Bigg Boss Kannada 12 : ಮನೆ ಬದಲಿಸಿದ ಬಿಗ್ ಬಾಸ್, ಈ ಬಾರಿ ಎಲ್ಲಿ ನಡೆಯಲಿದೆ ಕಾದಾಟ-ಹೋರಾಟ..?
ತೆಲುಗು ಮತ್ತು ಮಲಯಾಳಂನಲ್ಲಿ ಬಿಗ್ ಬಾಸ್‌ನ ಕಲರವ ಜೋರಾಗಿದೆ. ತೆಲುಗು ಮತ್ತು ಮಲಯಾಳಂನಲ್ಲಿ ಈಗಾಗಲೇ ಬಿಗ್ ಬಾಸ್‌ನ ಪ್ರೋಮೋಗಳು ಕೂಡ ಬಿಡುಗಡೆಯಾಗಿವೆ. ಇಷ್ಟೇ ಅಲ್ಲ ಜನ ಸಾಮಾನ್ಯರಿಗೆ ಕೂಡ ಈ ಎರಡು ಭಾಷೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸುವಂತೆ ಕರೆಯನ್ನು ಕೂಡ ನೀಡಲಾಗಿದೆ. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಆದರೆ .. ಕನ್ನಡದಲ್ಲಿ ಅದ್ಯಾಕೋ..
ಬಿಗ್ ಬಾಸ್‌ಗೆ ಮಂಕು ಕವಿದಂತಾಗಿದೆ. ಸುದೀಪ್ ಈ ಬಾರಿ ಕೂಡ ಬಿಗ್ ಬಾಸ್‌ನ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯನ್ನು ಹೊರತು ಪಡಿಸಿದರೆ ಬಿಗ್ ಬಾಸ್ ಮನೆಯ ಸುತ್ತ ಮುತ್ತ ನೀರವ ಮೌನವೇ ಆವರಿಸಿಕೊಂಡಿದೆ.ಸದ್ದಿಲ್ಲ.. ಸುದ್ದಿ ಇಲ್ಲ. ಹೀಗಿರುವಾಗ ಇದೀಗ ಬಿಗ್ ಬಾಸ್ ತನ್ನ ಮನೆಯನ್ನೇ ಬದಲಿಸುತ್ತಿರುವ ಸುದ್ದಿ ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿದೆ.

ಹೌದು, ಬಿಗ್ ಬಾಸ್ ಕನ್ನಡಕ್ಕೆ ಬಂದಾಗ ಪುಣೆಯ ಲೋನಾವಾಲಾದಲ್ಲಿ ಮೊದಲು ಚಿತ್ರೀಕರಣವನ್ನು ಶುರು ಮಾಡಲಾಗಿತ್ತು. ಮೊದಲ ಎರಡು ಸೀಸನ್ ನಡೆದಿದ್ದು ಇಲ್ಲಿಯೇ. ಎಲ್ಲಿಯೇ ಇದ್ದರು ಕೂಡ ಇಲ್ಲಿ ಸುದೀಪ್ ಓಡೋಡಿ ಹೋಗುತ್ತಿದ್ದರು.
ಆ ನಂತರ.. ಬಿಗ್ ಬಾಸ್ ಮನೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಯ್ತು. ಬೆಂಗಳೂರಿನ ಹೊರ ವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಬಿಗ್ ಬಾಸ್‌ಗೆ ಆತಿಥ್ಯ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಬಿಗ್ ಬಾಸ್ ಕನ್ನಡದ ಮೂರನೇ ಸೀಸನ್‌ದಿಂದ ಒಂಬತ್ತನೇ ಸೀಸನ್‌ವರೆಗೆ ಇನ್ನೋವೇಟಿವ್ ಫಿಲ್ಮ್ ಸಿಟಿನೇ ಬಿಗ್ ಬಾಸ್ ಮನೆಯಾಗಿತ್ತು. ಇನ್ನು ಬಿಗ್ ಬಾಸ್ ಓಟಿಟಿಯಲ್ಲಿ ಒಮ್ಮೆ ಬಂದಿತ್ತಲ್ಲಾ ? ಅದರ ಚಿತ್ರೀಕರಣ ಕೂಡ ಇಲ್ಲಿಯೇ ನಡೆದಿತ್ತು.
ಆದರೆ ಆ ನಂತರ ಬಿಗ್ ಬಾಸ್ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ನಂತರ ಲೊಕೇಶನ್ ಶಿಫ್ಟ್ ಮಾಡಲಾಗಿತ್ತು. ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಬಿಗ್ ಬಾಸ್ ಸಂತೆ ನಡೆದಿತ್ತು. ಆಗ ಭಾರತದಲ್ಲಿಯೇ ದೊಡ್ಡದಾದ ಬಿಗ್ ಬಾಸ್ ಮನೆ ಇದು ಎಂದು ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಕೂಡ ಹೇಳಿದ್ದರು. ಹೊಸ ಮನೆ ಕಂಡು ಕಿಚ್ಚ ಸುದೀಪ್ ಕೂಡ ದಂಗಾಗಿದ್ದರು.
ಆದರೆ ಈಗ ಈ ಮನೆಯನ್ನು ಕೂಡ ಬಿಗ್ ಬಾಸ್ ಬದಲಿಸುವ ನಿರ್ಧಾರಕ್ಕೆ ಬಿಗ್ ಬಾಸ್ ಬಂದಿದೆ. ಮರಳಿ ಮತ್ತೆ ಅಂದಿನ 'ಇನ್ನೋವೇಟಿವ್ ಫಿಲ್ಮ್ ಸಿಟಿ' ಆಗಿದ್ದ ಇಂದಿನ 'ಜಾಲಿವುಡ್'ಗೆ ಬಿಗ್ ಬಾಸ್ ಲೊಕೇಶನ್ ಶಿಫ್ಟ್ ಆಗಿದೆ ಎಂಬ ಸುದ್ದಿ ಸದ್ಯ ಕೇಳಿ ಬರುತ್ತಿದೆ.

ಸದ್ಯ ಈ ಅಂತೆ-ಕಂತೆಯ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಾಗಲಿ, ಕಾರ್ಯಕ್ರಮದ ಆಯೋಜಕರಾಗಲಿ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಶೀಘ್ರದಲ್ಲಿಯೇ ಈ ಕುರಿತು ವಿಚಾರಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಮನೆಯ ಸ್ಥಳ ಮತ್ತು ವಿಸ್ತೀರ್ಣದ ಕುರಿತು ಮಾಹಿತಿಯನ್ನು ನೀಡುವ ನಿರೀಕ್ಷೆ ಇದೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಮನೆ ಅಂದರೆ ವೈಭವ. ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗುವ ಈ ಮನೆಯಲ್ಲಿ ಗಾರ್ಡನ್ ಏರಿಯಾ, ದೊಡ್ಡ ಹಾಲ್, ಕಿಚನ್, ಸಿಟ್ಟಿಂಗ್ ಏರಿಯಾ, ಬೆಡ್ ರೂಮ್, ಡ್ರೆಸ್ಸಿಂಗ್ ರೂಮ್, ಕ್ಯಾಪ್ಟನ್ ರೂಮ್, ಕನ್ಫೆಶನ್ ರೂಮ್, ಸ್ಮೋಕಿಂಗ್ ಏರಿಯಾ, ಬಾತ್‌ರೂಮ್, ಸ್ವಿಮ್ಮಿಂಗ್ ಫೂಲ್, ಸೀಕ್ರೇಟ್ ರೂಮ್, ಹೀಗೆ ಹಲವಾರು ರೂಮ್‌ಗಳಿರುತ್ತವೆ. ಜಿಮ್ ವ್ಯವಸ್ಥೆ ಕೂಡ ಮಾಡಲಾಗಿರುತ್ತೆ.
ಇನ್ನುಳಿದಂತೆ ಹಿಂದಿಯ ಬಿಗ್ ಬಾಸ್ ಆಗಸ್ಟ್ ಕೊನೆ ವಾರದಲ್ಲಿ ಶುರುವಾಗುವ ಸಾಧ್ಯತೆ ಇದೆ. ತೆಲುಗು, ಮಲಯಾಳಂನಲ್ಲಿ ಕೂಡ ಆಗಸ್ಟ್ ನಲ್ಲಿಯೇ ಬಿಗ್ ಬಾಸ್ ಪ್ರಾರಂಭವಾಗುವ ಸಾಧ್ಯತೆ ಇದ್ದು, ಕನ್ನಡದಲ್ಲಿ ಸೆಪ್ಟೆಂಬರ್‌ನಲ್ಲಿ ಸುದೀಪ್ ಸಾರಥ್ಯದ ಬಿಗ್ ಬಾಸ್ ಶುರುವಾಗಲಿದೆ ಎಂಬ ಮಾತು ಸದ್ಯ ಕೇಳಿ ಬರುತ್ತಿದೆ.


Click it and Unblock the Notifications











