BBK 11; ಬಿಗ್‌ಬಾಸ್‌ಗೂ ಮುನ್ನ ಮೋಕ್ಷಿತಾ ಮನೆಗೆ ಮದುಮಗನಾಗಿ ಹೋಗಿದ್ರಾ ಧನರಾಜ್?
ಮೋಕ್ಷಿತಾ ಪೈ ಹಾಗೂ ಧನರಾಜ್ ಅಂದಾಕ್ಷಣ ಬಿಗ್‌ಬಾಸ್ ನೆನಪಾಗುತ್ತದೆ. ಕಿರುತೆರೆ ನಟಿಯಾಗಿ ಮೋಕ್ಷಿತಾ ಜನಪ್ರಿಯತೆ ಸಾಧಿಸಿದ್ದರೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಧನರಾಜ್ ವೈರಲ್ ಆಗಿದ್ದರು. ಇಬ್ಬರಿಗೂ ದೊಡ್ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಈಗಾಗಲೇ ಇಬ್ಬರೂ 90 ದಿನಕ್ಕೂ ಹೆಚ್ಚು ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ.
ಆಟ ಕೊನೆಯ ಹಂತಕ್ಕೆ ಬಂದು ನಿಂತಿದೆ. ಗ್ರ್ಯಾಂಡ್ ಫಿನಾಲೆಗೆ ಎರಡು ವಾರ ಮಾತ್ರ ಬಾಕಿಯಿದೆ. ಆಟದ ತೀವ್ರತೆ ಹೆಚ್ಚಾಗಿದೆ. ಇನ್ನು ಬಿಗ್‌ಬಾಸ್ ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಧನರಾಜ್ ಹಾಗೂ ಮೋಕ್ಷಿತಾ ಹಾವು- ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಆದರೆ ನಿಮಗೆ ಗೊತ್ತಾ? ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಇಬ್ಬರಿಗೂ ಪರಿಚಯ ಇತ್ತು ಅಂತ.

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಗೆ ಯಾರು ಯಾರು ಹೋಗುತ್ತಾರೆ ಎನ್ನುವುದು ಕೊನೆಯವರೆಗೂ ಗೊತ್ತಾಗಲ್ಲ, ಸಾಧ್ಯವಾದಷ್ಟು ಒಬ್ಬರಿಗೆ ಒಬ್ಬರು ಪರಿಚಯ ಇಲ್ಲದಂತಹ ವ್ಯಕ್ತಿಗಳನ್ನು ಮನೆಯೊಳಗೆ ಕಳುಹಿಸುತ್ತಾರೆ. 'ಪಾರು' ಧಾರಾವಾಹಿಯಲ್ಲಿ ನಟಿಸಿ ಮೋಕ್ಷಿತಾ ಮನೆ ಮಾತಾಗಿದ್ದರು. ಇನ್ನು ತಮ್ಮ ಕಾಮಿಡಿ ವೀಡಿಯೋಗಳಿಂದ ಕರಾವಳಿ ಭಾಗದಲ್ಲಿ ಧನರಾಜ್ ಗಮನ ಸೆಳೆದಿದ್ದರು.
ಬಿಗ್‌ಬಾಸ್ ಮನೆಯೊಳಗೆ ಹೋಗುವ ಮುನ್ನ ಧನರಾಜ್ ಹಾಗೂ ಮೋಕ್ಷಿತಾ ಪರಿಚಯ ಇರಲಿಲ್ಲ ಎಂದೇ ಸಾಕಷ್ಟು ಜನ ಅಂದುಕೊಂಡಿದ್ದರು. ಆದರೆ ಇಬ್ಬರೂ ಒಂದು ಯೂಟ್ಯೂಬ್ ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು ಎನ್ನುವುದು ನಿಮಗೆ ಗೊತ್ತಾ? ಅಚ್ಚರಿ ಅಂದರೆ ಆ ಕಾಮೆಡಿ ವೀಡಿಯೋದಲ್ಲಿ ಧನರಾಜ್ ಪತ್ನಿ ಪ್ರಜ್ಞಾ ಕೂಡ ಕಾಣಿಸಿಕೊಂಡಿದ್ದರು.
'ಮದುಮಗ' ಎಂಬ ಕಾಮಿಡಿ ವೆಬ್ ಸೀರಿಸ್‌ನಲ್ಲಿ ಧನು ಹಾಗೂ ಮೋಕ್ಷಿ ಒಟ್ಟಿಗೆ ನಟಿಸಿದ್ದರು. ಮೋಕ್ಷಿತಾ ಮನೆಗೆ ಹೆಣ್ಣು ನೋಡಲು ಧನರಾಜ್ ಬರುವಂತಹ ಸನ್ನಿವೇಶ ಅದು. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಆ ವೀಡಿಯೋದಲ್ಲಿ ನೋಡಬಹುದು. ಇದ್ದಕ್ಕಿದ್ದಂತೆ ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಒಬ್ಬರಿಗೊಬ್ಬರು ಗೊತ್ತಿಲ್ಲ ಅಂದ್ರು, ಆದರೆ ಮೊದಲೇ ಒಟ್ಟಿಗೆ ನಟಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಮದುಮಗ ಧನರಾಜ್ ಜೊತೆ ಸಂಬಂಧಿಕರ ಹುಡುಗಿಯಾಗಿ ಪ್ರಜ್ಞಾ ಕೂಡ ಆ ಕಾಮಿಡಿ ಸೀರಿಸ್‌ನಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ಮೋಕ್ಷಿತಾ ಅವರ ಹಳೇ ಪ್ರಕರಣವೊಂದರ ವೀಡಿಯೋ ವೈರಲ್ ಆಗಿ ಇದೇ ರೀತಿ ಸದ್ದು ಮಾಡಿತ್ತು. ಇದೀಗ 'ಮದುಮಗ' ಕಾಮೆಡಿ ವೆಬ್ ಸೀರಿಸ್ ಸರದಿ. ಯೂಟ್ಯೂಬ್‌ನಲ್ಲಿ ಇಂತಹ ಸಾಕಷ್ಟು ಕಾಮಿಡಿ ವೆಬ್ ಸೀರಿಸ್ ಬರುತ್ತವೆ. ಅದರಲ್ಲಿ ಸಾಕಷ್ಟು ಯುವ ಪ್ರತಿಭೆಗಳು ನಟಿಸಿರುತ್ತಾರೆ. ಅದೇ ರೀತಿ ಧನರಾಜ್- ಮೋಕ್ಷಿತಾ ನಟಿಸಿದ್ದ ವೀಡಿಯೋ ಇದು ಎನ್ನುವುದು ಗೊತ್ತಾಗುತ್ತಿದೆ.
ಅಂದಹಾಗೆ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಧನರಾಜ್ ಭಾಗವಹಿಸಿದ್ದರು. 'ಅಬ್ಬಬ್ಬಾ' ಎಂಬ ಒಂದು ತುಳು ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ಹನುಮಂತ ಬಿಟ್ಟರೆ ಬೇರೆ ಯಾರೊಟ್ಟಿಗೂ ಧನರಾಜ್ ಹೆಚ್ಚು ಸ್ನೇಹ ಬೆಳೆಸಲಿಲ್ಲ. ಇವರಿಬ್ಬರು ಬಹಳ ಆತ್ಮೀಯ ಸ್ನೇಹಿತರಾಗಿ ಗುರ್ತಿಸಿಕೊಂಡಿದ್ದಾರೆ.
ಮೊದಲಿಗೆ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಜೊತೆ ಮೋಕ್ಷಿತಾ ಸ್ನೇಹ ಬೆಳೆಸಿದಿದ್ದರು. ಮೂವರು ಒಂದು ತಂಡ ಎನ್ನುವಂತೆ ಕೆಲ ದಿನಗಳ ಕಾಲ ಗುರ್ತಿಸಿಕೊಂಡಿದ್ದರು. ಆದರೆ ಇದೀಗ ಮೂವರ ಸ್ನೇಹದಲ್ಲಿ ಬಿರುಕು ಮೂಡಿ ದೂರಾಗಿದ್ದಾರೆ. ಧನರಾಜ್ ಹಾಗೂ ಮೋಕ್ಷಿತಾ ಇಬ್ಬರಲ್ಲಿ ಒಬ್ಬರು ಫಿನಾಲೆಗೆ ಹೋಗುವ ನಿರೀಕ್ಷೆಯಿದೆ. ಈ ವೀಕೆಂಡ್ ಒಬ್ಬರು ಎಲಿಮಿನೇಟ್ ಆದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











