'ಬಿಗ್ ಬಾಸ್': ಈ ಆರು ಜನರ ಪೈಕಿ ಈ ವಾರ ಗಂಟು-ಮೂಟೆ ಕಟ್ಟೋರು ಯಾರು.?
ಯಾವ ಸ್ಪರ್ಧಿಯ ತಲೆಯಲ್ಲಿ ಏನೇನು ಲೆಕ್ಕಾಚಾರ ಓಡುತ್ತಿತ್ತೋ, ಏನೋ.. ಎಲ್ಲವನ್ನೂ ಒಂದೇ ಕ್ಷಣದಲ್ಲಿ 'ಬಿಗ್ ಬಾಸ್' ತಲೆಕಳಗು ಮಾಡಿಬಿಟ್ಟರು. ಹಿಂದಿನ ಎಲ್ಲಾ ಸೀಸನ್ ಗಳಿಗೆ ಹೋಲಿಸಿದರೆ, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ನಾಮಿನೇಷನ್ ಪ್ರಕ್ರಿಯೆಗಳು ಕೊಂಚ ವಿಭಿನ್ನವಾಗಿವೆ.
ಹಿಂದೆಲ್ಲಾ... ಕನ್ಫೆಶನ್ ರೂಮ್ ಗೆ ಹೋಗಿ.. 'ಬಿಗ್ ಬಾಸ್' ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಇಬ್ಬರು ಸ್ಪರ್ಧಿಗಳ ಹೆಸರುಗಳನ್ನು ಪ್ರತಿ ಸ್ಪರ್ಧಿಯೂ ಹೇಳಬೇಕಿತ್ತು. ಆದ್ರೀಗ, ಪ್ರತಿ ನಾಮಿನೇಷನ್ ಗೂ 'ಬಿಗ್ ಬಾಸ್' ಒಂದೊಂದು ಚಟುವಟಿಕೆ ನೀಡುತ್ತಿದ್ದಾರೆ. ಹೀಗಾಗಿ, ಈ ಬಾರಿ ಮೈಂಡ್ ಗೇಮ್ ಜೊತೆಗೆ ಅದೃಷ್ಟ ಕೂಡ ಅವಶ್ಯಕ.
'ಬಿಗ್ ಬಾಸ್' ಕೊಟ್ಟಿದ್ದ ವಿಶೇಷ ಚಟುವಟಿಕೆ ಅನುಸಾರ, ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಆರು ಮಂದಿ ನಾಮಿನೇಟ್ ಆಗಿದ್ದಾರೆ. ಆರು ಮಂದಿ ಪೈಕಿ ಈ ವಾರಾಂತ್ಯದಲ್ಲಿ ಗಂಟು-ಮೂಟೆ ಕಟ್ಟೋರು ಯಾರು.?

'ಬಿಗ್ ಬಾಸ್' ನೀಡಿದ ವಿಶೇಷ ಚಟುವಟಿಕೆ
ಮನೆಯ ಎಲ್ಲಾ ಸ್ಪರ್ಧಿಗಳಿಗೂ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಅದೇ 'ಇಷ್ಟ ಕಷ್ಟ'. ಈ ಚಟುವಟಿಕೆ ಅನುಸಾರ, ತಮಗೆ ಇಷ್ಟ ಆಗುವ ಒಬ್ಬರಿಗೆ ಸ್ಪರ್ಧಿಗಳು ಹಾರ ಹಾಕಬೇಕಿತ್ತು. ಇಷ್ಟ ಪಡದ ಇಬ್ಬರು ಸದಸ್ಯರ ಮುಖಕ್ಕೆ ಸ್ಪರ್ಧಿಗಳು ಮಸಿ ಬಳಿಯಬೇಕಿತ್ತು. ಇಷ್ಟ-ಕಷ್ಟಗಳನ್ನು ಇಟ್ಟುಕೊಂಡು ಹಾರ ಹಾಕಿ, ಮಸಿ ಬಳಿದ ಮೇಲೆ ''ಇದು ನಾಮಿನೇಷನ್ ಪ್ರಕ್ರಿಯೆ'' ಅಂತ ಹೇಳಿ ಎಲ್ಲರೂ 'ಬಿಗ್ ಬಾಸ್' ಶಾಕ್ ಕೊಟ್ಟರು.

ಆಂಡ್ರ್ಯೂ ಮುಖಕ್ಕೆ ಮಸಿ..
ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಮಾಡಿರುವ ಕಿತ್ತಾಟ, ಜಗಳಗಳನ್ನು ಇಟ್ಟುಕೊಂಡು ಶಶಿ, ಧನರಾಜ್, ಜಯಶ್ರೀ, ಕವಿತಾ, ಸೋನು, ನವೀನ್ ಮತ್ತು ರಶ್ಮಿ... ಆಂಡ್ರ್ಯೂ ಮುಖಕ್ಕೆ ಮಸಿ ಬಳಿದರು. ಏಳು ಮಂದಿ ಮಸಿ ಬಳಿದ ಪರಿಣಾಮ ಆಂಡ್ರ್ಯೂ ಡೇಂಜರ್ ಝೋನ್ ಗೆ ಬಂದರು.

ನಿರೀಕ್ಷೆ ಮಾಡದ ರಾಕೇಶ್
ರಾಕೇಶ್ ವರ್ತನೆ ಮತ್ತು ಗೇಮ್ ಪ್ಲಾನ್ ಹಲವರಿಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ, ಆನಂದ, ಧನರಾಜ್, ಜಯಶ್ರೀ, ಸೋನು ಪಾಟೀಲ್ ಮತ್ತು ಮುರಳಿ.. ರಾಕೇಶ್ ಮುಖಕ್ಕೆ ಮಸಿ ಬಳಿದರು. ಪರಿಣಾಮ, ರಾಕೇಶ್ ನಾಮಿನೇಟ್ ಆದರು.

ಆನಂದ ಕಂಡ್ರೆ ಅಷ್ಟಕಷ್ಟೆ.!
ಕೆಲವೊಮ್ಮೆ ಉಗ್ರರೂಪ ತೋರುವ, ಕೆಲವೊಮ್ಮೆ ಕಿರಿಕಿರಿ ತರುವ, ಕೆಲವೊಮ್ಮೆ ಕನ್ ಫ್ಯೂಸ್ ಮಾಡಿಕೊಳ್ಳುವ ಆನಂದ ಮಾಲಗತ್ತಿ ಅವರ ಮುಖಕ್ಕೆ ಶಶಿ ಕುಮಾರ್, ರಾಕೇಶ್ ಮತ್ತು ನವೀನ್ ಮಸಿ ಬಳಿದರು. ಅಲ್ಲಿಗೆ, ಆನಂದ ನಾಮಿನೇಟ್ ಆಗಲೇಬೇಕಾಯಿತು.

ಕವಿತಾ ಅಂದುಕೊಂಡಿದ್ದೆಲ್ಲಾ ಉಲ್ಟಾ ಪಲ್ಟಾ
ಆಂಡ್ರ್ಯೂ ವಿಚಾರದಲ್ಲಿ ತಾವು ನಡೆದುಕೊಂಡ ರೀತಿ ಸರಿಯಾಗಿದೆ ಅಂತ ಕವಿತಾ ಭಾವಿಸಿದ್ದರು. ಆದ್ರೆ, ಅದೇ ಕವಿತಾ ಪಾಲಿಗೆ ಉಲ್ಟಾ ಹೊಡೆದಿದೆ. ಕವಿತಾ ವರ್ತನೆ ಬಗ್ಗೆ ಬೇಸರಗೊಂಡು ರಶ್ಮಿ, ನಯನ ಮತ್ತು ಮುರಳಿ ಮಸಿ ಬಳಿದರು.

ಜಯಶ್ರೀ ಕೂಡ ಟಾರ್ಗೆಟ್
ಕವಿತಾ-ಆಂಡ್ರ್ಯೂ ಕಿತ್ತಾಟದಲ್ಲಿ ಅನವಶ್ಯಕವಾಗಿ ಮೂಗು ತೂರಿಸಿದ ಜಯಶ್ರೀ ಕೂಡ ಟಾರ್ಗೆಟ್ ಆಗಿದ್ದಾರೆ. ಆಂಡ್ರ್ಯೂ ಮತ್ತು ನಯನ.. ಜಯಶ್ರೀ ಮುಖಕ್ಕೆ ಮಸಿ ಬಳಿದರು.

ಜಸ್ಟ್ ಮಿಸ್ ಆದವರು.!
ನವೀನ್ ಮುಖಕ್ಕೆ ಆನಂದ್, ಸೋನು ಮುಖಕ್ಕೆ ರಾಕೇಶ್, ನಯನ ಮುಖಕ್ಕೆ ಕವಿತಾ, ಶಶಿ ಮುಖಕ್ಕೆ ಆಂಡ್ರ್ಯೂ ಮಸಿ ಬಳಿದಿದ್ದರು. ನವೀನ್, ಸೋನು, ನಯನ, ಶಶಿಗೆ ತಲಾ ಒಬ್ಬರು ಮಾತ್ರ ಮಸಿ ಬಳಿದಿದ್ದರಿಂದ ನಾಮಿನೇಷನ್ ನಲ್ಲಿ ಜಸ್ಟ್ ಮಿಸ್ ಆದರು.

ಕ್ಯಾಪ್ಟನ್ ಗೆ ಅಧಿಕಾರ
ಸೇಫ್ ಆಗಿದ್ದವರ ಪೈಕಿ ಇಬ್ಬರನ್ನು ನಾಮಿನೇಟ್ ಮಾಡುವಂತೆ ಕ್ಯಾಪ್ಟನ್ ಅಕ್ಷತಾಗೆ 'ಬಿಗ್ ಬಾಸ್' ಸೂಚಿಸಿದರು. ಇದರ ಅನುಸಾರ ನವೀನ್ ಮತ್ತು ಸೋನು ಪಾಟೀಲ್ ರನ್ನ ಅಕ್ಷತಾ ನಾಮಿನೇಟ್ ಮಾಡಿದರು.

ಮುರಳಿಗೆ ಹೆಚ್ಚು ಹಾರ.!
ಯಾವುದೇ ವಿವಾದಗಳಿಗೆ ಸಿಲುಕದ, ಜಗಳಗಳಿಗೆ ಸಾಕ್ಷಿ ಆಗದ ಮುರಳಿಗೆ ಅತಿ ಹೆಚ್ಚು ಮಂದಿ ಹಾರ ಹಾಕಿದರು. ಸೋನು ಪಾಟೀಲ್, ನವೀನ್, ರಶ್ಮಿ ಮತ್ತು ಆಂಡ್ರ್ಯೂ.. ಮುರಳಿಗೆ ಮಾಲಾರ್ಪಣೆ ಮಾಡಿದರು.

ಹಾರ ಹಾಕಿಸಿಕೊಂಡವರು...
ಆನಂದ್ ಮತ್ತು ಶಶಿ ಕಡೆಯಿಂದ ಧನರಾಜ್, ಜಯಶ್ರೀ ಮತ್ತು ಮುರಳಿ ಕಡೆಯಿಂದ ರಶ್ಮಿ, ಧನರಾಜ್ ಕಡೆಯಿಂದ ಶಶಿ, ನಯನ ಕಡೆಯಿಂದ ಆಂಡ್ರ್ಯೂ, ಕವಿತಾ ಮತ್ತು ರಾಕೇಶ್ ಗೆ ಹಾರಗಳು ಲಭಿಸಿತು.

ಆಂಡ್ರ್ಯೂ ಸೇಫ್
ಇಲ್ಲಿಯವರೆಗೂ ಸುರಕ್ಷ ಕವಚ ಬಳಸದ ಆಂಡ್ರ್ಯೂ ಈ ವಾರ ಅದನ್ನ ಬಳಕೆ ಮಾಡಿ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ.

ಗಂಟು ಮೂಟೆ ಕಟ್ಟೋರು ಯಾರು.?
'ಬಿಗ್ ಬಾಸ್' ಮನೆಯಿಂದ ಔಟ್ ಆಗಲು ರಾಕೇಶ್, ಆನಂದ, ಕವಿತಾ, ಜಯಶ್ರೀ, ನವೀನ್ ಮತ್ತು ಸೋನು ಪಾಟೀಲ್ ನಾಮಿನೇಟ್ ಆಗಿದ್ದಾರೆ. ಇವರುಗಳ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











