ಉತ್ತರ ಕರ್ನಾಟಕದ ಮಂದಿಯನ್ನ ಸೋನು ಪಾಟೀಲ್ ದುರುಪಯೋಗ ಪಡಿಸಿಕೊಳ್ತಿದ್ದಾರಾ.?
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಸ್ಪರ್ಧಿ ಸೋನು ಪಾಟೀಲ್ ಉತ್ತರ ಕರ್ನಾಟಕದ ಜವಾರಿ ಹುಡುಗಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಉತ್ತರ ಕರ್ನಾಟಕದ ಭಾಷೆಯಲ್ಲೇ ಸದಾ ಮಾತನಾಡುವ ಸೋನು ಪಾಟೀಲ್ ''ಉತ್ತರ ಕರ್ನಾಟಕದ ಮಂದಿಯನ್ನ ದುರುಪಯೋಗ ಪಡಿಸಿಕೊಳ್ತಿದ್ದಾರಾ.?'' - ಇಂತಹ ಪ್ರಶ್ನೆ ಮೂಡಲು ಕಾರಣ ಆಂಡ್ರ್ಯೂ ಮಾಡಿರುವ ಆರೋಪ.!
ಆಂಡ್ರ್ಯೂ ಮತ್ತು ಸೋನು ನಡುವೆ ನಿನ್ನ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಕಿತ್ತಾಟವೇ ನಡೆಯಿತು. ಈ ವೇಳೆ ''ಉತ್ತರ ಕರ್ನಾಟಕದ ಮಂದಿಯ ಕಾಲು ಧೂಳಿನ ಸಮ ಅಲ್ಲ ನೀನು'' ಎಂದು ಆಂಡ್ರ್ಯೂಗೆ ಸೋನು ಪಾಟೀಲ್ ತಿರುಗೇಟು ಕೊಟ್ಟರು.
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ''ಉತ್ತರ ಕರ್ನಾಟಕದ ಮಂದಿಯನ್ನ ಸೋನು ದುರುಪಯೋಗ ಪಡಿಸಿಕೊಳ್ತಿದ್ದಾರೆ, ಯಾಮಾರಿಸುತ್ತಿದ್ದಾರೆ'' ಅಂತ ಆಂಡ್ರ್ಯೂ ಹೇಳಿಬಿಟ್ಟರು.
ಅಷ್ಟಕ್ಕೂ, ಇಬ್ಬರ ನಡುವೆ ಅಂಥದ್ದೇನಾಯ್ತು ಅಂದ್ರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಸೂಟ್ ಕೇಸ್ ವಿಚಾರಕ್ಕೆ ಆರಂಭವಾದ ಜಗಳ.!
'ಬಿಗ್ ಬಾಸ್' ಮನೆಯಲ್ಲಿ ಗೊಂಬೆ ತಯಾರಿಸುವ ಚಟುವಟಿಕೆ ಚಾಲ್ತಿಯಲ್ಲಿತ್ತು. ತಂಡದ ಹಣ ಮತ್ತು ಗೊಂಬೆ ತಯಾರಿಸಲು ಬೇಕಾದ ಅಗತ್ಯ ವಸ್ತುಗಳನ್ನೆಲ್ಲಾ ಜೋಪಾನವಾಗಿ ಇಟ್ಟುಕೊಳ್ಳಲು 'ಕೆಂಪು' ತಂಡ ಸೋನು ಪಾಟೀಲ್ ಸಹಾಯ ಪಡೆದರು. 'ಕೆಂಪು' ತಂಡದ ಭಾಗವಾಗಿದ್ದ ಸೋನು, ತಮ್ಮ ಕ್ಯಾಪ್ಟನ್ ರೂಮ್ ನಲ್ಲಿ ಎಲ್ಲ ವಸ್ತುಗಳನ್ನು ಸೂಟ್ ಕೇಸ್ ನಲ್ಲಿ ಹಾಕಿ ಇಡಲು ಅನುಮತಿ ಕೊಟ್ಟರು. ಹೀಗಾಗಿ, ತಂಡದ ಎಲ್ಲಾ ಸದಸ್ಯರ ಸೂಟ್ ಕೇಸ್ ಗಳು ಕ್ಯಾಪ್ಟನ್ ಸೋನು ರೂಮ್ ನಲ್ಲಿತ್ತು. ತಮ್ಮ ಸೂಟ್ ಕೇಸ್ ನ ಹುಡುಕುತ್ತಾ ಆಂಡ್ರ್ಯೂ ಬಂದಾಗ, ''ನಿನ್ನ ಸೂಟ್ ಕೇಸ್ ಇಲ್ಲ'' ಅಂತ ಸೋನು ಹೇಳಿದರು. ಇಲ್ಲಿಂದಲೇ ಜಗಳ ಆರಂಭ ಆಗಿದ್ದು.

'ತಾತ' ಎಂದ ಆಂಡ್ರ್ಯೂ
ತಮ್ಮ ಸೂಟ್ ಕೇಸ್ ಸಿಕ್ಕ ಕೂಡಲೆ, ''ಇದು ಯಾರದ್ದು, ನಿನ್ನ ತಾತನದ್ದಾ.?'' ಅಂತ ಆಂಡ್ರ್ಯೂ ಹೇಳಿದರು. ಅದಕ್ಕೆ, ''ಮನೆಯವರ ಬಗ್ಗೆ ಮಾತನಾಡಬೇಡ ಅಂತ ಸುದೀಪ್ ಮೊನ್ನೆ ಉಗಿದಿದ್ದಾರೆ. ಮನುಷ್ಯರ ಮಗ ಆದರೆ ಮಾತು ಕೇಳು. ಸುದೀಪ್ ಮಾತಿಗೆ ಬೆಲೆ ಕೊಡದ ಮನುಷ್ಯ ನಮ್ಮ ಮಾತಿಗೆ ಬೆಲೆ ಕೊಡ್ತ್ಯಾ.?'' ಅಂತ ಸೋನು ಪಾಟೀಲ್ ತಿರುಗೇಟು ಕೊಟ್ಟರು.

ಕೆಣಕಲು ಆರಂಭಿಸಿದ ಆಂಡ್ರ್ಯೂ
''ಫ್ರೀ ಆಗಿ ಸಿಗುವುದು ಅಡ್ವೈಸ್'' ಅಂತ ಸೋನು ಪಾಟೀಲ್ ನ ಆಂಡ್ರ್ಯೂ ಕೆಣಕಿದ್ದಕ್ಕೆ, ತಂಡದ ಎಲ್ಲರನ್ನೂ ಕ್ಯಾಪ್ಟನ್ ರೂಮ್ ನಿಂದ ಹೊರಗೆ ಹೋಗುವಂತೆ ಸೋನು ಸೂಚಿಸಿದರು. ಇದರಿಂದ ರೊಚ್ಚಿಗೆದ್ದ ಆಂಡ್ರ್ಯೂ, ''ಸೋನು ಮುಖವಾಡ ಆಚೆ ಬರ್ತಾಯಿದೆ. ಉತ್ತರ ಕರ್ನಾಟಕದ ಜನ ನೋಡಿಕೊಳ್ಳಿ.. ಸೋನು ಬುದ್ಧಿ ಈ ತರಹ ಇದೆ. ಕೆಟ್ಟ ಬುದ್ಧಿ ಸೋನು'' ಅಂತೆಲ್ಲಾ ಮಾತನಾಡಲು ಆರಂಭಿಸಿದರು.

ಸವಾಲು ಹಾಕಿದ ಸೋನು
''ನನಗೆ ಏನು ಬೇಕಾದರೂ ಹೇಳು.. ನಮ್ಮ ಉತ್ತರ ಕರ್ನಾಟಕದ ಮಂದಿ ಬಗ್ಗೆ ಯಾಕೆ ಮಾತನಾಡುತ್ತೀಯಾ.? ನಮ್ಮ ಉತ್ತರ ಕರ್ನಾಟಕದ ಮಂದಿ ಕಾಲು ಧೂಳಿನ ಸಮ ಅಲ್ಲ ನೀನು. ಉತ್ತರ ಕರ್ನಾಟಕದ ಮಂದಿ ಸಪೋರ್ಟ್ ಮಾಡಿದ್ದಕ್ಕೆ ಮೂರು ವಾರದಿಂದ ಇದ್ದೇನೆ. ನಿನ್ನ ತರಹ ಚೀಪ್ ಮೆಂಟಾಲಿಟಿ ಇಲ್ಲ ನನಗೆ. ಇದೇ ಮನೆಯಲ್ಲಿ ಚಾಲೆಂಜ್ ಹಾಕುವೆ.... ನಾನು ಮೊದಲು ಹೋಗುತ್ತೇನೋ, ನೀನು ಮೊದಲು ಹೋಗ್ತೀಯೋ ನೋಡೋಣ. ಉತ್ತರ ಕರ್ನಾಟಕದ ಮಂದಿ ಪವರ್ ಏನು ಅಂತ ತೋರಿಸ್ತೀನಿ ಬಾ...'' ಎಂದು ಸೋನು ಪಾಟೀಲ್ ಸವಾಲು ಹಾಕಿದರು.

ಏಟಿಗೆ ಎದಿರೇಟು
''ಎಲ್ಲಾದಕ್ಕೂ ಉತ್ತರ ಕರ್ನಾಟಕದ ಜನರನ್ನ ಯಾಕೆ ಎಳೆಯುತ್ತೀಯಾ.? ಅವರನ್ನ ನೀನು ದುರುಪಯೋಗ ಪಡಿಸಿಕೊಳ್ಳುತ್ತಿದ್ಯಾ, ಜನರನ್ನು ಯಾಮಾರಿಸುತ್ತಿದ್ಯಾ...'' ಅಂತ ಆಂಡ್ರ್ಯೂ ಆರೋಪಿಸಿದರು.

ನಿಮ್ಮ ಅಭಿಪ್ರಾಯ ಏನು.?
ಆಂಡ್ರ್ಯೂ ಹೇಳಿದಂತೆ, ಸೋನು ಪಾಟೀಲ್ ''ಉತ್ತರ ಕರ್ನಾಟಕದ ಮಂದಿಯನ್ನ ದುರುಪಯೋಗ ಪಡಿಸಿಕೊಳ್ತಿದ್ದಾರಾ.?'' ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











