BBK 11: ಕಿಚ್ಚನ ಮಾತಿನೇಟಿಗೆ ಗಳ ಗಳ ಅತ್ತ ಮಾನಸ ತುಕಾಲಿ, ಚೈತ್ರಾ ಕುಂದಾಪುರ; ಆಗಿದ್ದೇನು?
ಬಿಗ್ ಬಾಸ್ ಸೀಸನ್ 11 ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ಶೋ. ಆದರೆ, ಈ ಬಾರಿ ಶೋನಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ನಡುವಿನ ಕಿತ್ತಾಟದಿಂದ ಇಬ್ಬರೂ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಲಾಯರ್ ಜಗದೀಶ್ ಹೊರ ಬಂದಿದ್ದಕ್ಕೆ ವೀಕ್ಷಕರು ಈಗಾಗಲೇ ಬೇಸರ ಹೊರ ಹಾಕಿದ್ದಾರೆ. ಲಾಯರ್ ಜಗದೀಶ್ ಅವರನ್ನು ಮನೆ ಮಂದಿ ಪ್ರಚೋದನೆ ಮಾಡಿ ರೊಚ್ಚಿಗೆಬ್ಬಿಸುತ್ತಿದ್ದರು ಎಂದು ಬೇಸರ ಹೊರ ಹಾಕುತ್ತಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಜಗದೀಶ್ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾರೆ ಅನ್ನೋ ಕಾರಣಕ್ಕೆ ಹೊರಗೆ ಬರುವಂತೆ ಹೇಳುತ್ತಾರೆ. ಲಾಯರ್ ಜಗದೀಶ್ ಅವರನ್ನು ಮನೆಯಿಂದ ಹೊರಗಡೆ ಕಳಿಸಬೇಕಾದರೆ ಸ್ಪರ್ಧಿಗಳೆಲ್ಲರೂ ಚಪ್ಪಾಳೆ ತಟ್ಟಿ ಖುಷಿಯನ್ನ ವ್ಯಕ್ತಪಡಿಸುತ್ತಾರೆ. ಆದರೆ ರಂಜಿತ್ ಅವರನ್ನ ಮನೆಯಿಂದ ಹೊರಗಡೆ ಕಳಿಸುವಾಗ ಅತ್ತು ಅವರನ್ನು ಮನೆಯಿಂದ ಬೀಳ್ಕೊಡುತ್ತಾರೆ.

ಜಗಳ ಆಗಬೇಕಾದರೆ ಮಾನಸಾ ಹಾಗೂ ಚೈತ್ರಾ ಕುಂದಾಪುರ ಕೂಡ ಕೆಟ್ಟ ಭಾಷೆಗಳಿಂದ ಜಗದೀಶ್ ಅವರನ್ನು ನಿಂದನೆ ಮಾಡುತ್ತಾರೆ. ಈ ಬಾರಿ ಕಿಚ್ಚನ ಪಂಚಾಯ್ತಿಯಲ್ಲಿ ಮಾನಸಾ ಹಾಗೂ ಚೈತ್ರಾ ಕುಂದಾಪುರ ಸೇರಿದಂತೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ವರ್ತನೆಯನ್ನು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಚೈತ್ರಾ ಅವರು ಲಾಯರ್ ಜಗದೀಶ್ ಅವರಿಗೆ "ನೀನು ಒಬ್ಬ ಅಪ್ಪನಿಗೆ ಹುಟ್ಟಿದವನಾ?" ಎಂದು ಪ್ರಶ್ನೆ ಮಾಡಿದ್ದರು. ಹಾಗೇ ಮಾನಸಾ ಕೂಡ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಕಿಚ್ಚ ಕ್ಲಾಸ್ ತೆಗದುಕೊಂಡಿದ್ದಾರೆ.
ತಮ್ಮಿಂದ ಹಿರಿಯ ವ್ಯಕ್ತಿಗಳಿಗೆ ಮೊದಲು ರೆಸ್ಪೆಕ್ಟ್ ಕೊಡಲು ಅವರಿಗೆ ಹೇಳುತ್ತಾರೆ. ನಾನು ಮೇಡಂ ಎಂದಾಗ ನೀವು ನನ್ನ ತಾಯಿ ಆಗಿ ಬಿಡಲ್ಲ. ಆದರೆ ನೀವು ಆ ತರಹ ಅವರ ಜೊತೆ ಮಾತನಾಡಿರುವುದು ನನಗೆ ಸರಿ ಕಾಣಿಸುತ್ತಿಲ್ಲ. ನನ್ನ ಮಾತುಗಳು ನಿಮಗೆ ಬೇಸರ ಆಗಿರಬಹುದು. ಆದರೆ ನಾನು ನಿಮಗೆ ಈ ವಿಚಾರ ಹೇಳದೆ ಹೋದರೆ ನಿಮ್ಮ ಫ್ಯಾನ್ಸ್ ಕೂಡ ನಮ್ಮನ್ನು ಬಯ್ಯಲು ಶುರು ಮಾಡುತ್ತಾರೆ ಎಂದು ಹೇಳುತ್ತಾರೆ.ಇದನ್ನೆಲ್ಲ ಕೇಳಿದ ಮಾನಸ ಕಣ್ಣಲ್ಲಿ ನೀರು ಬರುತ್ತದೆ. ಇತ್ತ ಚೈತ್ರ ಮಾತಿಗೆ ಕಿಚ್ಚ ಸುದೀಪ್ ಸಖತ್ ಗರಂ ಆಗಿದ್ದಾರೆ.

"ಹೆಣ್ಣು ಮಕ್ಕಳ ಬಗ್ಗೆ ನೀವು ಇನ್ನೂ ಮಾತನಾಡಬಾರದು. ಯಾಕೆಂದರೆ ನೀವು ಒಬ್ಬ ಅಪ್ಪನಿಗೆ ಹುಟ್ಟಿದವನಾ ಎಂದು ಕೇಳಿದ್ದು ಜಗದೀಶ್ ಅವರ ತಂದೆಗೆ ಬೈದ ಮಾತಲ್ಲ, ಅವರ ತಾಯಿಗೆ ಬೈದ ಮಾತು. ಎಂತಹ ಪದ ಬಳಕೆ ಮಾಡಿದ್ದೀರಿ ಚೈತ್ರಾ, ನೀವು ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ. ಇದಕ್ಕೆ ಕ್ಷಮೆ ಮಾತ್ರ ಕೇಳಬೇಡಿ" ಎಂದು ಚೈತ್ರಾ ಕುಂದಾಪುರ ಮೇಲೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಇತ್ತ ಭವ್ಯಾ ಹಾಗೂ ಉಗ್ರಂ ಮಂಜುಗೆ ಅವರನ್ನೂ ಕಿಚ್ಚ ತರಾಟೆಗೆ ತೆಗೆದುಕೊಂಡರು. ಮಂಜು ಜಪ್ಪಲಿಯನ್ನು ಎಲ್ಲರ ಮುಂದೆ ಬಿಸಾಡಿರುವುದಕ್ಕೆ ಕಿಚ್ಚ ಸುದೀಪ್ ಬೇಸರ ಮಾಡಿಕೊಂಡಿದ್ದಾರೆ.
"ಭವ್ಯಾ ಅವರಿಗೆ ತಲೆ ಎತ್ತಿ ಮಾತನಾಡಿ. ನೀವು ಈಗಾಗಲೇ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದೀರಾ ಅಷ್ಟೇ. ನೀವು ಜಗದೀಶ್ ಅವರನ್ನು ತಳ್ಳಲಿಲ್ವಾ?" ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಆಗ ಭವ್ಯಾಗೆ ಏನು ಮಾತನಾಡಬೇಕು ಎಂದು ತಿಳಿಯದೇ ತಲೆಯಾಡಿಸಿದರು. ಆಗ ಕಿಚ್ಚ ಸುದೀಪ್ "ನೀವು ಒಬ್ಬ ಗಂಡಸನ್ನು ತಳ್ಳಲು ಹೋಗುತ್ತೀರಾ. ಆದರೆ ಅದೇ ಗಂಡಸು ನಿಮ್ಮನ್ನು ತಳ್ಳಿದ್ದರೆ ಏನಾಗುತ್ತಿತ್ತು. ಒಮ್ಮೆ ಆಲೋಚನೆ ಮಾಡಿದ್ದೀರಾ?" ಎಂದು ಭವ್ಯಾಗೆ ಖಡಕ್ ಆಗಿ ಪ್ರಶ್ನೆ ಮಾಡುತ್ತಾರೆ.
ಇಷ್ಟೆಲ್ಲ ಆದ ಬಳಿಕ ಜಗದೀಶ್ ಅವರನ್ನು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿಸಲಾಗುತ್ತದೆ. ರಂಜಿತ್ ಬಗ್ಗೆ ಬಹಳ ಬೇಸರ ವ್ಯಕ್ತ ಪಡಿಸಿದ ಜಗದೀಶ್ "ರಂಜಿತ್ ಬಿಗ್ ಬಾಸ್‌ಗೆ ಬರಲು ಬಹಳ ಕಷ್ಟ ಪಟ್ಟಿದ್ದ. ಆತನೇ ಆತನ ಕನಸಿನ ಬಗ್ಗೆ ಎಲ್ಲರ ಜೊತೆ ಹೇಳಿಕೊಂಡಿದ್ದ. ಆದರೆ, ಇದೀಗ ಆತನನ್ನು ಎಲ್ಲರೂ ಸೇರಿ ಬಲಿ ಪಶು ಮಾಡಿಬಿಟ್ಟೆವು. ನಾನು ಎಲ್ಲರ ಮಾತುಗಳನ್ನು ಸಹಿಸಿಕೊಳ್ಳಬಹುದಾಗಿತ್ತು. ಆದರೆ ನನಗೆ ಬಹಳ ಕೋಪ ಬಂದು ಬಿಟ್ಟಿತು. ಎಲ್ಲರೂ ಸಣ್ಣ ಸಣ್ಣ ಮಕ್ಕಳು. ಜೀವನದಲ್ಲಿ ಏನೇನೋ ಕನಸುಗಳನ್ನು ಹೊತ್ತು ಬಂದಿರುತ್ತಾರೆ. ಪಾಪ ಅಂತವರಿಗೆ ನಾನು ಈ ಥರ ಕೋಪದಿಂದ ಮಾತುಗಳನ್ನು ಆಡಬಾರದಾಗಿತ್ತು" ಎಂದು ಹೇಳಿದ್ದು ಹೈಲೈಟ್ ಆಗಿದೆ.


Click it and Unblock the Notifications










