ರಾಕೇಶ್-ಅಕ್ಷತಾ ಹೊರಹಾಕುವಂತೆ ಮೈಸೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ
Recommended Video

ಮೈಸೂರು, ಡಿಸೆಂಬರ್ 7: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡ-6 ಕಾರ್ಯಕ್ರಮದಿಂದ ಜನತೆಗೆ ಹಾಗೂ ನೋಡುಗರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಆರೋಪಿಸಿ ಕನ್ನಡ ಕ್ರಾಂತಿ ದಳ ಇಂದು ಪ್ರತಿಭಟನೆ ನಡೆಸಿತು.
ಅಗ್ರಹಾರ ವೃತ್ತದಲ್ಲಿ ಜಮಾಯಿಸಿ ಮಾತನಾಡಿದ ಪ್ರತಿಭಟನಾಕಾರರು, ''ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳಾದ ಅಕ್ಷತಾ ಮತ್ತು ರಾಕೇಶ್ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ವಿರುದ್ಧವಾಗಿ ನಡೆದುಕೊಳ್ಳುವುದಲ್ಲದೆ ಯುವ ಪೀಳಿಗೆಯ ಮೇಲೆ ಇದು ಪರಿಣಾಮ ಬೀರಲಿದೆ. ಭಾರತೀಯ ಪರಂಪರೆಯಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಹೇಗೆ ನಡೆದುಕೊಳ್ಳಬೇಕೆಂದು ಎಲ್ಲರಿಗೂ ತಿಳಿದಿದೆ. ಆದರೆ ಇಡೀ ಜಗತ್ತೇ ವೀಕ್ಷಣೆ ಮಾಡುತ್ತಿರುವ ಕಾರ್ಯಕ್ರಮವೊಂದರಲ್ಲಿ ಅವರಿಬ್ಬರೂ ಅನುಚಿತವಾಗಿ ವರ್ತಿಸುತ್ತಿರುವುದು ಸರಿಯಲ್ಲ'' ಎಂದರು.

''ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇಡೀ ವಿಶ್ವಕ್ಕೆ ಮದುವೆ ಎಂಬ ಪವಿತ್ರ ಬಂಧನವನ್ನು ಕೊಟ್ಟಿದ್ದು, ಇವರಿಬ್ಬರೂ ಅದಕ್ಕೆ ಕಿಂಚಿತ್ತು ಗೌರವ ನೀಡುತ್ತಿಲ್ಲ. ಇಬ್ಬರನ್ನು ಈ ಕಾರ್ಯಕ್ರಮದಿಂದ ಹೊರ ಹಾಕಿ'' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಂತ್ರಿದಳದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸತ್ಯಪ್ಪ, ಶ್ರೀಧರ್, ನವೀನ್, ಭಾನು ಮೋಹನ್ ಸೇರಿದಂತೆ ಹಲವರು ಇದ್ದರು.


Click it and Unblock the Notifications











