ಗಿಲ್ಲಿ ಗೆದ್ದ ₹60 ಲಕ್ಷ ಹಣದಲ್ಲಿ ಟ್ಯಾಕ್ಸ್, ಸೆಸ್ ಕಳೆದು ಕೈಗೆ ಎಷ್ಟು ಸಿಗುತ್ತೆ? ಕಾರಿಗೆ ಎಷ್ಟು ಟ್ಯಾಕ್ಸ್ ಕಟ್ಟಬೇಕು?
ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲೇ ಗಿಲ್ಲಿ ನಟನಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಕೋಟಿ ಕೋಟಿ ಮತಗಳನ್ನು ಹಾಕಿ ಅಭಿಮಾನಿಗಳನ್ನು ಗೆಲ್ಲಿಸಿದ್ದಾರೆ. ಇಡೀ ಸೀಸನ್ ವೀಕ್ಷಕರನ್ನು ರಂಜಿಸಿದ ಗಿಲ್ಲಿಗೆ ಭರ್ಜರಿ ಬಹುಮಾನಗಳು ಸಿಕ್ಕಿದೆ. 50 ಲಕ್ಷ ರೂ. ನಗದು ಬಹುಮಾನದ ಜೊತೆಗೆ ಕಿಚ್ಚ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ರೂ. ಘೋಷಿಸಿದ್ದಾರೆ.
ಮಾರುತಿ ಸುಜುಕಿ ವಿಕ್ಟೋರಿಸ್ ಕಾರ್ ಅನ್ನು ಕೂಡ ಬಹುಮಾನವಾಗಿ ಗಿಲ್ಲಿ ಪಡೆದಿದ್ದಾರೆ. ನಮ್ಮ ಇಡೀ ಜೀವಮಾನದಲ್ಲಿ 50 ಲಕ್ಷ ಸಂಪಾದಿಸಲು ಆಗುತ್ತಿರಲಿಲ್ಲ. ನನ್ನ ಮಗ ಗಿಲ್ಲಿ 3 ತಿಂಗಳಲ್ಲಿ ಸಂಪಾದನೆ ಮಾಡಿದ್ದಾನೆ ಎಂದು ತಂದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ರೈತ ಕುಟುಂಬದಿಂದ ಬಂದ ಗಿಲ್ಲಿ ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಗಮನ ಸೆಳೆದಿದ್ದರು. ಬಳಿಕ ಕಿರುತೆರೆಯಲ್ಲಿ ಅವಕಾಶ ಸಿಕ್ಕಿತ್ತು. 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋಗಳಲ್ಲಿ ಗಿಲ್ಲಿ ಭಾಗವಹಿಸಿದ್ದರು.

ಈ ಹಿಂದಿನ ಶೋಗಳಲ್ಲಿ ಗಿಲ್ಲಿ ಗೆದ್ದಿರಲಿಲ್ಲ. ಆದರೆ ಬಿಗ್‌ಬಾಸ್ ರೀತಿಯ ದೊಡ್ಡ ಶೋ ಗೆದ್ದಿದ್ದಾರೆ. ವೀಕ್ಷಕರ ಮನಸೂರೆಗೊಂಡಿದ್ದಾರೆ. ಬಿಗ್‌ಬಾಸ್‌ನಲ್ಲಿ ಗೆದ್ದ ಹಣದಿಂದ ಜಮೀನು ಖರೀದಿಸಿ ವ್ಯವಸಾಯ ಮಾಡ್ತೀನಿ, ಫಾರ್ಮ್‌ಹೌಸ್ ಮಾಡ್ತೀನಿ ಎಂದು ಗಿಲ್ಲಿ ಹೇಳಿದ್ದಾರೆ. ಆದರೆ ಗಿಲ್ಲಿ ಗೆದ್ದಿರುವ 60 ಲಕ್ಷ ರೂ. ಕೂಡ ಅವರ ಕೈ ಸೇರುವುದಿಲ್ಲ. ಟ್ಯಾಕ್ಸ್, ಸೆಸ್ ರೂಪದಲ್ಲಿ ಸಾಕಷ್ಟು ಹಣ ಕಳೆದು ಉಳಿದ ಹಣ ಮಾತ್ರ ಸಿಗಲಿದೆ. ಇನ್ನು ಬಹುಮಾನವಾಗಿ ಗೆದ್ದಿರುವ ಕಾರಿಗೆ ಕೂಡ ಗಿಲ್ಲಿ ಟ್ಯಾಕ್ಸ್ ಕಟ್ಟಬೇಕಿದೆ.
ಗಿಲ್ಲಿಗೆ 50 ಲಕ್ಷ ರೂ. ಬಹುಮಾನ ಸಿಕ್ಕಿದ್ದರೂ 30% ಆದಾಯ ತೆರಿಗೆ ಅಂದರೆ 15 ಲಕ್ಷ ರೂ. ಪಾವತಿಸಬೇಕು. ಜೊತೆಗೆ ಶಿಕ್ಷಣ ಹಾಗೂ ಆರೋಗ್ಯ ಸೆಸ್ 4% ಅಂದರೆ 60 ಸಾವಿರ ರೂ. ಕಟ್ಟಬೇಕು. ಅದೆಲ್ಲ ಕಳೆದು ಗಿಲ್ಲಿಗೆ 34 ಲಕ್ಷದ 40 ಸಾವಿರ ರೂ. ಹಣ ಸಿಗಲಿದೆ. ಅದೇ ರೀತಿ ಸುದೀಪ್ ಅವರು ಘೋಷಿಸಿರುವ 10 ಲಕ್ಷ ರೂ. ಬಹುಮಾನದ ಹಣಕ್ಕೆ ಕೂಡ ಟ್ಯಾಕ್ಸ್ ಕಟ್ಟಿ ಉಳಿದ ಹಣವನ್ನು ಗಿಲ್ಲಿ ಪಡೆಯಲಿದೆ.
ಇನ್ನು ಮಾರುತಿ ಸುಜುಕಿ ವಿಕ್ಟೋರಿಸ್ ಕಾರ್ ದರ ₹10 ಲಕ್ಷದಿಂದ ₹18 ಲಕ್ಷದವರೆಗಿದೆ. ಬಹುಮಾನವಾಗಿ ಸಿಗುವ ಕಾರಿಗೆ 31.2% ತೆರಿಗೆ ಕಟ್ಟಬೇಕಾಗುತ್ತದೆ. ಅಂದರೆ ₹15 ಲಕ್ಷದ ಕಾರ್ ಆಗಿದ್ದಲ್ಲಿ ₹4 ಲಕ್ಷದ 68 ಸಾವಿರ ತೆರಿಗೆ ಕಟ್ಟಿ ಗಿಲ್ಲಿ ಕಾರ್ ಮನೆಗೆ ಕೊಂಡೊಯ್ಯಬಹುದು. ಬಹುತೇಕರು ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ 60 ಲಕ್ಷ ರೂ. ಹಣ ಹಾಗೂ ಕಾರ್ ಬಹುಮಾನವಾಗಿ ಸಿಕ್ಕಿದೆ ಎಂದು ಭಾವಿಸಿದ್ದಾರೆ. ಆದರೆ ಇಷ್ಟೆಲ್ಲಾ ತೆರಿಗೆ ಕಳೆದು ಉಳಿದ ಹಣ ಮಾತ್ರ ಆತನ ಕೈಸೇರಲಿದೆ. ಆದರೂ ಕೂಡ ಭಾರೀ ಮೊತ್ತದ ಬಹುಮಾನವೇ ಮಂಡ್ಯ ಹೈದನ ಪಾಲಾಗಿದೆ.
ಗಿಲ್ಲಿ ಮಾತ್ರವಲ್ಲ ರನ್ನರ್ ಅಪ್ ರಕ್ಷಿತಾ, ಸೆಕೆಂಡ್ ರನ್ನರ್ ಅಪ್ ಅಶ್ವಿನಿ ಗೌಡ ಹಾಗೂ 3ನೇ ರನ್ನರ್ ಅಪ್ ಕಾವ್ಯಾ ಎಲ್ಲರೂ ತಮಗೆ ಸಿಕ್ಕ ಬಹುಮಾನದ ಹಣಕ್ಕೆ ತೆರಿಗೆ ಕಟ್ಟಿ ಉಳಿದ ಹಣವನ್ನು ಪಡೆಯಲಿದ್ದಾರೆ. ಈ ವರ್ಷ ಮಾತ್ರವಲ್ಲ, ಪ್ರತಿಬಾರಿ ಬಿಗ್‌ಬಾಸ್ ಶೋ ಅಥವಾ ಯಾವುದೇ ರಿಯಾಲಿಟಿ ಶೋಗಳಲ್ಲಿ ಬಹುಮಾನದ ಹಣ ಗೆಲ್ಲುವ ಸ್ಪರ್ಧಿಗಳು ತೆರಿಗೆ ಪಾವತಿಸಬೇಕು. ಇತರೆ ಶೋಗಳಿಗೆ ಹೋಲಿಸಿದರೆ ಬಿಗ್‌ಬಾಸ್ ಶೋ ಬಹುಮಾನದ ಮೊತ್ತ ಜಾಸ್ತಿ ಇರುತ್ತದೆ.


Click it and Unblock the Notifications











