ಕವಿತಾ ಗೊಳೋ ಎನ್ನಲು ಕಾರಣವಾದ ಆ ಚಾಟ್ ಶೋನಲ್ಲಿ ನಡೆದಿದ್ದೇನು.?
ಒಪ್ಪಂದ ಮಾಡಿಕೊಂಡು ನಾಮಿನೇಷನ್ ನಿಂದ ಸೇಫ್ ಆದ್ಮೇಲೆ ಆಂಡ್ರ್ಯೂ ವಿರುದ್ಧ ಆರೋಪ ಮಾಡಿದ್ದ ಕವಿತಾ ಗೌಡ ನಿನ್ನೆ ಗೊಳೋ ಅಂತ ಕಣ್ಣೀರಿಟ್ಟರು. ಕವಿತಾ ಮಾತ್ರ ಅಲ್ಲ ಜಯಶ್ರೀ ಕೂಡ ಕಣ್ಣೀರು ಸುರಿಸಿದರು.
ಅತ್ತ ಕವಿತಾ ಗೌಡ ಬೇಸರ ಮಾಡಿಕೊಂಡು ಕೂತಿದ್ದರೆ, ಇತ್ತ ಆಂಡ್ರ್ಯೂ ಮೇಲೆ ರೊಚ್ಚಿಗೆದ್ದ 'ಮಾರ್ಡನ್ ರೈತ' ಶಶಿ ಕುಮಾರ್ ಗೋಡೆಗೆ ಕೈ ಗುದ್ದುಕೊಂಡು ಪೆಟ್ಟು ಮಾಡಿಕೊಂಡರು.
'ಬಿಗ್ ಬಾಸ್' ಮನೆಯಲ್ಲಿ ಇಷ್ಟೆಲ್ಲಾ ರಂಪಾಟ ನಡೆಯಲು ಕಾರಣ ಒಂದು ಚಾಟ್ ಶೋ. ಆ ಚಾಟ್ ಶೋನಲ್ಲಿ ಆಂಡ್ರ್ಯೂ ಮತ್ತು ನವೀನ್ ಸಜ್ಜು ಆಡಿದ ಮಾತುಗಳು ಕವಿತಾ ಗೌಡಗೆ ಬೇಸರ ಮೂಡಿಸಿತು.
ಅಷ್ಟಕ್ಕೂ, 'ಆ' ಚಾಟ್ ಶೋನಲ್ಲಿ ನಡೆದಿದ್ದು ಏನು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ಕಾಫಿ ವಿತ್ ಕ್ಯಾಪ್ಟನ್'
'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಅಕ್ಷತಾ ಆಯ್ಕೆ ಆದ್ಮೇಲೆ, 'ಕಾಫಿ ವಿತ್ ಕ್ಯಾಪ್ಟನ್' ಎಂಬ ವಿಶೇಷ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ ಕ್ಯಾಪ್ಟನ್ ಅಕ್ಷತಾ, ಪ್ರತಿಸ್ಪರ್ಧಿಗಳಾಗಿದ್ದ ನಯನ, ಆಂಡ್ರ್ಯೂ ಮತ್ತು ನವೀನ್ ಜೊತೆ ಕಾಫಿ ಸವಿಯುತ್ತಾ ಒಂದು ಚಾಟ್ ಶೋ ನಡೆಸಬೇಕಾಗಿತ್ತು. ಚಾಟ್ ಶೋನಲ್ಲಿ ಮೂವರನ್ನೂ ಒಬ್ಬೊಬ್ಬರಾಗಿ ಆಹ್ವಾನಿಸಿ, ನೀಡಲಾಗುವ ಐದು ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಉತ್ತರ ಪಡೆಯಬೇಕಾಗಿತ್ತು. ನೇರ ಮತ್ತು ಪ್ರಾಮಾಣಿಕ ಉತ್ತರ ನೀಡಿದವರನ್ನು ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು.

ಮೊದಲ ಅತಿಥಿ ಆಂಡ್ರ್ಯೂ
'ಕಾಫಿ ವಿತ್ ಕ್ಯಾಪ್ಟನ್' ಕಾರ್ಯಕ್ರಮಕ್ಕೆ ಅಕ್ಷತಾ ಮೊದಲು ಆಂಡ್ರ್ಯೂನ ಆಹ್ವಾನಿಸಿದರು. ''ಡೇಟ್, ಮದುವೆ, ಕಿಲ್.. ಈ ಮೂರಕ್ಕೆ ಮನೆಯ ಒಬ್ಬೊಬ್ಬ ಸದಸ್ಯರ ಹೆಸರನ್ನು ತಿಳಿಸಿ ಮತ್ತು ಯಾಕೆ ಎಂದು ವಿವರಿಸಿ'' ಎಂದು ಆಂಡ್ರ್ಯೂಗೆ ಅಕ್ಷತಾ ಪ್ರಶ್ನಿಸಿದರು.

ನಯನ ಜೊತೆಗೆ ಡೇಟಿಂಗ್
''ನಾನು ನಯನ ಜೊತೆಗೆ ಡೇಟ್ ಮಾಡುವೆ. ಯಾಕಂದ್ರೆ, ಒಬ್ಬರ ಜೊತೆಗೆ ಸಮಯ ಕಳೆಯಲು ನಯನಗಿಂತ ಉತ್ತಮ ಇಲ್ಲಿ ಬೇರೆ ಯಾರೂ ನನಗೆ ಕಾಣುತ್ತಿಲ್ಲ'' ಅಂತ ಆಂಡ್ರ್ಯೂ ಹೇಳಿದರು.

ರಶ್ಮಿ ಜೊತೆಗೆ ಮದುವೆ
''ಮದುವೆ ಅಂತ ಬಂದ್ರೆ, ರಶ್ಮಿ ರವರನ್ನ ಆಯ್ಕೆ ಮಾಡುವೆ. ರಶ್ಮಿಯಲ್ಲಿ ಇರುವ ಗುಣಗಳು ನನಗೆ ಇಷ್ಟ. ಅವರು ನೇರವಾಗಿ ಮಾತನಾಡುತ್ತಾರೆ. ಹೀಗಾಗಿ, ಯಾವುದೇ ಸಮಸ್ಯೆ ಇರಲ್ಲ ಅನ್ನೋದು ನನ್ನ ಭಾವನೆ'' ಎಂದರು ಆಂಡ್ರ್ಯೂ.

ಕಿಲ್ ಕವಿತಾ.!
''ಕಿಲ್ ಅನ್ನೋದನ್ನ ನಾನು ಕವಿತಾಗೆ ಕೊಡುವೆ. ಬಾಣ ಬಿಟ್ಟರೆ ಪ್ರಾಣಿಗಳು ಸಾಯುತ್ತೆ. ಅದೇ ಬಾಣವನ್ನ ಹೃದಯಕ್ಕೆ ಬಿಟ್ಟರೆ ಅಲ್ಲಿ ಪ್ರೀತಿ ಹುಟ್ಟುತ್ತೆ. ವ್ಯತ್ಯಾಸ ಇಷ್ಟೇ. ಒಬ್ಬರನ್ನ ಕೆಟ್ಟ ರೀತಿಯಲ್ಲಿ ಸಾಯಿಸುವ ಅವಶ್ಯಕತೆ ಇಲ್ಲ. ಪ್ರೀತಿಯಲ್ಲೂ ನಾವು ಸಾಯಿಸಬಹುದು'' ಅಂತ ಆಂಡ್ರ್ಯೂ ಹೇಳಿದಾಗ, ಅದಕ್ಕೆ ಪ್ರತಿಕ್ರಿಯೆ ಕೊಡಲು ಕವಿತಾ ಮುಂದಾದರು. ಅಷ್ಟರಲ್ಲಿ, ''ಪ್ರತಿಕ್ರಿಯೆ ಬೇಡ ದಯವಿಟ್ಟು'' ಅಂತ ಅಕ್ಷತಾ ಅಲ್ಲೇ ಕವಿತಾ ರನ್ನ ತಡೆದರು.

ಆಂಡ್ರ್ಯೂಗೆ ಮತ್ತೊಂದು ಪ್ರಶ್ನೆ
''ಈ ಮನೆಯಲ್ಲಿ ಹತ್ತು ನಿಮಿಷ ಕಾಲ ಕಳೆಯಲು ಈಗ ಯಾವ ಸದಸ್ಯರನ್ನು ಆಯ್ಕೆ ಮಾಡುತ್ತೀರಾ.? ಮತ್ತು ಯಾಕೆ.?'' ಅಂತ ಅಕ್ಷತಾ ಕೇಳಿದಾಗ, ''ಇವತ್ತಲ್ಲ.. ಎಷ್ಟೇ ದಿನ ಆದರೂ, ಆ ಹತ್ತು ನಿಮಿಷ ಅವರದ್ದೇ (ಕವಿತಾ). ಹತ್ತು ನಿಮಿಷ ಕೊಡಲ್ಲ ಅಂದ್ರೆ ನೋ ಪ್ರಾಬ್ಲಂ. ವ್ಯಕ್ತಿಯಂತೂ ಏನೇ ಆದರೂ ಬದಲಾಗುವುದಿಲ್ಲ'' ಎಂದರು ಆಂಡ್ರ್ಯೂ.

ನವೀನ್ ಹೇಳಿದ್ದೇನು.?
''ಹುಡುಗೀರಂದ್ರೆ ಡೇಂಜರಪ್ಪೋ...'' ಹಾಡು ಯಾರಿಗೆ ಅನ್ವಯಿಸುತ್ತದೆ ಮತ್ತು ಯಾಕೆ.? ಎಂದು ಅಕ್ಷತಾ ಪ್ರಶ್ನಿ ಮಾಡಿದಾಗ ನವೀನ್ ''ಕವಿತಾ'' ಎಂದರು. ಅದಕ್ಕೆ, ಅವರು ಕೊಟ್ಟ ವಿವರಣೆ - ''ನಾಮಿನೇಷನ್ ಪ್ರಕ್ರಿಯೆಯಲ್ಲಿ ಆ ಕಥೆ ಕೇಳಿ ಹುಡುಗಿಯರಂದ್ರೆ ಡೇಂಜರ್ ಅಂತ ನನಗೆ ಅನಿಸಿತು''

ಆಂಡ್ರ್ಯೂಗೆ ಬಹುಮಾನ
ಚಾಟ್ ಶೋನಲ್ಲಿ ನೇರವಾಗಿ ಮತ್ತು ಪ್ರಾಮಾಣಿಕವಾಗಿ ಉತ್ತರ ಕೊಟ್ಟವರು ಆಂಡ್ರ್ಯೂ ಅಂತ ಅಕ್ಷತಾ ಘೋಷಿಸಿದರು. ಆಂಡ್ರ್ಯೂಗೆ ಬಹುಮಾನ ಕೂಡ ಲಭಿಸಿತು.

ಬೇಸರಗೊಂಡ ಕವಿತಾ
ಇದನ್ನೆಲ್ಲಾ ನೋಡುತ್ತಿರುವಾಗಲೇ, ಕವಿತಾ ಮಂಕಾಗಿದ್ದರು. ಚಾಟ್ ಶೋ ಮುಗಿದ್ಮೇಲೆ, ಕವಿತಾ ಕಣ್ಣೀರಿಡಲು ಆರಂಭಿಸಿದರು. ಜಯಶ್ರೀ ಮತ್ತು ಶಶಿ ಕೂಡ ಗರಂ ಆಗಿದ್ದರು.


Click it and Unblock the Notifications











