BBK 11 Grand Finale: ಈ ಬಾರಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಸಿಕ್ಕ ಮತಗಳ ಲೆಕ್ಕ ಕೊಟ್ಟ ಕಿಚ್ಚ
ಅಂತೂ ಇಂತೂ ಬಿಗ್‌ಬಾಸ್ ಕನ್ನಡ ಸೀಸನ್ 11ರ ಅಂತಿಮ ಘಟ್ಟಕ್ಕೆ ಬಂದಾಗಿದೆ. ಗ್ರ್ಯಾಂಡ್ ಫಿನಾಲೆ ಕೂಡ ಶುರುವಾಗಿದೆ. 6 ಜನ ಫೈನಲಿಸ್ಟ್‌ಗಳಲ್ಲಿ ಯಾರು ಗೆಲ್ತಾರೆ? ಯಾರಿಗೆ ಎರಡನೇ ಸ್ಥಾನ? ಎನ್ನುವ ಕುತೂಹಲ ಇದೆ. ಈಗಾಗಲೇ ಶನಿವಾರದ ಸಂಚಿಕೆ ಚಿತ್ರೀಕರಣ ಕೂಡ ಮುಗಿದಿದೆ.
ಈ ಬಾರಿ ಬಿಗ್‌ಬಾಸ್ ಫಿನಾಲೆ ಬಹಳ ರಸವತ್ತಾಗಿದೆ. ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್ ಹೆಚ್ಚು ಕ್ರೇಜ್ ಹುಟ್ಟುಹಾಕಿದೆ. ಅದಕ್ಕೆ ತಕ್ಕಂತೆ ಶೋಗೆ ಟಿಆರ್‌ಪಿ ಕೂಡ ಸಿಕ್ಕಿತ್ತು. ಇದು ಸುದೀಪ್ ನಿರೂಪಣೆಯಲ್ಲಿ ಕೊನೆಯ ಸೀಸನ್. ಕೊನೆಯ ಫಿನಾಲೆ. ಹಾಗಾಗಿ ಹೆಚ್ಚು ಜನ ವೀಕ್ಷಿಸುತ್ತಿದ್ದಾರೆ. ಇನ್ನು ಫಿನಾಲೆ ವೇದಿಕೆಯಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಸುದೀಪ್ ಹೇಳುತ್ತಿದ್ದಾರೆ.

ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳನ್ನು, ಫೈನಲಿಸ್ಟ್‌ಗಳನ್ನು ಜೊತೆಗೆ ಅವರ ಕುಟುಂಬಸ್ಥರ ಕಾಲು ಎಳೆಯುತ್ತಾ ಕಿಚ್ಚ ಭರ್ಜರಿ ಮನರಂಜನೆ ಉಣಬಡಿಸುತ್ತಿದ್ದಾರೆ. ಅದರ ಜೊತೆಗೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿದೆ. ಇನ್ನು ಈ ಬಾರಿ ಸ್ಪರ್ಧಿಗಳಿಗೆ ಸಿಕ್ಕ ಮತಗಳ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.
ದೊಡ್ಮನೆ ಒಳಗೆ ಯಾರು ಇರಬೇಕು? ಯಾರು ಎಲಿಮಿನೇಟ್ ಆಗಬೇಕು? ಎನ್ನುವುದನ್ನು ವೀಕ್ಷಕರ ಮತಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಈ ಬಗ್ಗೆ ಕೆಲವರಿಗೆ ಅಸಮಾಧಾನವೂ ಇದೆ. ಇಡೀ ಶೋ ಸ್ಕ್ರಿಪ್ಟೆಡ್. ನಾವು ಮಾಡುವ ಮತಗಳನ್ನು ಗಣನೆಗೆ ತೆಗೆದುಕೊಂಡು ಸ್ಪರ್ಧಿಗಳನ್ನು ಉಳಿಸಿಕೊಳ್ಳುವುದು, ಗೆಲ್ಲಿಸುವುದು ಮಾಡಲ್ಲ ಎಂದು ಕೆಲವರು ಅಪಸ್ವರ ಎತ್ತುತ್ತಲೇ ಇರುತ್ತಾರೆ. ಆಯೋಜಕರು ತಮಗೆ ಬೇಕಾದವರನ್ನು ಉಳಿಸಿಕೊಳ್ಳುತ್ತಾರೆ, ಬೇಡದವರನ್ನು ಹೊರಗೆ ಕಳುಹಿಸುತ್ತಾರೆ. ವಿಜೇತರ ಆಯ್ಕೆಯಲ್ಲೂ ಇದೇ ಆಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯ.
ಪ್ರತಿ ವಾರ ಎಲಿಮಿನೇಷನ್ ಆಗುವವರನ್ನು ಉಳಿಸಿಕೊಳ್ಳಲು ವೋಟಿಂಗ್ ಲೈನ್‌ಗಳು ಓಪನ್ ಆಗುತ್ತದೆ. ವೀಕ್ಷಕರು ತಮ್ಮ ಇಷ್ಟದ ಸ್ಪರ್ಧಿಗೆ ವೋಟ್ ಮಾಡಿ ಅವರನ್ನು ಸೇವ್ ಮಾಡಬಹುದು. ಇನ್ನು ಯಾರು ಗೆಲ್ಲಬೇಕು ಎಂದು ವೋಟ್ ಮಾಡಿ ಹೇಳಬಹುದು. ಈ ಬಾರಿ ಸ್ಪರ್ಧಿಗಳಿಗೆ ಸಿಕ್ಕ ವೋಟ್‌ಗಳ ಬಗ್ಗೆ ಫಿನಾಲೆ ವೇದಿಕೆಯಲ್ಲಿ ಸುದೀಪ್ ಮಾತನಾಡಿದ್ದಾರೆ.
ಕಳೆದ ಸೀಸನ್ ಬಹಳ ಜನಪ್ರಿಯತೆ ಸಾಧಿಸಿತ್ತು. ಅಲ್ಲಿವರೆಗೂ ಯಾವ ಸೀಸನ್‌ಗೂ ಸಿಗದ್ದಷ್ಟು ಮತಗಳು ಬಂದಿದ್ದವು. ಮುಖ್ಯವಾಗಿ ಫಿನಾಲೆಗೆ ಬಂದಿದ್ದ 6 ಜನರಿಗೆ ಕೋಟಿ ಲೆಕ್ಕಗಳಲ್ಲಿ ಮತಗಳು ಬಂದಿತ್ತು. ಈ ಬಗ್ಗೆ ಆಗ ಕೂಡ ಸುದೀಪ್ ಮಾತನಾಡಿದ್ದರು. ಆದರೆ ಈ ಬಾರಿ ಅದಕ್ಕಿಂತ ಜಾಸ್ತಿ ಮತಗಳು ಬಂದಿದೆ ಎಂದು ಸುದೀಪ್ ಹೇಳಿದ್ದಾರೆ.
ಈ ಬಾರಿ ಬಿಗ್‌ಬಾಸ್ ವಿಜೇತರಿಗೆ 5 ಕೋಟಿಗೂ ಅಧಿಕ(52389318) ಮತಗಳು ಬಂದಿದೆ. ಅದೇ ರೀತಿ ಮೊದಲಿಗೆ ಎಲಿಮಿನೇಟ್ ಆಗಿ ಹೊರ ಬರುತ್ತಿರುವ ಸ್ಪರ್ಧಿಗೆ 6 ಲಕ್ಷಕ್ಕೂ ಹೆಚ್ಚು ಮತಗಳು(6448853) ಸಿಕ್ಕಿದೆ ಎಂದು ಸುದೀಪ್ ಘೋಷಿಸಿದ್ದಾರೆ. ಕಳೆದ ಸೀಸನ್‌ಗಿಂತ ಈ ಬಾರಿ ಡಬಲ್ ವೋಟ್ಸ್ ಬಂದಿದೆ. ಆ ಸೀಸನ್‌ನಲ್ಲಿ ಗೆದ್ದವರಿಗೆ ಬಂದಿದ್ದ ಹೆಚ್ಚುಕಮ್ಮಿ ಮತಗಳು ಈ ಬಾರಿ ಕೊನೆ ಸ್ಥಾನದಲ್ಲಿ ಇರುವವರಿಗೆ ಸಿಕ್ಕಿದೆ ಎಂದು ಸುದೀಪ್ ತಿಳಿಸಿದ್ದಾರೆ.


Click it and Unblock the Notifications











