BBK 11; ಡಬಲ್ ಎಲಿಮಿನೇಷನ್, ಔಟ್ ಆಗಿದ್ಯಾರು? ಕ್ವಿಟ್ ಮಾಡಿದ್ಯಾರು?
ಬಿಗ್‌ಬಾಸ್ ಮನೆಯಿಂದ ಈ ವಾರ ಒಬ್ಬರಲ್ಲ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಅದು ನಿಜ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಈ ವಾರ ದೊಡ್ಮನೆ ತೊರೆಯಲು ಘಟಾನುಘಟಿಗಳೇ ನಾಮಿನೇಟ್ ಆಗಿದ್ದರು. ಅದರಲ್ಲಿ ಇಬ್ಬರು ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದಾರೆ ಎನ್ನಲಾಗ್ತಿದೆ.
ಅಂದಹಾಗೆ ಈ ವಾರ ಹನುಮಂತ, ಭವ್ಯ ಗೌಡ, ಧನರಾಜ್, ತ್ರಿವಿಕ್ರಮ್, ಶಿಶಿರ್, ರಜತ್, ಮೋಕ್ಷಿತಾ ಹಾಗೂ ಚೈತ್ರಾ ನಾಮಿನೇಟ್ ಆಗಿದ್ದರು. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಇಬ್ಬರು ಸೇವ್ ಆಗಿದ್ದಾರೆ. ಹನುಮಂತ ಹಾಗೂ ತ್ರಿವಿಕ್ರಮ್ ಅವರನ್ನು ಸುದೀಪ್ ಸೇಫ್ ಮಾಡಿದ್ದಾರೆ. ಇನ್ನುಳಿದವರಲ್ಲಿ ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಹಾಗಾಗಿ ಈ ವಾರ ಸಹಜವಾಗಿಯೇ ಡಬಲ್ ಎಲಿಮಿನೇಷನ್ ನಡೆಯಬೇಕಿತ್ತು. ಅಂದುಕೊಂಡಂತೆ ಇಬ್ಬರು ಹೊರ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಬ್ಬರು ಎಲಿಮಿನೇಟ್ ಆಗಿರುವುದನ್ನು ಸುದೀಪ್ ತಿಳಿಸಿದ್ದಾರೆ. ಆದರೆ ಮತ್ತೊಬ್ಬರು ತಾವಾಗಿಯೇ ವೈಯಕ್ತಿಕ ಕಾರಣ ಕೊಟ್ಟು ಹೊರ ಬಂದಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.
ಈ ವಾರ ಶಿಶಿರ್ ಶಾಸ್ತ್ರಿ ಬಿಗ್‌ಬಾಸ್ ಮನೆಯ ಆಟ ಮುಗಿಸಿ ಹೊರಬಂದಿದ್ದಾರೆ. ಇನ್ನು ಗೋಲ್ಡ್ ಸುರೇಶ್ ಆಟವನ್ನು ಕ್ವಿಟ್ ಮಾಡಿದ್ದಾರೆ ಎನ್ನಲಾಗ್ತಿದೆ. ವೈಯಕ್ತಿಕ ಕಾರಣಗಳಿಂದ ತಾವಾಗಿಯೇ ಹೊರ ಬರಲು ಅವರು ನಿರ್ಧರಿಸಿದ್ದಾರೆ ಎಂದು ಗುಲ್ಲಾಗಿದೆ. ಒಟ್ಟಾರೆ ಈ ವಾರ ಇಬ್ಬರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ನಿರೀಕ್ಷಿಸಿದಂತೆ ಸುದೀಪ್ ಈ ವಾರ ತಪ್ಪು ಮಾಡಿದವರಿಗೆ ಮಾತಿನ ಪೆಟ್ಟು ಕೊಟ್ಟರು. ಮೋಕ್ಷಿತಾ, ಐಶ್ವರ್ಯ ಹಾಗೂ ರಜತ್‌ಗೆ ಸರಿಯಾಗಿ ಕ್ಲಾಸ್ ತಗೊಂಡರು. ಮುಖ್ಯವಾಗಿ ರಜತ್ ಹಾಗೂ ಧನರಾಜ್ ಕಿರಿಕ್ ವಿಚಾರದ ಬಗ್ಗೆ ಬಹಳ ಹೊತ್ತು ಮಾತನಾಡಿದರು. ಇಬ್ಬರಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎಂದು ಸುದೀಪ್ ತಿಳಿ ಹೇಳಿದರು.
ಧನರಾಜ್‌ಗೆ ಕೂಡ ನಯವಾಗಿಯೇ ಸುದೀಪ್ ಮಾತಲ್ಲೇ ತಿವಿದರು. ಈ ವೇಳೆ ಮಾತನಾಡುತ್ತಾ ಭಾವುಕರಾಗಿ ಧನರಾಜ್ ಕ್ಷಮೆ ಕೇಳಿದರು. ರಜತ್ ಹಾಗೂ ಧನರಾಜ್ ತಬ್ಬಿಕೊಂಡು ಎಲ್ಲದ್ದಕ್ಕೂ ತೆರೆ ಎಳೆದರು. ರಜತ್ ಪದ ಬಳಕೆ ಬಗ್ಗೆ ಸುದೀಪ್ ಎಚ್ಚರಿಕೆ ಕೊಟ್ಟರು. ಕೊನೆಗೆ ಒಂದು ಶಿಕ್ಷೆ ಕೂಡ ಕಾದಿತ್ತು.
ಒಂದು ಪಂಜರವನ್ನು ಮನೆಯೊಳಗೆ ತಂದು ಅದರಲ್ಲಿ ರಜತ್ ಅವರನ್ನು ಬಂಧಿಸಲಾಗಿತ್ತು. ಇನ್ನು ಮುಂದೆ ಬಿಗ್‌ಬಾಸ್ ಆದೇಶದವರೆಗೂ ರಜತ್ ಪಂಜರದ ಒಳಗೆ ಇರಬೇಕು. ಎಲ್ಲೇ ಹೋಗಬೇಕು ಅಂದರೂ ಧನರಾಜ್ ಬಳಿ ಮನೆ ಮಾಡಿಕೊಳ್ಳಬೇಕು. ಧನರಾಜ್ ಪಂಜರ ಎಳೆದುಕೊಂಡು ಹೋಗಿ ಅಲ್ಲಿಗೆ ಬಿಡಬೇಕು, ಇದು ಇಬ್ಬರಿಗೂ ಸಿಕ್ಕಿರುವ ಶಿಕ್ಷೆ.
ಬಿಗ್‌ಬಾಸ್ ಕನ್ನಡ ಸೀಸನ್ 11 ಇದೀಗ 75 ದಿನ ಪೂರೈಸಿದೆ. ಉಗ್ರಂ ಮಂಜು, ಮೋಕ್ಷಿತಾ ಗೌತಮಿ ಜಾಧವ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಹನುಮಂತ, ರಜತ್, ಧನರಾಜ್ ಸೇರಿ ಘಟಾನುಘಟಿ ಸ್ಪರ್ಧಿಗಳೇ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇನ್ನು 3 ವಾರಗಳಲ್ಲಿ ಯಾರೆಲ್ಲಾ ಎಲಿಮಿನೇಟ್ ಆಗುತ್ತಾರೆ? ಯಾರು ಫಿನಾಲೆಗೆ ಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಮುಂದಿನ ನಾಲ್ಕು ವಾರ ಮಾತ್ರ ಸುದೀಪ್ ಬಿಗ್‌ಬಾಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಂದಿನ ಸೀಸನ್ ನಾನು ನಿರೂಪಣೆ ಮಾಡಲ್ಲ ಎಂದು ಕಿಚ್ಚ ಈಗಾಗಲೇ ಘೋಷಣೆ ಮಾಡಿದ್ದಾರೆ. ಹಾಗಾಗಿ ಸೀಸನ್ 11ರ ಫಿನಾಲೆ ಬಳಿಕ ವಾರದ ಕತೆ ಕಿಚ್ಚನ ಜೊತೆ ಹಾಗೂ ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್‌ಗಳನ್ನು ವೀಕ್ಷಕರು ಮಿಸ್ ಮಾಡಿಕೊಳ್ಳಲಿದ್ದಾರೆ.


Click it and Unblock the Notifications











