'ಬಿಗ್ ಬಾಸ್' ಮನೆಯಲ್ಲಿ ಪುಟಾಣಿ ಸಾಹಸ ಸಿಂಹ ವಿಷ್ಣುವರ್ಧನ್.!
ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಪುಟಾಣಿ ಮಗುವಿನ ಕಲರವ ಶುರು ಆಗಿದೆ. ಮನೆಗೆ ಮಗುವಿನ ಗೊಂಬೆಯೊಂದನ್ನು ಕಳುಹಿಸುವ ಮೂಲಕ ಸ್ಪರ್ಧಿಗಳಿಗೆಲ್ಲ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದಾರೆ.
ಮಗುವಿನ ಗೊಂಬೆ ಯಾವ ಜೋಡಿ ಕೈಸೇರುತ್ತದೆಯೋ, ಅವರು ಅದನ್ನು ಮಗುವಿನಂತೆಯೇ ಕಾಳಜಿಯಿಂದ ನೋಡಿಕೊಂಡು ಲಾಲನೆ, ಪೋಷಣೆ ಮಾಡಬೇಕು.
ಗೊಂಬೆಯನ್ನು ತಮ್ಮ ಮಗುವಿನಂತೆಯೇ ನೋಡಿಕೊಳ್ಳಲು ಸ್ಪರ್ಧಿಗಳು ಶುರು ಮಾಡಿದರು. ಅದರಂತೆಯೇ, ಮಗುವಿನ ಗೊಂಬೆ ದಿವಾಕರ್-ಸಮೀರಾಚಾರ್ಯ ಜೋಡಿ ಕೈ ಸೇರಿದಾಗ ಮಗುವಿಗೆ 'ಸಾಹಸ ಸಿಂಹ ವಿಷ್ಣುವರ್ಧನ' ಅಂತ ನಾಮಕರಣ ಮಾಡಿದರು.

ಅದಾಗಲೇ, ಮಗುವಿನ ಗೊಂಬೆಗೆ ಇತರೆ ಜೋಡಿಗಳು 'ಬೆಳಕು', 'ಪ್ರಿನ್ಸ್' ಅಂತೆಲ್ಲ ನಾಮಕರಣ ಮಾಡಿದ್ದರು. ಸಮೀರಾಚಾರ್ಯ-ದಿವಾಕರ್ ಕೈಗೆ ಮಗುವಿನ ಗೊಂಬೆ ಸಿಕ್ಕಾಗ, ಅದು 'ಸಾಹಸ ಸಿಂಹ ವಿಷ್ಣುವರ್ಧನ' ಆಯ್ತು.
''ನೀನು ಯಾವತ್ತೂ ಸಾಹಸ ಸಿಂಹ ವಿಷ್ಣುವರ್ಧನ ತರಹ ಇರಬೇಕು. ದೊಡ್ಡವನು ಆದ್ಮೇಲೆ ಅವರ ಹಾಗೆ ದೊಡ್ಡ ವ್ಯಕ್ತಿ ಆಗಬೇಕು. ಕನ್ನಡ ನಾಡಿನ ಕೀರ್ತಿ ಬೆಳಗಿಸಬೇಕು'' ಅಂತ ಹೇಳ್ತಾ ಮಗುವಿನ ನಾಮಕರಣ ನಡೆಯಿತು.
ಬಹುಶಃ ದಿವಾಕರ್ ಮತ್ತು ಸಮೀರಾಚಾರ್ಯ.. ಡಾ.ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿಗಳಾಗಿರಬೇಕು. ಅದಕ್ಕೆ ಅವರ ಹೆಸರನ್ನೇ ತಮಗೆ ಸಿಕ್ಕ ಮಗುವಿನ ಗೊಂಬೆಗೆ ಇಟ್ಟಿದ್ದಾರೆ.


Click it and Unblock the Notifications











