BBK10: ಬಿಗ್‌ಬಾಸ್ ಮನೆಗೆ ಲಾರ್ಡ್ ಪ್ರಥಮ್ ಎಂಟ್ರಿ: ಗುರಾಯಿಸಬೇಡ ಎಂದು ತುಕಾಲಿ ಸಂತುಗೆ ವಾರ್ನಿಂಗ್.. ಮುಂದೈತೆ ಮಾರಿಹಬ್ಬ
ಮಾತು ಮಾತು ಮಾತು ಬರೀ ಮಾತು. ಪ್ರಥಮ್ ಅಂದ್ರೆ ಮಾತು. ಒಳ್ಳೆ ಹುಡುಗ ಪ್ರಥಮ್ ಎಂದು ಹೇಳಿಕೊಂಡೇ ಬಿಗ್‌ಬಾಸ್ ಸೀಸನ್-4ರ ವಿಜೇತರಾಗಿದ್ದ ಪ್ರಥಮ್ ಈಗ ಮತ್ತೆ ಬಿಗ್‌ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. 4 ದಿನಗಳ ಹಿಂದೆಯಷ್ಟೆ ಬಿಗ್‌ಬಾಸ್ ಕನ್ನಡ ಸೀಸನ್ 10 ಆರಂಭವಾಗಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಸರ್‌ಪ್ರೈಸ್ ಸಿಗುತ್ತಿದೆ. ಜಿಯೋ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಶೋ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಮುಗಿದ ಶೋ ಆರಂಭವಾದ ಮೊದಲ ದಿನವೇ ಶಾಸಕರಾದ ಪ್ರದೀಪ್ ಈಶ್ವರ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಲಿ ಶಾಸಕರು ರಿಯಾಲಿಟಿ ಶೋಗೆ ಹೋಗಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಪರ ವಿರೋಧ ಚರ್ಚೆ ನಡೀತಿದೆ. ಆರಂಭದಲ್ಲಿ ಅವರು ಸ್ಪರ್ಧಿಯಾಗಿ ಹೋಗಿದ್ದಾರೆ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ ಅತಿಥಿಯಾಗಿ ದೊಡ್ಮನೆ ಪ್ರವೇಶಿಸಿದ್ದ ಪ್ರದೀಪ್ ಈಶ್ವರ್ ಕೆಲ ಗಂಟೆಗಳು ಮನೆಯಲ್ಲಿದ್ದು ಹೊರಬಂದಿದ್ದರು.

ಶಾಸಕ ಪ್ರದೀಪ್ ಈಶ್ವರ್ ಬಳಿಕ ಪ್ರಥಮ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ನಾನು ಬಂದಿರೋದು ನಿಮ್ಮೊಟ್ಟಿಗೆ ಗೇಮ್ ಆಗುವುದಕ್ಕೆ ಅಲ್ಲ. ಟಾಸ್ಕ್ ಮಾಡಿಸೋಕೆ ಬಂದಿರೋದು ಎಂದು ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ. 'ನ್ಯಾಯ ಅಂದ್ರೆ ಲಾರ್ಡ್ ಪ್ರಥಮ್ ಸರ್, ಪ್ರಥಮ್ ಸರ್ ಅಂದ್ರೆ ನ್ಯಾಯ' ಅಂತ ಸ್ಪರ್ಧಿಗಳಿಂದ ಸೆಲ್ಯೂಟ್ ಹೊಡೆಸಿಕೊಂಡಿದ್ದಾರೆ. ಇನ್ನು ತುಕಾಲಿ ಸಂತುಗೆ ಶಾಕ್ ಕೊಟ್ಟಿದ್ದಾರೆ.
'ಐಯ್ಯಾಮ್ ವಿಲನ್' ಹಾಡಿನ ಹಿನ್ನೆಲೆಯಲ್ಲಿ ಪ್ರಥಮ್ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದಾರೆ. ಲಾರ್ಡ್ ಪ್ರಥಮ್ ಸಿಂಗ್ ಎಂದು ವಾಯ್ಸ್ ಓವರ್ ಬರುತ್ತದೆ. ಒಳ್ಳೆ ಹುಡುಗನನ್ನು ನೋಡ ಸ್ಪರ್ಧಿಗಳು ಒಂದು ಶಾಕ್ ಜೊತೆಗೆ ಸರ್‌ಪ್ರೈಸ್ ಆಗಿದ್ದಾರೆ. ಇನ್ನು ತುಕಾಲಿ ಸಂತು, ಪ್ರಥಮ್ ಎದುರು ನಿಂತಾಗ ತಲೆ ಬಗ್ಗಿಸಿ ಗುರಾಯಿಸೋದೆಲ್ಲಾ ಬೇಡ ಎಂದು ಎಚ್ಚರಿಕೆ ಕೊಟ್ಟಿರುವಂತೆ ಕಾಣುತ್ತಿದೆ.
ಕೇಳಿ ಕೇಳಿ ಚಪ್ಪಾಳೆ ತಟ್ಟಿಸಿಕೊಂಡಿರುವ ಪ್ರಥಮ್ ಸ್ಪರ್ಧಿಗಳಿಗೆ ಭಯಂಕರ ಕ್ವಾಟ್ಲೆ ಕೊಡುವ ಸುಳಿವು ಸಿಗುತ್ತಿದೆ. ಪ್ರಥಮ್ ಬಿಗ್‌ಬಾಸ್ ಮನೆಯೊಳಗಿರುವ ಎಪಿಸೋಡ್ ನೋಡುವುದಕ್ಕೆ ವೀಕ್ಷಕರು ಉತ್ಸುಕರಾಗಿದ್ದಾರೆ. "ತಮಾಷೆ ಮಾಡಿದ್ರೆ 'ಅಮಾಸೆ' ತೋರಿಸೋ ಲಾರ್ಡ್ ಪ್ರಥಮ್ ಬಂದ್ರು" ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೊ ರಿಲೀಸ್ ಮಾಡಿದೆ.
2016ರಲ್ಲಿ ಬಿಗ್‌ಬಾಸ್ ಮನೆಗೆ ಹೋಗುವರೆಗೂ ಪ್ರಥಮ್ ಅಂದ್ರೆ ಯಾರು ಅಂತ್ಲೇ ಯಾರಿಗೂ ಗೊತ್ತಿರಲಿಲ್ಲ. ಆದರೆ ಬಿಗ್‌ಬಾಸ್ ಮನೆ ಪ್ರವೇಶಿಸಿದ ದಿನದಿಂದಲೇ ಎಲ್ಲೆಲ್ಲೂ ಪ್ರಥಮ್ ಬಗ್ಗೆ ಚರ್ಚೆ ನಡೀತು. ಸರಿನೋ ತಪ್ಪೋ ಬರೀ ಮಾತಿನಿಂದಲೇ ಎಲ್ಲರ ಗಮನ ಸೆಳೆದುಬಿಟ್ಟರು. ಮನೆಯೊಳಗೆ ಇದ್ದ ಸ್ಪರ್ಧಿಗಳಿಗೆ ಪ್ರಥಮ್ ಇಷ್ಟವಾಗುತ್ತಿರಲಿಲ್ಲ. ಆದರೆ ವೀಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡರು. ಅದೇ ಅವರನ್ನು ವಿಜೇತರನ್ನಾಗಿ ಮಾಡಿಬಿಟ್ಟಿತ್ತು.
"ಇದು ನನ್ನ ಗೆಲುವಲ್ಲ.. ಕನ್ನಡಿಗರ ಗೆಲುವು" ಎನ್ನುತ್ತಲೇ ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದರು. ಆ ಸೀಸನ್‌ನಲ್ಲಿ 14 ಬಾರಿ ನಾಮಿನೇಟ್ ಆಗಿದ್ದರು ಪ್ರಥಮ್ ಗೆಲುವಿನ ನಗೆ ಬೀರಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಕಿರಿಕ್ ಕೀರ್ತಿ ಟಫ್ ಕಾಂಪಿಟೇಷನ್ ನಡುವೆಯೂ ಪ್ರಥಮ್ ಟ್ರೋಫಿ ಎತ್ತಿ ಹಿಡಿದರು. ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೂ ಪ್ರಥಮ್ ಮಾತು ಕಡಿಮೆ ಆಗಲಿಲ್ಲ. ಮೂರ್ನಾಲ್ಕು ಸಿನಿಮಾಗಳಲ್ಲೂ ಪ್ರಥಮ್ ನಟಿಸಿದರು.
ಬಿಗ್‌ಬಾಸ್ ಕನ್ನಡ ಸೀಸನ್ 4 ವಿಜೇತರಾದರೂ ಪ್ರಥಮ್‌ಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಸಿಗಲಿಲ್ಲ. ಇವತ್ತಿಗೂ ಬಿಗ್‌ಬಾಸ್ ಪ್ರಥಮ್ ಆಗಿಯೇ ಉಳಿದುಕೊಂಡುಬಿಟ್ಟಿದ್ದಾರೆ. ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದ ಶಾಸಕ ಪ್ರದೀಪ್ ಈಶ್ವರ್ 3 ಗಂಟೆಗಳ ಕಾಲ ಒಳಗಿದ್ದರು. ಇದೀಗ ಪ್ರಥಮ್ ಎಂಟ್ರಿ ಕೊಟ್ಟಿದ್ದು ಒಂದೆರಡು ದಿನಗಳ ಕಾಲ ಅಲ್ಲಿ ಉಳಿಯುವ ಸಾಧ್ಯತೆಯಿದೆ.


Click it and Unblock the Notifications











