ಚಿತ್ರಹಿಂಸೆ ನೀಡಿದ 'ವಿಲನ್' ಆಂಡಿ ವಿರುದ್ಧ ಪೊಲೀಸ್ ಕಂಪ್ಲೇಂಟ್.!
Recommended Video

ಮಾತಲ್ಲೇ ಎಲ್ಲಾ ಸ್ಪರ್ಧಿಗಳಿಗೂ ಕಿರಿಕಿರಿ ಮಾಡುತ್ತಿದ್ದ ಆಂಡ್ರ್ಯೂ, ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್'ನಲ್ಲಿ ಅಕ್ಷರಶಃ 'ವಿಲನ್' ಆಗಿದ್ದರು. ಚಟುವಟಿಕೆಯ ನೆಪದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೀರೋಗಳ ಕಣ್ಣು, ಬಾಯಿಗೆ ಸ್ಪ್ರೇ ಮಾಡಿ ಆಂಡಿ ಕಿರುಕುಳ ನೀಡಿದ್ದರು.
''ಕಣ್ಣಿಗೆ ಸ್ಪ್ರೇ ಹಾಕಬೇಡಿ'' ಅಂತ ಯಾರು ಎಷ್ಟೇ ಹೇಳಿದರೂ, ಆಂಡಿ ಮಾತ್ರ ನಿಲ್ಲಿಸಲಿಲ್ಲ. ಗಾಯ ಆಗಿದ್ದ ಜಾಗಕ್ಕೂ ಆಂಡಿ ಸ್ಪ್ರೇ ಹಾಕಿ ಹೀರೋ ಪಾತ್ರಧಾರಿಗಳಿಗೆ ಚಿತ್ರಹಿಂಸೆ ನೀಡಿದ್ದರು. ಚಟುವಟಿಕೆಯಲ್ಲಿ ವಿಲನ್ ಆಗಿದ್ದ ಆಂಡಿ, ಅಕ್ಷರಶಃ ಕ್ರೂರಿಯಂತೆ ವರ್ತಿಸಿದ್ದರು.
ಇಷ್ಟೆಲ್ಲಾ ನಡೆಯುತ್ತಿದ್ದರೂ, 'ಬಿಗ್ ಬಾಸ್' ಮಾತ್ರ ಸ್ಪ್ರೇ ಮಾಡುವುದನ್ನು ನಿಲ್ಲಿಸಲು ಆಂಡಿಗೆ ಸೂಚಿಸಲಿಲ್ಲ. ಇದನ್ನೆಲ್ಲ ಗಮನಿಸಿದ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಎಂಬ ಸಂಸ್ಥೆ ಬಿಡದಿ ಪೊಲೀಸ್ ಠಾಣೆಯಲ್ಲಿ 'ಬಿಗ್ ಬಾಸ್' ಆಯೋಜಕರು ಮತ್ತು ಆಂಡಿ ವಿರುದ್ಧ ಕಂಪ್ಲೇಂಟ್ ಕೊಟ್ಟಿದೆ. ಮುಂದೆ ಓದಿರಿ...

ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಆಟದ ನೆಪದಲ್ಲಿ ವಿಕೃತ ರೂಪ ತಾಳಿದ ಸ್ಪರ್ಧಿಗಳ ವಿರುದ್ಧ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಬಿಡದಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ದೂರುದಾರರ ಅಭಿಪ್ರಾಯ.

ಸ್ಪರ್ಧಿಗಳ ವಿರುದ್ಧ ದೂರು
ಚಿತ್ರಹಿಂಸೆ ನೀಡಿದ ಆಂಡಿ ಜೊತೆಗೆ ರಾಕೇಶ್, ರಶ್ಮಿ, ಮುರಳಿ, ನವೀನ್, ಮೇಘಶ್ರೀ ಮತ್ತು ಬಿಗ್ ಬಾಸ್ ತಾಂತ್ರಿಕ ತಂಡ, ಆಯೋಜಕರ ವಿರುದ್ಧ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ದೂರು ಕೊಟ್ಟಿದೆ. ಕಣ್ಣಿಗೆ, ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವ ಸ್ಪ್ರೇಗಳನ್ನು ಆಂಡಿ ಹೊಡೆಯುತ್ತಿದ್ದರೂ, ಅದನ್ನ 'ಬಿಗ್ ಬಾಸ್' ಆಯೋಜಕರು ತಡೆಯದ ಕಾರಣ ದೂರುದಾರರು ಕುಪಿತಗೊಂಡಿದ್ದಾರೆ.

ಕಠಿಣ ಕ್ರಮ ಜರುಗಿಸಿ
ಪರ್ಫ್ಯೂಮ್ ಸ್ಪ್ರೇ ಸೇವಿಸಿ ಮರಣ ಹೊಂದಿರುವವರ ಕುರಿತು ವರದಿಗಳನ್ನು ಪೊಲೀಸರಿಗೆ ಸಲ್ಲಿಸಿರುವ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್, ಸ್ಪರ್ಧಿಗಳು ಮತ್ತು ಬಿಗ್ ಬಾಸ್ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮುಂದೇನು.?
ಕಣ್ಣು, ಮೂಗಿಗೆ ಸ್ಪ್ರೇ ಮಾಡಿದ ಆಂಡಿ ವಿರುದ್ಧ ಕಿಚ್ಚ ಸುದೀಪ್ ಕೂಡ ಕಿಡಿಕಾರಿದ್ದರು. ಇತ್ತ ಪೊಲೀಸ್ ಕಂಪ್ಲೇಂಟ್ ದಾಖಲಾಗಿರುವ ಕಾರಣ, ಆಂಡಿಯನ್ನ ಪೊಲೀಸರು ಬಂಧಿಸಿದ್ದಾರಂತೆ ಎಂಬ ಅಂತೆ-ಕಂತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪ್ರಕರಣವನ್ನ 'ಬಿಗ್ ಬಾಸ್' ಆಯೋಜಕರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನ ನೋಡಬೇಕು.


Click it and Unblock the Notifications











