Bigg Boss 10 grand finale: 5ನೇ ಸ್ಥಾನಕ್ಕೆ ತೃಪ್ತಿಪಟ್ಟ ಹಳ್ಳಿಕಾರ್ ಒಡೆಯ: ದೊಡ್ಮನೆಯಿಂದ ವರ್ತೂರ್ ಸಂತೋಷ್ ಔಟ್
ಬಿಗ್‌ಬಾಸ್ ಕನ್ನಡ ಸೀಸನ್-10 ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಶೋ ಚಿತ್ರೀಕರಣ ನಡೀತಿದ್ದು ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಲೀಕ್ ಆಗುತ್ತಿದೆ. ಸಂಥಿಂಗ್ ಸ್ಪೆಷಲ್ ಸೀಸನ್ ಆಗಿ ಬಂದ ಈ ಬಾರಿಯ ಶೋ ವೀಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದೆ.
ಈ ಬಾರಿ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ 6 ಜನ ಎಂಟ್ರಿ ಕೊಟ್ಟಿದ್ದರು. ಸಂಗೀತಾ, ವಿನಯ್, ವರ್ತೂರ್ ಸಂತೋಷ್, ತುಕಾಲಿ ಸಂತು, ಕಾರ್ತಿ ಮಹೇಶ್, ಡ್ರೋನ್ ಪ್ರತಾಪ್ ಈ ಲಿಸ್ಟ್‌ನಲ್ಲಿ ಇದ್ದರು. ಈಗಾಗಲೇ ತುಕಾಲಿ ಸಂತು ಎಲಿಮಿನೇಟ್ ಆಗಿ ಹೊರ ಬಂದಿರುವುದು ಖಚಿತವಾಗಿದೆ. ಇದೀಗ ಮತ್ತೊಬ್ಬ ಸ್ಪರ್ಧಿ ಬಿಗ್‌ಬಾಸ್ ಮನೆಯ ಆಟ ಮುಗಿಸಿದ್ದಾರೆ.

ತುಕಾಲಿ ಸಂತು ಬಳಿಕ ಇದೀಗ ವರ್ತೂರ್ ಸಂತೋಷ್ ಬಿಗ್‌ಬಾಸ್ ಸೀಸನ್ 10ರಿಂದ ಎಲಿಮಿನೇಟ್ ಆಗಿದ್ದಾರೆ. ನಮ್ರತಾ ಗೌಡ ಬಿಗ್‌ಬಾಸ್ ಮನೆ ಒಳಗೆ ಹೋಗಿ ಬಿಂದಾಸ್ ಹಾಡುಗಳಿಗೆ ಹೆಜ್ಜೆ ಹಾಕಿದರು. ಬಳಿಕ ಬಿಗ್‌ಬಾಸ್ ಆದೇಶದಂತೆ ತಮ್ಮ ಕೈಯಲ್ಲಿದ್ದ ಎನ್‌ವಲಪ್ ತೆಗೆದು ಅದರಲ್ಲಿ ಇದ್ದ ಹೆಸರಿನವರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಮೊದಲಿಗ್ ಕಾರ್ತಿಕ್, ಸಂಗೀತಾ ಎಂದು ಹೇಳಿ ಪ್ರಾಂಕ್ ಮಾಡಿದ ಬಳಿಕ ನಿಜವಾದ ಹೆಸರು ಹೇಳಿದ್ದಾರೆ. ಹಳ್ಳಿಕಾರ್ ಒಡೆಯ ಎಂದೇ ಗಮನ ಸೆಳೆದಿದ್ದ ವರ್ತೂರು ಸಂತೋಷ್ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಶ್ರೀಮಂತ ಮನೆತನದ ವರ್ತೂರು ಸಂತೋಷ್ ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಗಳಿಸಿದವರು. ಕೃಷಿಕ ಕುಟುಂಬದಿಂದ ಬಂದ ಸಂತೋಷ್ ದನ-ಕರುಗಳನ್ನು ಸಾಕುತ್ತಾ ಮಣ್ಣಿನ ಮಗ ಎನಿಸಿಕೊಂಡವರು. ತಮ್ಮ ವಿಭಿನ್ನ ಶೈಲಿಯ ಮಾತುಗಾರಿಕೆಯಿಂದಲೂ ಗುರ್ತಿಸಿಕೊಂಡಿದ್ದ ಸಂತೋಷ್ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಆರಂಭದಲ್ಲಿ ಕೊಂಚ ಆಟದಲ್ಲಿ ಹಿಂದೆ ಬಿದ್ದರೂ ಬಳಿಕ ಪ್ರಬಲ ಸ್ಪರ್ಧಿ ಎನಿಸಿಕೊಂಡರು.

ಬಿಗ್‌ಬಾಸ್ ಶೋ ನಡುವೆಯೇ ಹುಲಿ ಉಗುರು ಹೊಂದಿದ್ದ ಆರೋಪದಲ್ಲಿ ಬಿಗ್‌ಬಾಸ್ ಮನೆಯಿಂದ ಸಂತೋಷ್ ಬಂಧನವಾಗಿತ್ತು. ಕೆಲ ದಿನಗಳ ಕಾಲ ಸೆರೆ ವಾಸವನ್ನು ಅನುಭವಿಸಿ ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಮತ್ತೆ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು.
ಇನ್ನು ಬಿಗ್‌ಬಾಸ್ ಮನೆ ಪ್ರವೇಶಿಸಿದ ವರ್ತೂರು ಸಂತೋಷ್ ದಿಢೀರನೆ ಮನೆಯಿಂದ ಹೊರ ಬರುವುದಾಗಿ ಹಠ ಹಿಡಿದಿದ್ದರು. "ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಶೋದಿಂದ ಹೊರಗೆ ಹೋಗಲು ಬಯಸುತ್ತೇನೆ" ಎಂದು ಪಟ್ಟು ಹಿಡಿದರು. ನಟ ಸುದೀಪ್ ಕೂಡ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರು ಸಂತೋಷ್ ಒಪ್ಪಲಿಲ್ಲ. ಬಳಿಕ ಅವರ ತಾಯಿಯೇ ಮನೆಯೊಳಗೆ ಹೋಗಿ ಮನವೊಲಿಸುವಲ್ಲಿ ಯಶಸ್ವಿ ಆಗಿದ್ದರು. ಬಳಿಕ 100 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು.
ಸಂತೋಷ್, ಹಳ್ಳಿಕಾರ್ ಕ್ಯಾಟಲ್ ಬ್ರೀಡ್/ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರು ಆಗಿದ್ದಾರೆ. ಇದೇ ಕಾರಣಕ್ಕೆ ಹಳ್ಳಿಕಾರ್ ಒಡೆಯ ಎನಿಸಿಕೊಂಡಿದ್ದಾರೆ. ರೈತ ಕುಟುಂಬದ ಸಂತೋಷ್ ಬಿಗ್‌ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಸಾಕಷ್ಟು ಜನ ವೀಕ್ಷಕರು ಅಂದುಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿದ್ದು ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ.
ತುಕಾಲಿ ಸಂತು ಹಾಗೂ ವರ್ತೂರ್ ಸಂತೋಷ್ ಕೊನೆ ದಿನಗಳಲ್ಲಿ ಬಹಳ ಆತ್ಮೀಯ ಸ್ನೇಹಿತರಾಗಿಬಿಟ್ಟಿದ್ದರು. ಸದಾ ಒಟ್ಟೊಟ್ಟಿಗೆ ಇರುತ್ತಿದ್ದರು. ಒಬ್ಬರನ್ನು ಬಿಟ್ಟು ಒಬ್ಬರು ಇರದಂತಹ ಸ್ನೇಹ ಎನ್ನುವಂತಿತ್ತು. ತುಕಾಲಿ ಸಂತು ಔಟ್ ಆದಾಗ ಸಂತು-ಪಂತು ದೂರಾದರೂ ಎನ್ನುವ ಚರ್ಚೆ ನಡೀತು. ಇದೀಗ ಇಬ್ಬರು ಹೊರ ಬಂದಂತಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ವೈಯಕ್ತಿಕ ವಿಚಾರಗಳು ಚರ್ಚೆ ಬಂದವು. ತಮ್ಮ ಮದುವೆ ಹಾಗೂ ಪತ್ನಿ ಕುರಿತು ಮಾತನಾಡಿದ್ದರು. ಈ ಬಗ್ಗೆ ಮನೆ ಹೊರಗಡೆ ಕೂಡ ಸಾಕಷ್ಟು ಚರ್ಚೆಗಳು ನಡೀತು. ಸಂತೋಷ್ ವಿರುದ್ಧ ಮಾವ ಗಂಭೀರ ಆರೋಪಗಳನ್ನು ಮಾಡಿದ್ದರು. ಸಂತೋಷ್ ಮಾದಕ ವ್ಯಸನಿ, ಮಹಿಳಾ ಪೀಡಕ, ಮೋಸಗಾರ ಅಂತೆಲ್ಲಾ ಆರೋಪಿಸಿದ್ದರು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.


Click it and Unblock the Notifications











