ಸದ್ದಿಲ್ಲದೇ ಮದುವೆಯಾದ ಸಂಜನಾ ಚಿದಾನಂದ್; ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದೇಕೆ?
ಬಿಗ್‌ಬಾಸ್ ಕನ್ನಡ ಸೀಸನ್-4ರ ಸ್ಪರ್ಧಿ ಚಂದನಾ ಚಿದಾನಂದ್ ತಮ್ಮ ಮದುವೆ ವಿಚಾರ ಬಹಿರಂಗಪಡಿಸಿದ್ದಾರೆ. ಅಮಿತ್ ಶೆಣೈ ಎಂಬುವವರ ಜೊತೆ ಮದುವೆ ಆಗಿದೆ ಎಂದು ಫೋಟೊ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಂಜನಾ ನಟಿಸಿದ್ದರು. ಇತ್ತೀಚೆಗೆ ಬಣ್ಣದಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಂಜನಾ ವಿಚಾರಕ್ಕೆ ಪ್ರಥಮ್ ಹಾಗೂ ಭುವನ್ ಪೊನ್ನಣ್ಣ ನಡುವೆ ಕಿರಿಕ್ ಆಗಿದ್ದು ಇದೆ. ಕಿರಿಕ್ ಕೀರ್ತಿ, ಪ್ರಥಮ್, ಸಂಜನಾ, ಶೀತಲ್ ಶೆಟ್ಟಿ ಒಟ್ಟಿಗೆ ಬಿಗ್‌ಬಾಸ್ ಮನೆಯಲ್ಲಿ ಇದ್ದವರು. ಇನ್ನು ಸಂಜನಾ ಮದುವೆ ಬಗ್ಗೆ ಈ ಹಿಂದೆ ಕೂಡ ಗುಸು ಗುಸು ಕೇಳಿಬಂದಿತ್ತು. ಆದರೆ ಯಾವುದು ನಿಜವಾಗಿರಲಿಲ್ಲ.

ಗೌರವ್ ರಾಯ್ ಎಂಬುವವರನ್ನು ಪ್ರೀತಿ ಮಾಡ್ತಿದ್ದೀನಿ. ಅವರೊಟ್ಟಿಗೆ ಮದುವೆ ಆಗ್ತೀನಿ, ನನ್ನ ಹಾಗೂ ಭುವನ್ ಪೊನ್ನಣ್ಣ ನಡುವೆ ಸ್ನೇಹ ಮಾತ್ರ ಇತ್ತು ಎಂದು ಸಂಜನಾ ಚಿದಾನಂದ್ ಹಿಂದೆ 'ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇನ್ನು ಸಂಜನಾ ಕೈ ಹಿಡಿದಿರುವ ಅಮಿತ್ ಶೆಣೈ Groovinto ಸಂಸ್ಥೆ ಸಿಇಓ ಆಗಿದ್ದು ನಟ, ನಿರ್ದೇಶಕ ಕೂಡ ಆಗಿದ್ದಾರೆ.
ಅಮಿತ್ ಜೊತೆಗಿನ ಫೋಟೊ ಹಾಕಿ 'ಮ್ಯಾರೀಡ್' ಎಂದು ಕ್ಯಾಪ್ಷನ್ ಕೊಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಸಂಜನಾ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಪೋಸ್ಟ್ ಮಾಡಿ ಡಿಲೀಟ್ ಮಾಡಲು ಕಾರಣ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಆಕೆಗೆ ಫೋನ್ ಮಾಡಿದರೂ ಪ್ರತಿಕ್ರಿಯಿಸುತ್ತಿಲ್ಲ. ಈ ಬಗ್ಗೆ ಸ್ವತಃ ಸಂಜನಾ ಸ್ಪಷ್ಟನೆ ಕೊಡಬೇಕಿದೆ.
ಕನ್ನಡದಲ್ಲಿ 'ಕಿರಿಕ್ ಕೀರ್ತಿ' ಎಂಬ ಚಿತ್ರದಲ್ಲಿ ನಟಿಸಲು ಸಂಜನಾ ಒಪ್ಪಿದ್ದರು. ಬಳಿಕ ಹಿಂದೇಟು ಹಾಕಿದ್ದರು. 'ಮೊಂಬತ್ತಿ' ಹಾಗೂ 'ಉಡುಂಬ' ಚಿತ್ರಗಳಲ್ಲಿ ಮಿಂಚಿದ್ದರು. 'ನೀಲಿ ಕಲುವುಲು' ಹಾಗೂ 'ಲಾಹಿರಿ' ಎಂಬ ತೆಲುಗು ಧಾರಾವಾಹಿಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಹೊಸ ಹೊಸ ಫೋಟೊಶೂಟ್ ಮಾಡಿಸಿ ಹಂಚಿಕೊಳ್ಳುತ್ತಿರುತ್ತಾರೆ. 'ಕುಲವಧು', 'ಜೀವನಚೈತ್ರ', 'ಬ್ರಹ್ಮಗಂಟು' ಆಕೆ ಕನ್ನಡದಲ್ಲಿ ನಟಿಸಿದ ಧಾರಾವಾಹಿಗಳು.
'ಸಂಜು ಮತ್ತು ನಾನು' ಎಂಬ ಧಾರಾವಾಹಿಯಲ್ಲಿ ಪ್ರಥಮ್ ಹಾಗೂ ಭುವನ್ ಪೊನ್ನಣ್ಣ ಜೊತೆ ಸಂಜನಾ ನಟಿಸಿದ್ದರು. 24 ಕಂತುಗಳಾಗಿ ವೀಕೆಂಡ್ ಈ ಶೋ ಪ್ರಸಾರವಾಗಿತ್ತು.


Click it and Unblock the Notifications











