ಈ ಬಾರಿ ಕನ್ನಡ 'ಬಿಗ್ ಬಾಸ್' ಮನೆಗೆ ಬರಲಿರುವ ಸ್ಪರ್ಧಿಗಳು ಇವರೇನಾ? ಡೈರೆಕ್ಟರ್, ರಾಜಕಾರಣಿ - ವೈರಲ್ ಲಿಸ್ಟ್ ಇಲ್ಲಿದೆ
''ಬಿಗ್ ಬಾಸ್'' ಹಲವರ ಕನಸು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಮ್ಮ ಜನ್ಮ ಪಾವನ ಎಂದುಕೊಂಡವರು ಹಲವಾರು ಜನ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದೇ ನಾನಾ ತರಹದ ಸರ್ಕಸನ್ನು ಕೂಡ ಮಾಡುತ್ತಾರೆ.
''ಬಿಗ್ ಬಾಸ್'' ಮನೆಗೆ ಹೋಗಿ ಬಂದ ನಂತರ ಅವರ ಬದುಕಿನಲ್ಲಾಗುವ ಬದಲಾವಣೆಗಳೇನು ಎನ್ನುವುದು ಅವರಿಗೆ ಗೊತ್ತಾದರು ಆ ಭಾಷೆ ಈ ಭಾಷೆ ಎನ್ನದೇ ಎಲ್ಲಾ ಭಾಷೆಯಲ್ಲಿ ಕೂಡ ಪ್ರತಿ ವರ್ಷ ''ಬಿಗ್ ಬಾಸ್'' ಜಾತ್ರೆಯಲ್ಲಿ ಭಾಗವಹಿಸುವ ಉತ್ಸಾಹ ಕಂಡು ಬಂದೇ ಬರುತ್ತೆ. ಕನ್ನಡದಲ್ಲಿ ಕೂಡ ಈ ಉತ್ಸಾಹದ ಅಲೆ ಸದ್ಯ ಎದ್ದಿದೆ. ಇದಕ್ಕೆ ಪೂರಕವಾಗಿ ಅವರು ಹೋಗ್ತಾರಂತೆ.. ಇವರು ಹೋಗ್ತಾರಂತೆ.. ಎಂದು ಹಲವರ ಹೆಸರುಗಳನ್ನು ತೇಲಿ ಬಿಡಲಾಗಿದೆ.

ಹೀಗೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಯಾರು ನಿಜಕ್ಕೂ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವುದಕ್ಕೆ ಉತ್ತರ ಕಾರ್ಯಕ್ರಮ ಶುರುವಾದ ದಿನದಂದೇ ಅಧಿಕೃತವಾಗಿ ಸಿಗಲಿದೆಯಾದರೂ ಸದ್ಯ ಕೆಲವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ಅವರು ಯಾರು ? ಯಾರೆಲ್ಲಾ ಈ ಬಾರಿ '' ಬಿಗ್ ಬಾಸ್'' ಮನೆ ಪ್ರವೇಶ ಮಾಡಬಹುದು..? ಎಂದು ತಿಳಿಯಲು ಮುಂದೆ ಓದಿ.
''ಬಿಗ್ ಬಾಸ್'' ಮನೆಗೆ ಯೋಗಿಶ್ವರ್ ಪುತ್ರಿ ?
ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಸಕಲ ಪ್ರಯತ್ನವನ್ನು ಮಾಡಿದ ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡ್ತಾರಾ..? ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ನಿಶಾ ಯೋಗಿಶ್ವರ್ ಅವರ ಹೆಸರು ಮುಂಚೂಣಿಯಲ್ಲಿದೆ. ತಂದೆಯ ಜೊತೆಗಿನ ಆಂತರಿಕ ಕೌಟುಂಬಿಕ ಭಿನ್ನಾಭಿಪ್ರಾಯ ಇವರನ್ನು ''ಬಿಗ್ ಬಾಸ್'' ಮನೆಯವರೆಗೆ ಕರೆತರುತ್ತಾ ಎನ್ನುವುದನ್ನು ನೋಡಬೇಕಿದೆ.
ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ
ಯೂಟ್ಯೂಬ್ ಮೂಲಕ ಬೆಳಕಿಗೆ ಬಂದ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ''ಬಿಗ್ ಬಾಸ್'' ಮನೆ ಪ್ರವೇಶ ಮಾಡ್ತಾರೆ ಎನ್ನುವ ಮಾತು ಕಳೆದ ಎರಡು ಮೂರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಈ ವರ್ಷ ಕೂಡ ಈ ಮಾತು ಚಾಲ್ತಿಯಲ್ಲಿದೆ. ಈ ಸುದ್ದಿ ಈ ಬಾರಿಯಾದರೂ ನಿಜವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಭರತ್ ಬೋಪಣ್ಣ
''ಬ್ರಹ್ಮಗಂಟು'' ಮೂಲಕ ಜನ ಮನ ಗೆದ್ದ ಭರತ್ ಬೋಪಣ್ಣ ಕೂಡ ಈ ಬಾರಿ ''ಬಿಗ್ ಬಾಸ್'' ಮನೆ ಪ್ರವೇಶ ಮಾಡುತ್ತಾರೆ ಎನ್ನುವ ಮಾತಿದೆ. ಕನ್ನಡದ ''ವಿಜಯಾನಂದ'', ''ಡೆಮೊ ಪೀಸ್'', ''ಟ್ರೋಮ್ಯಾನ್ಸ್'', ''ಮಿಷನ್ ಚಾಪ್ಟರ್ 1'' ಹೀಗೆ ಕೇವಲ ಕನ್ನಡ ಮಾತ್ರವಲ್ಲದೇ ತಮಿಳು ಸೇರಿ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಭರತ್ ಕೂಡ ಈ ಬಾರಿಯ ''ಬಿಗ್ ಬಾಸ್'' ಕಂಟೆಸ್ಟೆಂಟ್ ಅನ್ನೋ ಸುದ್ದಿ ಸದ್ಯ ಹರಿದಾಡುತ್ತಿದೆ.
ಸಮೀಕ್ಷಾ ಬರ್ತಾರಾ ಬಿಗ್ ಬಾಸ್ ಗೆ ?
ಕನ್ನಡದ ಚಿತ್ರ ''ರಾನಿ'' ಸೇರಿ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಸಮೀಕ್ಷಾ ಈ ಬಾರಿ ''ಬಿಗ್ ಬಾಸ್'' ಮನೆ ಪ್ರವೇಶಿಸಲಿದ್ದಾರೆ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಿದೆ. ಇವರ ಜೊತೆ ''ರಾಮಾಚಾರಿ'' ಖ್ಯಾತಿಯ ರಿತ್ವಿಕ್ ಕೃಪಾಕರ್, ಬೋಲ್ಡ್ & ಬ್ಯೂಟಿಫುಲ್ ಚೆಲುವೆ ಮೌನ ಗುಡ್ಡೆಮನೆ, ''ಯಜಮಾನ'' ಖ್ಯಾತಿಯ ಮಧುಶ್ರೀ ಭೈರಪ್ಪ, ''ಹಳ್ಳಿ ಪವರ್'' ಖ್ಯಾತಿಯ ರಗಡ್ ರಶ್ಮಿ ಸೇರಿದಂತೆ ಇನ್ನು ಹಲವರ ಹೆಸರು ಚಾಲ್ತಿಯಲ್ಲಿವೆ. ನಿಜಕ್ಕೂ ಇವರೆಲ್ಲಾ ಬರ್ತಾರಾ ಉತ್ತರ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಓಂಪ್ರಕಾಶ್ ರಾವ್ ಮತ್ತು ತಪಸ್ವಿ ಕಥೆ ಏನು ?
ಕೇವಲ ಇವರು ಮಾತ್ರ ಅಲ್ಲ ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ಈ ಬಾರಿಯ ''ಬಿಗ್ ಬಾಸ್'' ಸ್ಫರ್ಧಿ ಎನ್ನುವುದು ಸದ್ಯದ ಮತ್ತೊಂದು ನ್ಯೂಸ್. ಈ ಹಿಂದೆ ಓಂ ಪ್ರಕಾಶ್ ರಾವ್ ''ಬಿಗ್ ಬಾಸ್'' 4ರಲ್ಲಿ ಭಾಗವಹಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಕಲರ್ಸ್ ಕನ್ನಡದಲ್ಲಿನ ''ಕ್ವಾಟ್ಲೆ ಕಿಚನ್''ನಲ್ಲಿ ಓಂ ಪ್ರಕಾಶ್ ರಾವ್ ಸದ್ಯ ಭಾಗವಹಿಸಿದ್ದಾರೆ.
ಈ ಹಿನ್ನೆಲೆ ಓಂ ಪ್ರಕಾಶ್ ರಾವ್ ಅವರಿಗೆ ಈ ಬಾರಿ ''ಬಿಗ್ ಬಾಸ್'' ಮತ್ತೊಂದು ಅವಕಾಶ ಕೊಡಲಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಇವರ ಜೊತೆ ''ಹರಿಕಥೆ ಅಲ್ಲ ಗಿರಿಕಥೆ'' ನಾಯಕಿ ತಪಸ್ವಿ ಪೊಣಚ್ಚ ಅವರ ಹೆಸರು ಕೂಡ ಅಂತೆ-ಕಂತೆಯ ಸಂತೆಯಲ್ಲಿ ಸದ್ಯ ಕೇಳಿ ಬರುತ್ತಿದೆ.


Click it and Unblock the Notifications