ಬಿಗ್ ಬಾಸ್ ಮನೆಯಲ್ಲಿ ಗರ್ಭಿಣಿಯ ಪ್ರಸವ ವೇದನೆ
ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೋ ಒಂದಿಲ್ಲೊಂದು ಕಾಯಿಲೆ ಶುರುವಾಗಿದೆ. ಒಬ್ಬರು ಭಗ್ನ ಪ್ರೇಮಿಯಾದರೆ, ಇನ್ನೊಬ್ಬರಿಗೆ ಸಿಕ್ಕಸಿಕ್ಕವರನ್ನು ಕಚ್ಚುವ ಹುಚ್ಚು. ಕೆಲವರಿಗೆ ಮೈಯಲ್ಲಾ ಸುಕ್ಕುಗಟ್ಟಿ ವಯಸ್ಸಾದರೆ, ಇನ್ನೂ ಕೆಲವರಿಗೆ ಐಟಂ ಡಾನ್ಸ್ ಮಾಡುವ ತವಕ.
ಈ ವಾರದ ಲಗ್ಜುರಿ ಬಜೆಟ್ ಟಾಸ್ಕ್ 'ಬಿಗ್ ಬಾಸ್ ಆಸ್ಪತ್ರೆ'. ಈ ಆಸ್ಪತ್ರೆಯ ಪ್ರಮುಖ ವೈದ್ಯೆ ನೀತೂ. ನರ್ಸ್ ಗಳಾಗಿ ಅಕುಲ್ ಬಾಲಾಜಿ ಮತ್ತು ಸೃಜನ್ ಲೋಕೇಶ್ ಮುಖ್ಯ ವೈದ್ಯರ ಜೊತೆಗೆ ಇರುತ್ತಾರೆ. ಇದು ಐವತ್ತೊಂದನೇ ದಿನದ ಹೈಲೈಟ್ಸ್ ನೋಡೋಣ ಬನ್ನಿ.
'ಬಿಗ್ ಬಾಸ್ ಆಸ್ಪತ್ರೆ'ಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾಯಿಲೆ. ಹಾಗಾಗಿ ಅಲ್ಲಲ್ಲಿ ಕೆಲವೊಂದು ಅತಿಯಾಯಿತು ಎನ್ನಿಸಿದರೂ ಸಖತ್ ಮನರಂಜನೆಯನ್ನಂತೂ ನೀಡಿದರು. ಬುಲೆಟ್ ಪ್ರಕಾಶ್ ನಿಧಾನಕ್ಕೆ ಎಲ್ಲರ ಗಮನಸೆಳೆಯುತ್ತಿದ್ದು ಮುಂದೆ ಅವರೇ ಪ್ರಮುಖ ಆಕರ್ಷಣೆಯಾಗುವಷ್ಟು ಭರವಸೆ ಹುಟ್ಟಿಸಿದ್ದಾರೆ.

ಹಲ್ಲು ಬೆಳೆಯುತ್ತಿರುವ ಮಗು ಬುಲೆಟ್
ಹಲ್ಲು ಬೆಳೆಯುತ್ತಿರುವ ಮಗು ಆಗಿ ಬುಲೆಟ್ ಅವರಿಗೆ ಅಭಿನಯಿಸಲು ಬಿಗ್ ಬಾಸ್ ಸೂಚಿಸಿದರು. ಅದರಂತೆ ಅವರಿಗೆ ಸಿಕ್ಕಿದವರನ್ನೆಲ್ಲಾ ಕಚ್ಚುವ ಪ್ರವೃತ್ತಿ ಇರುತ್ತದೆ. ಹಾಗಾಗಿ ಅವರು ಕಚ್ಚದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನರ್ಸ್ ಮತ್ತು ವೈದ್ಯರದ್ದು. ಈಗ ನನ್ನ ಕೈಗೆ ಚೆನ್ನಾಗಿ ಕಚ್ಚಲು ಸಿಗುವವರೆಂದರೆ ನೀತೂ ಎಂದರು ಬುಲೆಟ್.

ತುಂಬು ಗರ್ಭಿಣಿಯಾದ ಸಂತೋಷ್
ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಸಂತೋಷ್ ಅವರನ್ನು ಕನ್ಫೆಷನ್ ರೂಮಿಗೆ ಕರೆದು, ನಿಮಗೊಂದು ಸಿಹಿ ಸುದ್ದಿ ಕಾದಿದೆ. ನೀವು ಗರ್ಭವತಿಯಾಗಿದ್ದು ಯಾವುದೇ ಸಂದರ್ಭದಲ್ಲಿ ಮಗುವನ್ನು ಹೆರಬಹುದು ಎಂದು ಬಿಗ್ ಬಾಸ್ ತಿಳಿಸಲು ಹರ್ಷಿಸುತ್ತಾರೆ ಎಂದರು.

ಪ್ರಸವ ವೇದನೆ ಅನುಭವಿಸಿದ ಸಂತೋಷ್
ನಿಮ್ಮ ಎಲ್ಲಾ ಗರ್ಭಿಣಿ ಬಯಕೆಗಳನ್ನು ನರ್ಸಗಳ ಮೂಲಕ ಪೂರೈಸಿಕೊಳ್ಳಬಹುದು ಎಂದು ಬಿಗ್ ಬಾಸ್ ತಿಳಿಸಿದರು. ಕನ್ಫೆಷನ್ ರೂಮಿನಿಂದ ಹೊರಬಂದ ಕೂಡಲೆ ಅವರು ತುಂಬು ಬಸುರಿಯಾಗಿ ಪ್ರಸವ ವೇದನೆ ಅನುಭವಿಸಿದರು.

ರೋಹಿತ್ ಅವರಿಗೆ ಕೆರೆದುಕೊಳ್ಳುವ ಕಾಯಿಲೆ
ಶರೀರದ ಮೇಲೆ ಅವಶ್ಯಕತೆಗಿಂತಲೂ ಹೆಚ್ಚಾಗಿ ಕೂದಲು ಬೆಳೆದಿರುವುದು. ಇದರಿಂದ ಸದಾಕಾಲ ಮೈಕೈ ಪರಚಿಕೊಳ್ಳುವ ಕಾಯಿಲೆ ಆರ್ ಜೆ ರೋಹಿತ್ ಅವರದು. ಕಡೆಗೂ ಅವರನ್ನು ಎಲ್ಲರೂ ಕೆರೆದುಕೊಳ್ಳುವ ಸ್ಟಾರ್ ಎಂದು ಕರೆದರು.

ಭಗ್ನಪ್ರೇಮಿಯಾದ ದೀಪಿಕಾ ಕಾಮಯ್ಯ
ಪ್ರೇಮದಲ್ಲಿ ಅನ್ಯಾಯವಾಗಿ ಭಗ್ನ ಪ್ರೇಮಿ ಆಗಿದ್ದೀರಿ. ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದೀರಿ ಎಂದು ಮಾನಸಿಕ ಕಾಯಿಲೆಯನ್ನು ದೀಪಿಕಾ ಕಾಮಯ್ಯ ಅವರಿಗೆ ಕೊಡಲಾಯಿತು.

ಬುಲೆಟ್ ಬಗ್ಗೆ ಗುರುಪ್ರಸಾದ್ ಕಾಮೆಂಟ್
ಇನ್ನೊಂದು ಕಡೆ ಬುಲೆಟ್ ಪ್ರಕಾಶ್ ಎಂಟ್ರಿ ಬಗ್ಗೆ ಗುರುಪ್ರಸಾದ್ ಅವರು ಸಂತೋಷ್ ಬಳಿ ಕಿವಿಕಚ್ಚಿದರು. ಕಾರ್ಯಕ್ರಮ ಚೆನ್ನಾಗಿ ಬರ್ತಿದೆ. ಆದರೆ ಮನೆಯಲ್ಲಿ ಕಾಮಿಡಿ ಇಲ್ಲ ಎಂಬ ಕಾರಣಕ್ಕೆ ಇವನನ್ನು ಕರೆಸಿದ್ದಾರೆ. ಯಾರಾದರೂ ಡೈಲಾಗ್ ಬರೆದುಕೊಟ್ಟರೆ ಹೇಳ್ತಾನೆ. ಆದರೆ ತುಂಬಾ ಹೊತ್ತು ಅವನನ್ನು ಸಹಿಸಿಕೊಳ್ಳುವುದು ಕಷ್ಟ ಎಂದರು.

ಐಟಂ ಡಾನ್ಸರ್ ಆದ ಗುರುಪ್ರಸಾದ್
ಇನ್ನು ಗುರುಪ್ರಸಾದ್ ಅವರಿಗೆ ಭರತನಾಟ್ಯದ ಹುಚ್ಚು. ಮನೆಯಲ್ಲಿ ಹಾಡು ಕೇಳಿಸಿದಾಗಲೆಲ್ಲಾ ಭರತನಾಟ್ಯ ಆಟಬೇಕು. ಅವರು ಭರತನಾಟ್ಯ ಆಡದಂತೆ ಐಟಂ ಡಾನ್ಸ್ ಮಾಡುವಂತೆ ನೋಡಿಕೊಳ್ಳಬೇಕು ಎಂಬುದು ಬಿಗ್ ಬಾಸ್ ಆಜ್ಞೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಗುರುಪ್ರಸಾದ್ ಐಟಂ ಡಾನ್ಸರ್ ಆಗಿದ್ದಾರೆ.

ಅನುಪಮಾಗೆ ಮುಪ್ಪಾಗಿ ಚರ್ಮ ಸುಕ್ಕು
ಇನ್ನೂ ಅನುಪಮಾಗೆ ಮುಪ್ಪಾದ ಕಾರಣ ಚರ್ಮ ಸುಕ್ಕಾಗಿದೆ. ಮುಲ್ತಾನಿ ಮಣ್ಣನ್ನು ಮುಖಕ್ಕೆ ಮೆತ್ತಿಕೊಂಡು ಸದಾ ಇರಬೇಕು. ಆದಿ ಲೋಕೇಶ್ ಅವರದು ಸ್ಪ್ಲಿಟ್ ಪರ್ಸನಾಲಿಟಿ ಅಂದರೆ ದ್ವಿಮುಖ ವ್ಯಕ್ತಿತ್ವದ ಕಾಯಿಲೆ. ಒಮ್ಮೆ ಮುಗ್ಧ ಮುಖ ಇನ್ನೊಮ್ಮೆ ಬಹಳ ಕೋಪದ ಮುಖ ಪ್ರದರ್ಶಿಸಬೇಕು.

ಮಧ್ಯರಾತ್ರಿಯಲ್ಲಿ ನಿಂಗಿ ನಿಂಗಿ ನಿಂಗವ್ವೋ
ಮಧ್ಯರಾತ್ರಿಯಲ್ಲಿ ಎಲ್ಲರೂ ಮಲಗಿದ್ದಾಗ ಬಿಗ್ ಬಾಸ್ 'ಜೋಗಿ' ಚಿತ್ರದ ಹಾಡು "ನಿಂಗಿ ನಿಂಗಿ ನಿಂಗವ್ವೋ..." ಹಾಕಿದರು. ಮಲಗಿದ್ದವರೆಲ್ಲಾ ಎದ್ದೆನೋ ಬಿದ್ದೆನೋ ಎಂದು ಗುರುಪ್ರಸಾದ್ ಅವರನ್ನು ಎಬ್ಬಿಸಿದರು. ಅವರು ಐಟಂ ಡಾನ್ಸ್ ಚೆನ್ನಾಗಿಯೇ ಹಾಡಿದರು.


Click it and Unblock the Notifications











