BBK13: ಈ ನಟಿಯನ್ನು ಬಿಗ್‌ಬಾಸ್ ಮನೆಗೆ ಕಳ್ಸಿ, ಗಿಲ್ಲಿ ರೀತಿ ಮಸ್ತ್ ಎಂಟರ್‌ಟೈನ್‌ಮೆಂಟ್ ಫಿಕ್ಸ್!
ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರೋಮೊ ಕೂಡ ಬಂದಿದೆ. ಜನ ಸಾಮಾನ್ಯರನ್ನು ಆಡಿಷನ್ ಮಾಡಿ ಮನೆ ಒಳಗೆ ಕಳುಹಿಸುವ ಪ್ರಯತ್ನ ಶುರುವಾಗಿದೆ. ಈ ಬಾರಿ ಬೇರೆ ಯಾರೆಲ್ಲಾ ದೊಡ್ಮನೆ ಒಳಗೆ ಹೋಗಬಹುದು ಎನ್ನುವ ಚರ್ಚೆ ಶುರುವಾಗಿದೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗ್ತಿದೆ. ಇದೆಲ್ಲದರ ನಡುವೆ ಆ ನಟಿಯನ್ನು ದೊಡ್ಮನೆ ಒಳಗೆ ನೋಡಲು ಕೆಲವರು ಬಯಸುತ್ತಿದ್ದಾರೆ.
ದೊಡ್ಮನೆ ಒಳಗೆ ಎಂಟರ್‌ಟೈನ್‌ಮೆಂಟ್ ಬಹಳ ಮುಖ್ಯ. ಕಳೆದ ಸೀಸನ್‌ನಲ್ಲಿ ಟಾಸ್ಕ್‌ಗಳಲ್ಲಿ ಅಷ್ಟೇನು ಒಳ್ಳೆ ಪ್ರದರ್ಶನ ತೋರದೇ ಇದ್ದರೂ ತಮ್ಮ ಲವಲವಿಕೆಯ ಮಾತು, ಕಾಮಿಡಿ ಟೈಮಿಂಗ್ ಮೂಲಕ ಗಿಲ್ಲಿ ನಟ ಮೋಡಿ ಮಾಡಿದ್ದರು. ದಾಖಲೆ ಮಟ್ಟದಲ್ಲಿ ಮತಗಳನ್ನು ಪಡೆದು ಸೀಸನ್ 12ರ ಟೈಟಲ್ ಗೆದ್ದಿದ್ದರು. ಇವತ್ತಿಗೂ ಗಿಲ್ಲಿ ಕ್ರೇಜ್ ಕಮ್ಮಿ ಆಗಿಲ್ಲ. ಬರೀ ಮಾತಿನಿಂದಲೇ ಮಂಡ್ಯ ಹೈದ ಮಾಡಿದ ಜಾದೂ ಅಂಥಾದ್ದು.

ಗಿಲ್ಲಿ ಕಾಮಿಡಿ ಟೈಮಿಂಗ್, ಪಂಚಿಂಗ್ ಡೈಲಾಗ್ಸ್ ಸೂಪರ್ ಎಂದು ವೀಕ್ಷಕರು ಮೆಚ್ಚಿಕೊಂಡಿದ್ದರು. ಸಮಯಕ್ಕೆ ತಕ್ಕಂತೆ ಮಾತಿನ ಬಾಣಗಳ ಮೂಲಕ ಎಲ್ಲರಿಗೂ ಟಾಂಗ್ ಕೊಡುತ್ತಾ ವೀಕ್ಷಕರನ್ನು ರಂಜಿಸಿದ್ದರು. ಮಂಡ್ಯ ಭಾಷೆ, ಹಳ್ಳಿ ಸೊಗಡು ಗಿಲ್ಲಿಗೆ ಪ್ಲಸ್ ಆಗಿತ್ತು. ಕೆಲವೊಮ್ಮೆ ಗಿಲ್ಲಿ ಕಾಮಿಡಿ ಎಲ್ಲೆ ಮೀರಿ ಮನೆಯಲ್ಲಿ ಜಗಳಕ್ಕೆ ಕಾರಣವಾಗಿತ್ತು. ಆದರೂ ಅದನ್ನೆಲ್ಲಾ ಮರೆತು ಜನ ಆತನ ಮಾತುಗಳನ್ನು ಮೆಚ್ಚಿದ್ದರು. ಅಶ್ವಿನಿ ಹಾಗೂ ಜಾನ್ವಿಗೆ ಗಿಲ್ಲಿ ಕೌಂಟರ್ ಕೊಟ್ಟಿದ್ದನ್ನು ರೋಸ್ಟ್ ಮಾಡಿದ್ದನ್ನು ಎಂಜಾಯ್ ಮಾಡಿದ್ದರು. ಇದೇ ರೀತಿ ಬಿಗ್‌ಬಾಸ್ ಮನೆಗೆ ಈ ಮಾತಿನ ಮಲ್ಲಿಯನ್ನು ಕಳಿಸಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಹೌದು.. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ನಟಿ ಅರ್ಚನಾ ಕೊಟ್ಟಿಗೆ ಅವರನ್ನು ನೋಡಲು ಕೆಲವರು ಬಯಸುತ್ತಿದ್ದಾರೆ. ಇತ್ತೀಚೆಗೆ Keerthi ENT Clinic ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅರ್ಚನಾ, ಅಮೃತಾ ಅಯ್ಯಂಗಾರ್ ಹಾಗೂ ಖುಷಿ ಭಾಗಿ ಆಗಿದ್ದರು. ಸಾಕಷ್ಟು ಹೊತ್ತು ಮೂವರು ಹರಟಿದ್ದಾರೆ. ಆದರೆ ಎಲ್ಲರಿಗಿಂತ ಗಮನ ಸೆಳೆದಿರುವುದು ನಟಿ ಅರ್ಚನಾ ಕೊಟ್ಟಿಗೆ. ಆಕೆಯ ಕಾಮಿಡಿ ಟೈಮಿಂಗ್, ಸೆನ್ಸ್ ಆಫ್ ಹ್ಯೂಮರ್ ಕಂಡು ಕೆಲವರು ಬೆರಗಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಂದು ಹಂತಕ್ಕೆ ನಿರೂಪಕ ಕೀರ್ತಿ ಕೂಡ ಡಲ್ ಆಗಿ ಬಿಟ್ಟಿದ್ದಾರೆ.

ಕೀರ್ತಿ ತಮ್ಮ ವಿಭಿನ್ನ ಶೈಲಿಯ ಮಾತುಗಳ ಮೂಲಕ ಸಂದರ್ಶನ ಮಾಡುತ್ತಾರೆ. ತಮಾಷೆಯಾಗಿ ಕಾಲೆಳೆಯುತ್ತಾ ರಂಜಿಸುತ್ತಾರೆ. ಆದರೆ ಈ ಬಾರಿ ಸಂದರ್ಶನದಲ್ಲಿ ಅರ್ಚನಾ ಕೊಟ್ಟಿಗೆ ಮಾತುಗಳು ಪಟಾಕಿ ರೀತಿ ಸಿಡಿದಿವೆ. ನಿರೂಪಕ ಕೀರ್ತಿಯನ್ನು ರೋಸ್ಟ್ ಮಾಡಿ ಅರ್ಚನಾ ಗಮನ ಸೆಳೆದಿದ್ದಾರೆ. ಕಾಮೆಂಟ್ ಬಾಕ್ಸ್ ತುಂಬಾ ಆಕೆಯ ಬಗ್ಗೆ ಚರ್ಚೆ ನಡೆದಿದೆ. ಬಿಗ್‌ಬಾಸ್ ಮನೆಗೆ ಈ ಬಾರಿ ಅರ್ಚನಾ ಹೋದ್ರೆ, ಎಂಟರ್‌ಟೈನ್‌ಮೆಂಟ್ ಗ್ಯಾರಂಟಿ. ಅಪ್ಪಿ ತಪ್ಪಿ ಹೋದ್ರೆ ವಿನ್ನರ್ ಕೂಡ ಆಗಬಹುದು ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.
ಈ ಬಾರಿ ಬಿಗ್‌ಬಾಸ್ ಮನೆಗೆ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್, ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿ ತಪಸ್ವಿ ಪೂಣಚ್ಚ, ನಟ ಭರತ್ ಬೋಪಣ್ಣ, ನಿರೂಪಕಿ ಸುಷ್ಮಾ ರಾವ್, ನಟ ರಿತ್ವಿಕ್ ಕೃಪಾಕರ್ ಸೇರಿದಂತೆ ಕೆಲವರು ಹೋಗಬಹುದು, ಅಥವಾ ಹೋದ್ರೆ ಚೆನ್ನಾಗಿರುತ್ತದೆ ಎಂದು ಚರ್ಚೆ ನಡೀತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೆಲ್ಲದರ ನಡುವೆ ಅರ್ಚನಾ ಕೊಟ್ಟಿಗೆ ಬಿಗ್‌ಬಾಸ್ ಮನೆಗೆ ಹೋದ್ರೆ ಚೆನ್ನಾಗಿರುತ್ತದೆ ಎನ್ನುವ ಚರ್ಚೆ ಜೋರಾಗಿದೆ.
ಎರಡು ತಿಂಗಳ ಹಿಂದೆ ಕ್ರಿಕೆಟಿಗ ಶರತ್ ಜೊತೆ ನಟಿ ಅರ್ಚನಾ ಕೊಟ್ಟಿಗೆ ಮದುವೆ ನಡೆದಿತ್ತು. 'ಡಿಯರ್ ಸತ್ಯ', 'ವಾಸು ನಾನ್ ಪಕ್ಕಾ ಕಮರ್ಷಿಯಲ್', 'ವಿಜಯಾನಂದ', 'ಫಾರೆಸ್ಟ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.


Click it and Unblock the Notifications