'ಬಿಗ್ ಬಾಸ್': ಕೊನೆಯವರೆಗೂ ಬಂದು ರನ್ ಔಟ್ ಆದ ಆಂಡ್ರ್ಯೂ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ಮೊದಲ ದಿನವಾದ ಇಂದು ಎರಡು ವಿಕೆಟ್ ಡೌನ್ ಆಗಿದೆ. ಮೊದಲು ಆರ್.ಜೆ ರಾಪಿಡ್ ರಶ್ಮಿ ಎಲಿಮಿನೇಟ್ ಆದರೆ, ನಂತರ ಅದೇ ಹಾದಿಯಲ್ಲಿ ಹೊರಗೆ ಬಂದವರು ಆಂಡಿ ಅಲಿಯಾಸ್ ಆಂಡ್ರ್ಯೂ.
30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, 'ಬಿಗ್ ಬಾಸ್' ಮನೆಯೊಳಗೆ ಕಾಮನ್ ಮ್ಯಾನ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದವರು ಆಂಡ್ರ್ಯೂ. 99 ದಿನ 'ಬಿಗ್ ಬಾಸ್' ಮನೆಯಲ್ಲಿ ಡವ್, ಡ್ರಾಮಾ, ಜಗಳ ಮಾಡಿದ್ದ ಆಂಡ್ರ್ಯೂ, ಗೆಲ್ಲಲು ಇನ್ನೊಂದು ರನ್ ಬಾಕಿ ಇರುವಾಗ ರನ್ ಔಟ್ ಆಗಿದ್ದಾರೆ.

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಅತಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿಗಳ ಪೈಕಿ ಆಂಡ್ರ್ಯೂ ಕೂಡ ಒಬ್ಬರು. ಕಾಲು ಕೆರೆದುಕೊಂಡು ಕಿತ್ತಾಟ ಮಾಡಿಕೊಳ್ಳುತ್ತಿದ್ದ ಆಂಡ್ರ್ಯೂ 'ಬಿಗ್ ಬಾಸ್' ಮನೆಯಲ್ಲಿ ಆಡಿರುವ ಜಗಳಗಳು ಒಂದೆರಡಲ್ಲ. 'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಂತೂ ಇತರೆ ಸ್ಪರ್ಧಿಗಳಿಗೆ ಅಕ್ಷರಶಃ ಕಿರುಕುಳ ಕೊಟ್ಟಿದ್ದರು ಆಂಡ್ರ್ಯೂ.
'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಉಳಿದುಕೊಳ್ಳಲು ಆಂಡ್ರ್ಯೂ ಏನೇನೋ ಸ್ಟ್ರಾಟೆಜಿ ಮಾಡಿದ್ದರು. ಹಾಗೂ ಹೀಗೂ ಟಾಪ್ 5 ಹಂತ ತಲುಪಿದ ಆಂಡ್ರ್ಯೂ, ಇದೀಗ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಆಂಡ್ರ್ಯೂ ಜೊತೆಗೆ ರಾಪಿಡ್ ರಶ್ಮಿ, ನವೀನ್ ಸಜ್ಜು, ಶಶಿ ಕುಮಾರ್ ಮತ್ತು ಕವಿತಾ ಗೌಡ ಫೈನಲಿಸ್ಟ್ ಆಗಿದ್ದರು. ಐವರ ಪೈಕಿ ರಾಪಿಡ್ ರಶ್ಮಿ ಔಟ್ ಆದರು. ಬಳಿಕ ಆಂಡ್ರ್ಯೂ ಹೊರ ಬಂದರು.
ಸದ್ಯ ಟಾಪ್ 3 ಹಂತದಲ್ಲಿ ನವೀನ್ ಸಜ್ಜು, ಕವಿತಾ ಗೌಡ ಮತ್ತು ಶಶಿ ಕುಮಾರ್ ಇದ್ದಾರೆ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ವಿನ್ನರ್ ಯಾರು ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.


Click it and Unblock the Notifications











