Dodmane Habba: ಮತ್ತೆ ಒಂದಾದ ಬಿಗ್‌ಬಾಸ್ ಸ್ಪರ್ಧಿಗಳು, ಮಾತು, ಹರಟೆ, ಫನ್; ಇಲ್ಲಿದೆ ನೋಡಿ ಗಿಲ್ಲಿ ಕಾಮಿಡಿ ಪಂಚ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ ಸೀಸನ್ 12 ಶೋ ಸೂಪರ್ ಹಿಟ್ ಆಗಿತ್ತು. ಹಿಂದಿನ ಎಲ್ಲಾ ಸೀಸನ್‌ಗಳನ್ನು ಮೀರಿಸಿ ಕ್ರೇಜ್ ಸಂಪಾದಿಸಿಯತ್ತು. ಗಿಲ್ಲಿ ಕಾಮಿಡಿಗೆ ವೀಕ್ಷಕರು ಫಿದಾ ಆಗಿದ್ದರು. ಇದೀಗ ಮತ್ತೆ ಬಿಗ್‌ಬಾಸ್ ಮನೆ ಸ್ಪರ್ಧಿಗಳೆಲ್ಲಾ ಒಂದ್ಕಡೆ ಸೇರಿ ಮಸ್ತ್ ಎಂಜಾಯ್ ಮಾಡಿದ್ದಾರೆ.
'ದೊಡ್ಮನೆ ಹಬ್ಬ' ಹೆಸರಿನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ರಿಯೂನಿಯನ್ ನಡೆದಿದೆ. ಕಲರ್ಸ್ ಕನ್ನಡ ವಿಶೇಷ ಕಾರ್ಯಕ್ರಮ ಚಿತ್ರೀಕರಣವಾಗಿದೆ. ಗಿಲ್ಲಿ, ರಕ್ಷಿತಾ, ಕಾವ್ಯಾ, ಅಶ್ವಿನಿ ಗೌಡ ಹಾಗೂ ರಘು ಎಲ್ಲರೂ ಮತ್ತೊಮ್ಮೆ ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ. ಗಿಲ್ಲಿ ಕಾಮಿಡಿ ಪಂಚ್‌ಗಳ ಮೂಲಕ ಗಮನ ಸೆಳೆದಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ.

ಸ್ಪರ್ಧಿಗಳೆಲ್ಲಾ ಒಂದ್ಕಡೆ ಸೇರಿ ಫನ್ ಗೇಮ್ಸ್ ಆಡಿದ್ದಾರೆ. ಬಿಗ್‌ಬಾಸ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂದು ಮೆಲುಕು ಹಾಕಿದ್ದಾರೆ. ಫೆಬ್ರವರಿ 14ರಂದು ಸಂಜೆ 6 ಗಂಟೆಗೆ 'ದೊಡ್ಮನೆ ಹಬ್ಬ' ಕಾರ್ಯಕ್ರಮ ಪ್ರಸಾರವಾಗಲಿದೆ.
ಬಿಗ್‌ಬಾಸ್ 12 ಶೋ ಮುಗಿದ ಬಳಿಕ ಎಲ್ಲರೂ ಕಲರ್ಸ್ ಕನ್ನಡ ವಾಹಿನಿಯನ್ನು ಮರೆತುಬಿಟ್ಟಿದ್ದರು. ಈ ಪ್ರೋಮೊ ಮೂಲಕ ಮತ್ತೆ ಕಲರ್ಸ್ ಕನ್ನಡ ಖದರ್ ಶುರುವಾಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ಸುಷ್ಮಾ ರಾವ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.
ರಘು, ಅಶ್ವಿನಿ ಗೌಡ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಸ್ಪರ್ಧಿಗಳ ಜೊತೆಗೆ ಅವರ ಫ್ಯಾಮಿಲಿ ಸದಸ್ಯರು ಕೂಡ ವೇದಿಕೆ ಏರಿದ್ದಾರೆ. ರಕ್ಷಿತಾ ಮಾತಿಗೆ "ಇದು ನಾಮಿನೇಷನ್ ಅಲ್ಲ" ಎಂದು ಗಿಲ್ಲಿ ಕಾಲೆಳೆದಿದ್ದಾರೆ. ಇನ್ನು ಗಿಲ್ಲಿ ಕಾರಣಕ್ಕೆ ಕಾವ್ಯಾ ಹಾಗೂ ರಕ್ಷಿತಾ ಕಿತ್ತಾಡಿದ್ದು "ನೀವಿಬ್ಬರು ಏನು ಅಂತ ಇನ್ನು ಡಿಸೈಡ್ ಆಗಿಲ್ವಾ" ಎಂದು ಗಿಲ್ಲಿ ತಮಾಷೆ ಮಾಡಿದ್ದಾರೆ.
ಸೂರಜ್, ರಾಶಿಕಾ ಜೋಡಿಯಾಗಿ ಗೇಮ್ಸ್ ಆಡಿದ್ದಾರೆ. ಒಟ್ಟಾರೆ ಮತ್ತೆ ವೇದಿಕೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲರೂ ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ತಮಿಳಿನಲ್ಲಿ ಕೂಡ 'ಬಿಗ್‌ಬಾಸ್ ಕೊಂಡಾಟಂ' ಹೆಸರಿನಲ್ಲಿ ಸೀಸನ್ 9ರ ಸ್ಪರ್ಧಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ನಡೆದಿದೆ.
ವ್ಯಾಲಂಟೈನ್ಸ್ ಡೇ ಹಾಗೂ ಶಿವರಾತ್ರಿ ಸಂಭ್ರಮದಲ್ಲಿ 'ದೊಡ್ಮನೆ ಹಬ್ಬ' ಕಾರ್ಯಕ್ರಮ ಕಿರುತೆರೆಯಲ್ಲಿ ಕಳೆ ಕಟ್ಟಲಿದೆ. ವೀಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಲಿದೆ. ಗಿಲ್ಲಿಯನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾಯುವಂತಾಗಿದೆ. ಹಿಂದಿನ ಯಾವುದೇ ಸೀಸನ್ ಸ್ಪರ್ಧಿಗಳಿಗೆ ಸಿಗದ ಕ್ರೇಜ್ ಈ ಸೀಸನ್ ಸ್ಪರ್ಧಿಗಳಿಗೆ ಸಿಕ್ಕಿದೆ. ಅದರಲ್ಲೂ ಗಿಲ್ಲಿಗೆ ನೆಕ್ಸ್ಟ್ ಲೆವೆಲ್ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ 112 ದಿನಗಳ ಕಾಲ ಉಳಿದುಕೊಂಡು ಗಿಲ್ಲಿ ಗೆದ್ದಿದ್ದರು. ಭಾರೀ ವೋಟ್‌ಗಳ ವ್ಯತ್ಯಾಸದಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದರು. ರಕ್ಷಿತಾ ರನ್ನರ್ ಅಪ್ ಆಗಿದ್ದರೆ ಅಶ್ವಿನಿ ಗೌಡ 2ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಾವ್ಯಾ, ರಘು, ಧನುಷ್ ಕೂಡ ಫಿನಾಲೆವರೆಗೂ ಹೋಗಿದ್ದರು.
ಗಿಲ್ಲಿ ಹಾಗೂ ಕಾವ್ಯಾ ಫ್ರೆಂಡ್‌ಶಿಪ್ ಬಿಗ್‌ಬಾಸ್ ಮನೆಯಲ್ಲಿ ಗಮನ ಸೆಳೆದಿತ್ತು. ಅದೇ ರೀತಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವಿನ ಶೀತಲ ಸಮರ ಕೂಡ ಹೈಲೆಟ್ ಆಗಿತ್ತು. ಶೋ ಮುಗಿದ ಬಳಿಕ ಅಶ್ವಿನಿ ನಾನೇ ಗೆಲ್ಲಬೇಕಿತ್ತು ಎಂದರು. ಗಿಲ್ಲಿ ಕಾಮಿಡಿ ಮಾಡಿ, ಬಡವರ ಮನೆ ಹುಡುಗ ಎನ್ನುವಂತೆ ನಾಟಕ ಮಾಡಿ ಗೆದ್ದುಬಿಟ್ಟ ಎಂದು ಬೇಸರ ವ್ಯಕ್ತಪಡಿಸಿದ್ದರು.


Click it and Unblock the Notifications











