BBK10: "ನಿನ್ನ ಡ್ರೋನ್ ರೆಕ್ಕೆ ಪುಕ್ಕ ಕಿತ್ತಾಕ್ತೀನಿ": ಅಡುಗೆ ವಿಚಾರಕ್ಕೆ ಪ್ರತಾಪ್- ವಿನಯ್ ನಡುವೆ ಕಿರಿಕ್
ಬಿಗ್‌ಬಾಸ್ ಕನ್ನಡ ಸೀಸನ್- 10ರ 'ವಾರದ ಕತೆ ಕಿಚ್ಚನ ಜೊತೆ' ನೋಡೊಕೆ ಒಂದೇ ದಿನ ಬಾಕಿಯಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ತಿಕ್ಕಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ವಿನಯ್ ಗೌಡ ಹಲವರ ಜೊತೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಸಂಗೀತಾ ಶೃಂಗೇರಿ ಬಳಿಕ ಇದೀಗ ಡ್ರೋನ್ ಪ್ರತಾಪ್ ಜೊತೆ ವಾಕ್ಸಮರ ನಡೆಸಿದ್ದಾರೆ.
5ನೇ ದಿನಕ್ಕೆ ಬಿಗ್‌ಬಾಸ್ ಶೋ ಕಾಲಿಟ್ಟಿದೆ. ಮೊದಲ ದಿನ ಶಾಸಕರಾದ ಪ್ರದೀಪ್ ಈಶ್ವರ್ ಮನೆಯೊಳಗೆ ಹೋಗಿದ್ದು ಭಾರೀ ಚರ್ಚೆಯಾಗಿತ್ತು. ಬಳಿಕ ಪ್ರಥಮ್ ಎಂಟ್ರಿ ಕೊಟ್ಟಿದ್ದರು. ಇನ್ನು ಮನೆಮಂದಿಯ ನಡುವೆ ಅನ್ಯೋನ್ಯತೆಗಿಂತ ಕಿರಿಕ್‌ಗಳೇ ಹೆಚ್ಚಾಗುತ್ತಿದೆ. ಪ್ರತಾಪ್, ಸಂಗೀತಾ ಹಾಗೂ ವಿನಯ್ ಕೊಂಚ ಹೆಚ್ಚೇ ಅಗ್ರೆಸ್ಸಿವ್ ಆಗ್ತಿದ್ದಾರೆ. ಇದರಿಂದ ಸಣ್ಣ ಸಣ್ಣ ಗಲಾಟೆಗಳು ಮನೆಯಲ್ಲಿ ನಡೀತಿದೆ.

ಅಡುಗೆ ವಿಚಾರಕ್ಕೆ ಇದೀಗ ಮನೆಯಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಕಿತ್ತಾಡಿದ್ದಾರೆ. ಅದರ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಅಡುಗೆ ನೈರ್ಮಲ್ಯದ ಬಗ್ಗೆ ಮನೆಯಲ್ಲಿ ತಕರಾರು ಎದ್ದಿದೆ. ಅದನ್ನು ಡ್ರೋನ್ ಪ್ರತಾಪ್ ಆರಂಭಿಸಿದ್ದಾರೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳನ್ನು ಸಮರ್ಥರು ಹಾಗೂ ಅಸಮರ್ಥರು ಎಂದು ಇಬ್ಬಾಗ ಮಾಡಲಾಗಿದೆ. ಅಡುಗೆ, ಶುಚಿ, ಬಾತ್‌ರೂಮ್ ತೊಳೆಯುವುದು, ಹಾಸಿಗೆ ಸಿದ್ಧಗೊಳಿಸುವ ಕೆಲಸಗಳನ್ನು ಅಸಮರ್ಥರು ಮಾಡಬೇಕಿದೆ.
ದಿಢೀರನೆ ಡ್ರೋನ್ ಪ್ರತಾಪ್ ಅಡುವೆ ನೈರ್ಮಲ್ಯದ ಬಗ್ಗೆ ಚಕಾರ ಎತ್ತಿದ್ದಾರೆ. ಕಾರ್ತಿಕ್ ಮಹೇಶ್ ಯಾರಿಗಾದರೂ ಅಡುಗೆ ನೈರ್ಮಲ್ಯದ ಬಗ್ಗೆ ಸಮಸ್ಯೆ ಇದ್ಯಾ? ಎಂದು ಕೇಳಿದ್ದಾರೆ. ಕೆಲವರು ಇಲ್ಲ ಎಂದಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಇದ್ದಕ್ಕಿದಂತೆ ವಿನಯ್ ಅಣ್ಣ ನೀವು ಎಷ್ಟು ಚೆನ್ನಾಗಿ ಅಡುಗೆ ಮಾಡ್ತಿರಾ ಅಂತ ನಮಗೆ ಗೊತ್ತು ಎಂದಿದ್ದಾರೆ.
ಪ್ರತಾಪ್ ಮಾತಿಗೆ ವಿನಯ್ ಗರಂ ಆಗಿದ್ದಾರೆ. ನಾನು ಕಣ್ಣಲ್ಲಿ ಕಣ್ಣಿಟ್ಟು ಮುಖದ ಮೇಲೆ ಹೇಳ್ತೀನಿ. ಹಿಂದೆ ಮಾತನಾಡುವ ವ್ಯಕ್ತಿ ನಾನಲ್ಲ. ಇವರೆಲ್ಲಾ ಗಲೀಜಾಗಿ ಮಾಡ್ತಿದ್ದಾರೆ ಎನ್ನುವ ರೀತಿಯಲ್ಲಿ ಹೇಳಿದ್ನಾ ನಾನು? ಎಂದು ವಿನಯ್ ಕೇಳಿದ್ದಾರೆ. ಅದಕ್ಕೆ ಪ್ರತಾಪ್ ಮಾಡಿದ್ದೀರಿ ಅಂದ್ಕೊಂಡಿದ್ದೀನಿ ನಾನು, ಅಣ್ಣ ಯಾರ ಬಗ್ಗೆನೂ ಮಾತಾಡಿದ್ದೀರಿ ಎಂದು ಹೇಳಿಲ್ಲ ಎಂದಿದ್ದಾರೆ.
ಪ್ರತಾಪ್ ಮಾತಿಗೆ ಕೆಂಡಾಮಂಡಲವಾದ ವಿನಯ್, ಮತ್ಯಾರು ಹೇಳಿದ್ದು? ನಿಂದು ತಪ್ಪಿದೆ. ಇವತ್ತು ನಿನ್ನ ಡ್ರೋನ್ ರೆಕ್ಕೆಪುಕ್ಕ ಕಿತ್ತುಹಾಕ್ತೀನಿ ಎಂದು ಪ್ರತಾಪ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ. ವಿನಯ್ ಮಾತಿಗೆ ಬೇಸರಗೊಂಡು ಪ್ರತಾಪ್ ಮೌನವಾಗಿ ಕುಳಿತುಬಿಟ್ಟಿದ್ದಾರೆ.
ಇನ್ನು ಸ್ನೇಹಿತ್ ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೊಲದ ಕ್ಯಾಪ್ಟನ್ ಆಗಿದ್ದಾರೆ. ಅದರ ಬೆನ್ನಲ್ಲೇ ಲಾರ್ಡ್ ಪ್ರಥಮ್ ಮನೆಯೊಳಗೆ ಹೋಗಿ ಸ್ಪರ್ಧಿಗಳ ಬಲ ಹಾಗೂ ದೌರ್ಬಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆಡಿಸಿ ನೋಡು ಉರುಳಿಸಿ ನೋಡು ಎನ್ನುವ ಟಾಸ್ಕ್ ಕೂಡ ಆಡಿಸಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಮಾತಿನಿಂದ ಪ್ರಥಮ್ ಮನೆಯಲ್ಲಿ ಕೆಲ ಸಮಯ ಸ್ಪರ್ಧಿಗಳ ಜೊತೆ ಕಳೆದರು.
ಪ್ರಥಮ್ ನೀಡಿದ ಆಡಿಸಿ ನೋಡು ಉರುಳಿಸಿ ನೋಡು ಟಾಸ್ಕ್‌ನಲ್ಲಿ ಅಸಮರ್ಥರು ಗೆದ್ದಿದ್ದಾರೆ. ಬಳಿಕ ಪ್ರಥಮ್‌ನ ಬಿಗ್‌ಬಾಸ್ ಆದೇಶದಂತೆ ಸ್ಪರ್ಧಿಗಳೆಲ್ಲಾ ಬೀಳ್ಕೊಟ್ಟಿದ್ದಾರೆ. ಇನ್ನು ಟಾಸ್ಕ್‌ನಲ್ಲಿ ಗೆದ್ದವರಿಗೆ ಬಹುಮಾನವಾಗಿ ನಾನ್‌ವೆಜ್ ಊಟ ಸಿಕ್ಕಿದೆ. ಅಸಮರ್ಥರು ಚಪ್ಪರಿಸಿಕೊಂಡು ನಾನ್‌ವೆಜ್ ಸೇವಿಸಿದರೆ ಸಮರ್ಥರು ಹ್ಯಾಪು ಮೊರೆ ಹಾಕಿಕೊಂಡಿದ್ದರು. ಇನ್ನು ತುಕಾಲಿ ಸಂತು ಅಂತೂ ನಾನ್‌ವೆಜ್ ನೋಡಿ ತಿನ್ನಲು ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದಾರೆ. ಜಿಯೋ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್‌ಬಾಸ್ ಶೋ 24 ಗಂಟೆ ಉಚಿತವಾಗಿ ಲೈವ್ ನೋಡುವ ಅವಕಾಶವಿದೆ.


Click it and Unblock the Notifications











