Bigg Boss Nomination: ಈ ವಾರ ಎಲಿಮಿನೇಟ್ ಆಗೋದ್ಯಾರು? ವಿನಯ್ ಗೌಡಗೆ ಕಾದಿದ್ಯಾ ಕಿಚ್ಚನ ನೀತಿಪಾಠ?
Bigg Boss 4th Week Nominations: ಅದ್ಯಾಕೋ ಬಿಗ್‌ಬಾಸ್ ಕನ್ನಡ ಸೀಸನ್ 10 ಚಿತ್ರ ವಿಚಿತ್ರ ಕಾರಣಗಳಿಗೆ ಭಾರೀ ಸುದ್ದಿ ಆಗುತ್ತಿದೆ. ಇತ್ತೀಚಿನ ಕೆಲ ಸೀಸನ್‌ಗೆ ಹೋಲಿಸಿದರೆ ಈ ಸೀಸನ್ ಕೊಂಚ ಮಜವಾಗಿದೆ. ಆದರೆ ಕೆಲವೊಮ್ಮೆ ಎಲ್ಲೆ ಮೀರುತ್ತಿದೆ ಎನ್ನುವುದು ಕೆಲವರ ಆರೋಪ. ಇದೆಲ್ಲದರ ನಡುವೆಯೂ 4ನೇ ವಾರಾಂತ್ಯಕ್ಕೆ ಶೋ ಕಾಲಿಟ್ಟಿದೆ. ಈ ವಾರ ಯಾರು ಮನೆಯಿಂದ ಹೊರ ಬರುತ್ತಾರೆ? ಎನ್ನುವ ಕುತೂಹಲ ಮೂಡಿದೆ.
ಕಳೆದ ವಾರ ಎಲಿಮಿನೇಷನ್ ಇಲ್ಲ ಎಂದು ಹೇಳಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ರಿಲೀಫ್ ಕೊಟ್ಟಿದ್ದರು. ತನಿಷಾ, ಇಶಾನಿ, ಭಾಗ್ಯಶ್ರೀ ಡೇಂಜರ್ ಜೋನ್‌ನಲ್ಲಿದ್ದರು. ಎಲಿಮಿನೇಷನ್ ಇಲ್ಲ ಎಂದು ಹೇಳಿದ್ದು ಕೇಳಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಮೊದಲ ವಾರ ಸ್ನೇಕ್ ಶ್ಯಾಮ್, ಎರಡನೇ ವಾರ ಗೌರೀಶ್ ಅಕ್ಕಿ ಬಿಗ್‌ಬಾಸ್ ಮನೆ ಆಟ ಮುಗಿಸಿ ಹೊರ ಬಂದಿದ್ದರು. ಈ ನಡುವೆ ಹುಲಿ ಉಗುರು ಹೊಂದಿರುವ ಆರೋಪದಲ್ಲಿ ವರ್ತೂರು ಸಂತೋಷ್ ಬಂಧನವಾಗಿ ಜೈಲಿಗೂ ಹೋಗಿ ಜಾಮೀನು ಪಡೆದು ಹೊರ ಬಂದರು. ಬಳಿಕ ಮತ್ತೆ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು.

ಒಬ್ಬರಲ್ಲ ಇಬ್ಬರಲ್ಲ 9 ಜನ ಈ ವಾರ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಒಬ್ಬರು ಮನೆಯಿಂದ ಹೊರ ಬರುವುದು ಪಕ್ಕಾ ಆಗಿದೆ. ಸಿರಿ, ತುಕಾಲಿ ಸಂತು, ತನಿಷಾ, ರಕ್ಷಕ್, ಮೈಕೆಲ್, ಸ್ನೇಹಿತ್, ವರ್ತೂರು ಸಂತೋಷ್, ಕಾರ್ತಿಕ್, ವಿನಯ್ ಈ ವಾರ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ? ಎಂದು ಕಲರ್ಸ್ ಕನ್ನಡ 'ವಾರದ ಕತೆ ಕಿಚ್ಚನ ಜೊತೆ' ಪ್ರೋಮೊ ರಿಲೀಸ್ ಮಾಡಿದೆ.
ಬಿಗ್‌ಬಾಸ್ ಮನೆಯಲ್ಲಿ ಕಳೆದೆರಡು ವಾರಗಳಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ. ದಸರಾ ಬಳಿಕ ರಾಜ್ಯೋತ್ಸವ ಮುಂದೆ ದೀಪಾವಳಿ ಹೀಗೆ ಹಬ್ಬದ ಸೀಸನ್‌ನಲ್ಲಿ ಸ್ಪರ್ಧಿಗಳು ಸಂಪ್ರದಾಯಿಕ ಉಡುಗೆಯಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮನೆಯ ಸದಸ್ಯರಿಗೆ ಹಳ್ಳಿಮನೆ ಟಾಸ್ಕ್ ನೀಡಲಾಗಿತ್ತು. ಬಿಗ್‌ಬಾಸ್ ಮನೆಯೊಳಗೆ ಸಣ್ಣದೊಂದು ಹಳ್ಳಿಯೇ ನಿರ್ಮಾಣವಾಗಿತ್ತು. ಸ್ಪರ್ಧಿಗಳು ಹಳ್ಳಿಯ ಜನರಂತೆ ಉಡುಪು ಧರಿಸಿ ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದರು.
ಸ್ಪರ್ಧಿಗಳನ್ನು 2 ಗುಂಪು ಮಾಡಿ ಸಂಗೀತಾ ಹಾಗೂ ವಿನಯ್ ಒಂದೊಂದು ಕುಟುಂಬದ ಮುಖ್ಯಸ್ಥರಾಗಿ ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದರು. ಮಣ್ಣಿನ ಮಡಿಕೆಗಳನ್ನು ಮಾಡುವ ಟಾಸ್ಕ್‌ನಲ್ಲಿ ಸ್ಪರ್ಧಿಗಳ ನಡುವೆ ಭಾರೀ ಜಗಳ ನಡೆದಿತ್ತು. ವಿನಯ್ ಗೌಡ ಬಹಳ ಅಗ್ರೆಸ್ಸೀವ್ ಆಗಿ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತರೆ ಸ್ಪರ್ಧಿಗಳ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಅದನ್ನು ಒಪ್ಪಲು ಯಾರು ಸಿದ್ಧರಿಲ್ಲ.
ಇನ್ನು ವಿನಯ್ ಗೌಡ ಇತರೆ ಸ್ಪರ್ಧಿಗಳನ್ನು ಟೀಕಿಸುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಹೀಯಾಳಿಸಿ ಮಾತನಾಡುವುದನ್ನು ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ವೀಕೆಂಡ್ ಪಂಚಾಯ್ತಿಯಲ್ಲಿ ಚರ್ಚೆ ನಡೆಯುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ವಿನಯ್‌ಗೆ ಸುದೀಪ್ ನೀತಿ ಪಾಠ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ವಿನಯ್ ಆರೋಪಗಳಿಗೆ ಸ್ಪಷ್ಟನೆ ಸಿಗುತ್ತಾ? ಎಂದು ವೀಕ್ಷಕರು ಕಾಯುತ್ತಿದ್ದಾರೆ.
ವಿನಯ್ ಗೌಡ ಬಗ್ಗೆ ನೆಗೆಟೀವ್ ಕಾಮೆಂಟ್ಸ್ ಬರುತ್ತಿರುವ ಬಗ್ಗೆ ಪತ್ನಿ ಅಕ್ಷತಾ ಪ್ರತಿಕ್ರಿಯಿಸಿದ್ಧಾರೆ. ಸಂದರ್ಶನವೊಂದರಲ್ಲಿ ಮಾತನಾಡಿ "ವಿನಯ್ ಬಿಗ್ ಬಾಸ್ ಮನೆಗೆ ಹೋಗಿದ್ದು ಖುಷಿಯಿದೆ. ಆದರೆ, ಅವರನ್ನು ತೋರಿಸುತ್ತಿರೋದು ಖುಷಿಯಿಲ್ಲ. ಅವರನ್ನು ಬಿಂಬಿಸುತ್ತಿರುವ ರೀತಿ ಖುಷಿಯಿಲ್ಲ" ಎಂದು ಅಲವತ್ತುಕೊಂಡಿದ್ದರು. ಇದೆಲ್ಲದರ ನಡುವೆ ನಾಲ್ಕನೇ ವಾರಾಂತ್ಯ ಬಂದಿದೆ. ಇನ್ನು ಬಿಗ್‌ಬಾಸ್ ಮನೆಗೆ ಮೊದಲು ಶಾಸಕರಾದ ಪ್ರದೀಪ್ ಈಶ್ವರ್, ಬಳಿಕ ಪ್ರಥಮ್ ಅತಿಥಿಗಳಾಗಿ ಹೋಗಿದ್ದರು. ದೊಡ್ಮನೆಗೆ ಎಂಟ್ರಿ ಕೊಟ್ಟು ನಟಿ ತಾರಾ ದಸರಾ ಸಂಭ್ರಮ ಹೆಚ್ಚಿಸಿದ್ದರು.


Click it and Unblock the Notifications











