BBK12: ಭಾರೀ ಚರ್ಚೆಗೆ ಗ್ರಾಸವಾಯಿತು ಪ್ರೀ- ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೊಟ್ಟ ಹೇಳಿಕೆ
ಎಲ್ಲೆಲ್ಲೂ ಈಗ ಬಿಗ್‌ಬಾಸ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಫಿನಾಲೆ ಹೊತ್ತಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹೆಚ್ಚಾಗುತ್ತಿದೆ. ಶೋನಲ್ಲಿ ಆಡುವ ಪ್ರತಿ ಮಾತಿನ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿಬಿಟ್ಟಿದೆ. ಕೊನೆಗೆ ಕಿಚ್ಚ ಸುದೀಪ್ ಹೇಳಿಕೆಯನ್ನು ಪ್ರಶ್ನಿಸಿ ನೆಟ್ಟಿಗರು ವಾದ-ಪ್ರತಿವಾದ ಆರಂಭಿಸಿದ್ದಾರೆ.
ಬಿಗ್‌ಬಾಸ್ ಫಿನಾಲೆ ಹೊತ್ತಲ್ಲಿ ಶೋ ಬಗ್ಗೆ ಚರ್ಚೆ ಕಾವೇರುತ್ತಿದೆ. ಕಿಚ್ಚನ ಚಪ್ಪಾಳೆ ವಿಚಾರ ಕಳೆದೆರಡು ವಾರಗಳಿಂದ ಭಾರೀ ಸದ್ದು ಮಾಡ್ತಿದೆ. ಇಡೀ ಸೀಸನ್‌ನಲ್ಲಿ ಧ್ರುವಂತ್ ಬೆಸ್ಟ್ ಎಂದು ಕಿಚ್ಚನ ಚಪ್ಪಾಳೆ ಕೊಟ್ಟಿದ್ದರು. ಈ ಬಗ್ಗೆ ಗಿಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸುದೀಪ್ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಸುದೀಪ್ ಗಮನಕ್ಕೂ ಬಂದಿತ್ತು. ಪ್ರೀ- ಫಿನಾಲೆ(ಶನಿವಾರ) ವೇದಿಕೆಯಲ್ಲಿ ಇದಕ್ಕೆ ಸುದೀಪ್ ತಿರುಗೇಟು ನೀಡಿದ್ದರು. ಆದರೆ ಸುದೀಪ್ ವಾದಕ್ಕೆ ಗಿಲ್ಲಿ ಅಭಿಮಾನಿಗಳು ಕೌಂಟರ್ ಕೊಡ್ತಿದ್ದಾರೆ.

"ಒಬ್ಬ ವ್ಯಕ್ತಿಗೆ ನಾವು ಚಪ್ಪಾಳೆ ಕೊಡೊದು ಯಾಕೆ.. ಹೊರಗಡೆ ಕೆಲವರು ಇದನ್ನು ಪರ್ಸನಲ್ ಆಗಿ ತಗೊಂಡಿದ್ದಾರೆ. ನಮಗೆ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟಿರುವುದು, ಅರ್ಹರನ್ನು ಪ್ರೋತ್ಸಾಹಿಸಿ ಅಂತ. ಬಿಗ್‌ಬಾಸ್ ಅನ್ನೋದು ಒಬ್ಬ ವ್ಯಕ್ತಿಯಿಂದ ಅಲ್ಲ. ಒಬ್ಬ ಸುದೀಪ್ ಇಂದ ಕೂಡ ಅಲ್ಲ. ಬಿಗ್‌ಬಾಸ್ ಸಾಕಷ್ಟು ಜನರ ಶ್ರಮದ ಪ್ರತಿಫಲ. ಪ್ರತಿಯೊಬ್ಬರು ಇದ್ದರೆ ಬಿಗ್‌ಬಾಸ್, ಪ್ರತಿವ್ಯಕ್ತಿತ್ವ ಇದ್ದಾಗಲೇ ಇನ್ನೊಂದು ವ್ಯಕ್ತಿತ್ವ ಮೇಲೆ ಬರಲು ಸಾಧ್ಯ. ಗೆಲ್ಲುವವರು ಯಾರೇ ಇರಬಹುದು. ನಮ್ಮ ಜೀವನ ಜಾಲಾಡಿಬಿಟ್ರಲ್ಲ. ನಿಮ್ಮ ಜೀವನ ನೀವು ನೋಡ್ಕೊಳ್ಳಿ" ಎಂದು ಸುದೀಪ್ ನಯವಾಗಿಯೇ ಕುಟುಕಿದ್ದರು.
ಅಶ್ವಿನಿ ಜೊತೆ ಮಾತನಾಡುತ್ತಾ ಸುದೀಪ್ "ಶೋ ಮುಗಿಸಿಕೊಂಡು ನಾನು ನಮ್ಮನೆಗೆ ಹೋಗೋದು. ಗೆದ್ದವ್ರು 50 ಲಕ್ಷ ರೂ. ಯಾರ್ಗೂ ಕೊಡಲ್ಲ. ಮನೆಗೆ ತಗೊಂಡು ಹೋಗ್ತಾರೆ. ಇಲ್ಲಿ ನೋಡಿದ್ರೆ ಎಲ್ರೂ ಕಿತ್ತಾಡಿಕೊಳ್ತಿದ್ದಾರೆ. ಅವ್ರಿಗೆ ಗೆದ್ದವ್ರು ಹಣ ಕೊಡಲ್ಲ" ಎಂದು ಸುದೀಪ್ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದರು. ಇದೇ ವಿಚಾರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸುದೀಪ್ ಹೇಳಿಕೆಗೆ ಕೌಂಟರ್ ಕೊಡುತ್ತಿದ್ದಾರೆ.
"ನೀವು ಚಪ್ಪಾಳೆ ಕೊಡೋದು ನಿಮ್ಮ ಪರ್ಸನಲ್ ಆದ್ರೆ, ನಾವು ಗಿಲ್ಲಿಗೆ ಚಪ್ಪಾಳೆ ಹೊಡೆಯುವುದು ನಮ್ಮ ಪರ್ಸನಲ್ ಸುದೀಪ್ ಸರ್.. ನಾವು ನಿಮ್ಮ ಸಿನಿಮಾ ನೋಡದೇ ಇದ್ದಿದ್ರೆ ನೀವು ಇರ್ತಿಲ್ಲ. ಎಷ್ಟೋ ಜನ ಬದುಕುತ್ತಿರುವುದು ಜನರ ಪ್ರೀತಿಯಿಂದ. ಜನ ನಮ್ಮ ಕೆಲ್ಸ ನಾವ್ ನೋಡಿಕೊಳ್ಳೋಣ ಎಂದಿದ್ದರೆ ಚಿತ್ರಮಂದಿರಕ್ಕೆ ಬಂದು ನಿಮ್ಮ ಸಿನಿಮಾ ನೋಡುವವರು ಯಾರು ಸರ್. ಸಿನಿಮಾ ಗೆದ್ರೆ ಹಣ ನಮಗೆ ಕೊಡ್ತೀರಾ? ಇಲ್ವಲ್ಲಾ" ಎಂದು ಅರ್ಜುನ್ ಕನ್ನಡಿಗ ಎಂಬುವವರು ವಿಡಿಯೋ ಮಾಡಿ ಮಾತನಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ನಟ ಗಣೇಶ್ ಬಗ್ಗೆ ಸುದೀಪ್ ಮಾತನಾಡಿದ್ದ ವೀಡಿಯೋವನ್ನು ಎಳೆದು ತಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. "ಮುಂಗಾರು ಮಳೆ ಚಿತ್ರವನ್ನು ಅಷ್ಟು ದೊಡ್ಡದಾಗಿ ನೋಡಲು ಹೋಗಬೇಡಿ. ಗಣೇಶ್- ದರ್ಶನ್ ಅಂತೀರಾ. ದರ್ಶನ್ ಸಾಕಷ್ಟು ಹಿಟ್ ಕೊಟ್ಟಿದ್ದಾರೆ. ಒಂದು ಚಿತ್ರವನ್ನು ಮೇಲೆ ಕೂರಿಸಬೇಡಿ" ಎಂದಿದ್ದರು.
ಸುದೀಪ್ ಹೇಳಿಕೆಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿಮಗಾಗಿಯೇ ನಾವು ಶೋ ನೋಡುತ್ತಿರುವುದು. ಆದರೆ ನಿಮ್ಮ ಕೆಲ ಹೇಳಿಕೆಗಳು ಬೇಸರ ತಂದಿದೆ. ಯಾರೇ ಗೆದ್ದರೂ ನಮಗೆ ಹಣ ಕೊಡ್ತಾರೆ ಅಂತ ನಾವು ಕಾಯ್ತಿಲ್ಲ. ಮೆರೆಸುತ್ತಿಲ್ಲ. ಆದರೂ ನಿಮ್ಮ ಮಾತುಗಳು ಇಷ್ಟವಾಗಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸುದೀಪ್ ಅಭಿಮಾನಿಗಳು ಇದಕ್ಕೆ ಖಡಕ್ ತಿರುಗೇಟು ಕೊಡುತ್ತಿದ್ದಾರೆ. ಸರ್ ನೀವು ಹೇಳಿದ್ದು ನಿಜ. ಕೆಲವರು ಅತಿಯಾಗಿ ಆಡುತ್ತಿದ್ದಾರೆ. ಅಂತಹವರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದೀರಾ ಎಂದು ಬೆಂಬಲ ಸೂಚಿಸುತ್ತಿದ್ದಾರೆ.


Click it and Unblock the Notifications











