್ರೋಮೋಗಳ ಜೊತೆಗೆ ಬಿಗ್ ಬಾಸ್ ಹಿಂದಿ ಸೀಸನ್ 17ರ ಪ್ರಾರಂಭದ ದಿನಾಂಕವನ್ನು ಸಹ ಘೋಷಿಸಿದೆ. ಹಿಂದಿಯ ಈ 'ವಿವಾದಾತ್ಮಕ' ಕಾರ್ಯಕ್ರಮದ ಹೊಸ ಸೀಸನ್ ಅಕ್ಟೋಬರ್ 15 ರಂದು ಕಿಕ್‌ಸ್ಟಾರ್ಟ್ ಆಗಲಿದೆ. ಪ್ರೋಮೋಗಳಲ್ಲಿ ಸಲ್ಮಾನ್ ಖಾನ್ ವಿವಿರ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
"ಹೃದಯ, ಮನಸ್ಸು ಮತ್ತು ಧೈರ್ಯದ ಆಟ, ಆದರೆ ಇದು ಎಲ್ಲರಿಗೂ 'ಒಂದೇ' ಆಗಿರುವುದಿಲ್ಲ" ಎಂದು ಬಿಗ್ ಬಾಸ್ ಅಡಿಬರಹ ಘೋಷಿಸಿದೆ. ಒಂದು ಪ್ರೋಮೋದಲ್ಲಿ, ಸಲ್ಮಾನ್ ಖಾನ್ ಒಬ್ಬ ಯೋಧನ ಅವತಾರದಲ್ಲಿ, ಇನ್ನೊಂದರಲ್ಲಿ, ಅವರು ಪತ್ತೇದಾರಿಯಾಗಿ ಕಾಣಿಸಿಕೊಂಡಿದ್ದಾರೆ, ಆದರೆ ಮೂರನೇ ಪ್ರೊಮೊದಲ್ಲಿ ಅವರು ಕವ್ವಾಲಿ ಗಾಯಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ನೋಡುವುದಿಲ್ಲ ಸಲ್ಮಾನ್ ಖಾನ್ ತಾಯಿ!
ಭಾರತದ ಕಿರುತೆರೆಗಳಲ್ಲಿ 2006 ರಲ್ಲಿ ಬಿಗ್ ಬಾಸ್ ಪ್ರಾರಂಭವಾಯಿತು. ಅಂದಿನಿಂದ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹಿಂದಿಯಲ್ಲಿ ಮೊದಲ ಸೀಸನ್ ಅನ್ನು ಅರ್ಷದ್ ವಾರ್ಸಿ ಹೋಸ್ಟ್ ಮಾಡಿದ್ದರು. ಇದಾದ ನಂತರ ಶಿಲ್ಪಾ ಶೆಟ್ಟಿ ಮತ್ತು ಅಮಿತಾಬ್ ಬಚ್ಚನ್ ಕೂಡ ಕೆಲವು ಶೋಗಳನ್ನು ನಡೆಸಿಕೊಟ್ಟರು. ಇದಾದ ನಂತರದ ಸೀಸನ್‌ಗಳನ್ನು ಸಲ್ಮಾನ್ ಖಾನ್ ವಹಿಸಿಕೊಂಡಿದ್ದಾರೆ. ಆದರೆ, ಒಂದೇ ತರಹದ ಮ್ಯಾನರಿಸಂ ನೋಡಿ ನೋಡಿ ಬಿಗ್ ಬಾಸ್‌ನಿಂದ ಸಲ್ಮಾನ್ ಖಾನ್ ವಿರಾಮವನ್ನು ತೆಗೆದುಕೊಳ್ಳಬೇಕು ಎಂದು ಹಲವು ಪ್ರೇಕ್ಷಕರು ಒತ್ತಾಯಿಸಿದ್ದಾರೆ.
ಬಿಗ್ ಬಾಸ್ 16 ರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಮತ್ತು ಬಿಗ್ ಬಾಸ್ ವಿಷಯವನ್ನು ಉದ್ದೇಶಿಸಿ ಮಾತನಾಡುವಾಗ, ಸಲ್ಮಾನ್ ಖಾನ್ ಅವರು ತಮ್ಮ ತಾಯಿ ಸಲ್ಮಾ ಖಾನ್ ಈ ಮೊದಲು ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರೀತಿಸುತ್ತಿದ್ದರು. ಆದರೆ ಈಗ 'ಇದು ತುಂಬಾ ಓವರ್' ಆಗಿದೆ ಎಂದು ಭಾವಿಸುತ್ತಾರೆ ಎಂದು ಮಾಹಿತಿ ನೀಡಿದ್ದರು.
"ಅವರು ಸೀಸನ್ 14 ರವರೆಗೆ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಈಗ ಟಿವಿಯಲ್ಲಿನ ಇತರ ಕಾರ್ಯಕ್ರಮಗಳನ್ನು ನೋಡುತ್ತಾರೆ. ನಾನು ಇರುವಾಗ ಮಾತ್ರ ಅವರು ಬಿಗ್ ಬಾಸ್ ನೋಡುತ್ತಾರೆ. ಹಿರೂ ಚಿಕ್ಕಮ್ಮ (ಹಿರೂ ಜೋಹರ್) ಕೂಡ ಬಿಗ್ ಬಾಸ್‌ನಲ್ಲಿ ಹಿಂಸಾಚಾರ ತುಂಬಾ ಹೆಚ್ಚಾಗುತ್ತಿದೆ ಎಂದು ನನಗೆ ಹೇಳಿದ್ದಾರೆ" ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ.
ಈ ವರ್ಷ ಬಿಗ್ ಬಾಸ್ ಹಿಂದಿ ಸೀಸನ್ 17ರಲ್ಲಿ ನಟಿ ಅಂಕಿತಾ ಲೋಖಂಡೆ - ವಿಕ್ಕಿ ಜೈನ್, ಐಶ್ವರ್ಯ ಶರ್ಮಾ - ನೀಲ್ ಭಟ್, ಖುಷಿ - ಮೋಹಿತ್ ಚೌಧರಿ, ಮೋಹಿತ್ ಸೆಹಗಲ್ - ಸನಯಾ ಇರಾನಿ, ಸುರ್ಭಿ ಜ್ಯೋತಿ, ಇಶಾ ಮಾಳವಿಯಾ, ಇಂದಿರಾ ಕೃಷ್ಣನ್ ಅವರಂತಹ ಹೆಸರುಗಳು ಸಂಭಾವ್ಯ ಸ್ಪರ್ಧಿಗಳಾಗಿದ್ದಾರೆ.
ಕನ್ನಡದಲ್ಲಿ ಬಿಗ್ ಬಾಸ್ ಆರಂಭ
ಕನ್ನಡದಲ್ಲಿಯೂ ಬಿಗ್ ಬಾಸ್ ಸೀಸನ್ 10 ಆರಂಭವಾಗುತ್ತಿದೆ. ನಟ ಸುದೀಪ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 10 ಅಕ್ಟೋಬರ್ 8 ರಿಂದ ಕಲರ್ಸ್ ಕನ್ನಡದಲ್ಲಿ ಅದ್ಧೂರಿಯಾಗಿ ಆರಂಭ ಆಗುತ್ತಿದೆ. ಈ ಬಗ್ಗೆ ಪ್ರೋಮೊ ಪ್ರಸಾರ ಆಗುತ್ತಿದ್ದು, ಆರಂಭದ ದಿನವನ್ನು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕಳೆದ 9 ಸೀಸನ್‌ಗಳಿಗಿಂತ ಈ ಸೀಸನ್ ಹೆಚ್ಚು ವಿಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ. ಅಸಲಿ ಆಟ ಅಕ್ಟೋಬರ್ 10ರಿಂದ ಆರಂಭ ಆಗಲಿದೆ. ಎರಡು ದಿನಗಳ ಸ್ಪರ್ಧಿಗಳ ಪರಿಚಯ ಮತ್ತು ಅವರನ್ನು ಬಿಗ್ ಬಾಸ್ ಮನೆಯೊಳಗೆ ಕಳಿಹಿಸಲಾಗುತ್ತೆ. ಈ ಬಾರಿ ಸುಮಾರು 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ.


Click it and Unblock the Notifications











