ತಾಯಿಯ ಕ್ಷಮೆ ಕೇಳಿ ಭಾವುಕರಾದ ರಾಜು ತಾಳಿಕೋಟೆ
Recommended Video
'ಮನಸಾರೆ', 'ಪಂಚರಂಗಿ' ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ರಾಜು ತಾಳಿಕೋಟೆ ಹಾಸ್ಯ ನಟರಾಗಿ ಅಭಿನಯಿಸಿದ್ದಾರೆ. ಸಿನಿ ಪ್ರಿಯರನ್ನು ನಕ್ಕ-ನಲಿಸಿದ್ದಾರೆ. ಹಾಗೇ, ರಂಗಭೂಮಿಯಲ್ಲೂ ರಾಜು ತಾಳಿಕೋಟೆ ಹಾಸ್ಯ ಪಾತ್ರಗಳಲ್ಲಿ ಹೆಸರುವಾಸಿ. 'ಕಲಿಯುಗದ ಕುಡುಕ', 'ಕುಡುಕರ ಸಾಮ್ರಾಜ್ಯ' ನಾಟಕಗಳ ಮೂಲಕ ರಾಜು ತಾಳಿಕೋಟೆ ನಗುವಿನ ಇಂಜೆಕ್ಷನ್ ನೀಡಿದ್ದಾರೆ.
ಕಾಮಿಡಿ ಕಿಲಾಡಿ ಆಗಿರುವ ರಾಜು ತಾಳಿಕೋಟೆ 'ಬಿಗ್ ಬಾಸ್' ಮನೆಯಲ್ಲಿ ನಿನ್ನೆ ಕೊಂಚ ಭಾವುಕರಾಗಿದ್ದರು. ಅದಕ್ಕೆ ಕಾರಣ 'ಬಿಗ್ ಬಾಸ್' ನೀಡಿದ್ದ ಒಂದು ಟಾಸ್ಕ್. ಯಾರಿಗಾದರೂ ಕ್ಷಮೆ ಕೇಳುವ ಅವಕಾಶವನ್ನು ಸ್ಪರ್ಧಿಗಳಿಗೆಲ್ಲ 'ಬಿಗ್ ಬಾಸ್' ನೀಡಿದ್ದರು.
ಇದರ ಅನ್ವಯ ತಮ್ಮ ತಾಯಿಗೆ ಕ್ಷಮೆ ಕೇಳುತ್ತಾ ರಾಜು ತಾಳಿಕೋಟೆ ಭಾವುಕರಾದರು. ಸಿಟ್ಟಿನಲ್ಲಿ ಮಾಡಿದ ಒಂದು ಕೆಲಸ, ಆಡಿದ ಒಂದು ಮಾತು ರಾಜು ತಾಳಿಕೋಟೆಯನ್ನು ಈಗಲೂ ಚುಚ್ಚುತ್ತಿದೆ. ಅದೇನು ಅಂತ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

ಸಿಡುಕು ಸ್ವಭಾವದ ರಾಜು ತಾಳಿಕೋಟೆ
''ನಾನು ಸ್ವಲ್ಪ ಸಿಡುಕ. ಅಂದು ನನ್ನ ಅಕ್ಕನಿಗೆ ಒಂದು ವಾಚ್ ತಂದಿದ್ದರು. ಅದನ್ನ ನೋಡುತ್ತಿದ್ದಾಗ, ''ನೀನು ಅದನ್ನ ಹಾಳು ಮಾಡ್ತೀಯಾ'' ಅಂತ ಕಿತ್ತುಕೊಂಡರು. ಆಗ ಬಂದ ಕೋಪಕ್ಕೆ ವಾಚ್ ನ ಗೋಡೆಗೆ ಎಸೆದುಬಿಟ್ಟೆ. ಆ ವಾಚ್ ಒಡೆದು ಹೋಯ್ತು. ಇದನ್ನ ನೋಡಿದ ನನ್ನ ತಾಯಿಗೆ ಸಿಟ್ಟು ಬಂತು. ನನ್ನನ್ನ ಹೊಡೆಯಲು ಬಂದರು'' - ರಾಜು ತಾಳಿಕೋಟೆ, ನಟ

ಸಿಟ್ಟಿನಲ್ಲಿ ಆಡಿದ ಮಾತು
''ನನಗೆ ತುಂಬಾ ಸಿಟ್ಟು ಬಂದಿದ್ದರಿಂದ, ತಾಯಿಯ ಎರಡೂ ಕೈ ಹಿಡಿದು ನಿಲ್ಲಿಸಬಿಟ್ಟೆ. ಇದು ನನ್ನ ತಾಯಿಗೆ ಬೇಸರ ತಂತು. ''ಇನ್ನು ನೀನು ನನ್ನ ಮನೆಯಲ್ಲಿ ಇರಬಾರದು. ನಾನು ಸತ್ತರೂ, ನನ್ನ ಮಣ್ಣಿಗೆ ಬರಬಾರದು'' ಅಂತ ನನ್ನ ತಾಯಿ ನನಗೆ ಹೇಳಿದರು. ನಾನು ಕೂಡ ಸಿಟ್ಟಿನಲ್ಲಿ ''ನೀನು ಮಾತ್ರ ಅಲ್ಲ, ನಿಮ್ಮ ಮನೆಯಲ್ಲಿ ಯಾರು ಸತ್ತರೂ, ಮಣ್ಣಿಗೆ ಬರಲ್ಲ'' ಅಂತ ಹೇಳಿ ಹೊರಟೆ'' - ರಾಜು ತಾಳಿಕೋಟೆ, ನಟ

ಅಮ್ಮ ತೀರಿ ಹೋದರು
''ಮುಂದೊಂದು ದಿನ ನಾನು ಪ್ರಚಾರ ಕಾರ್ಯಕ್ಕೆ ಹೋಗಿದ್ದೆ. ಆಗ ಅಲ್ಲಿ ''ನಿಮ್ಮ ಮನೆಯಲ್ಲಿ ತುಂಬಾ ಜನ ಇದ್ದರು'' ಅಂತ ಒಬ್ಬರು ನನಗೆ ಹೇಳಿದರು. ಅದಕ್ಕೂ ಮುನ್ನವೇ ನಾಟಕದ ಕಂಪನಿಗೆ ''ಅಮ್ಮ ತೀರಿ ಹೋಗಿದ್ದಾರೆ'' ಅಂತ ಟೆಲಿಗ್ರಾಮ್ ಹಾಕಿದ್ದಾರೆ. ಆದರೆ ಅಂದು ನನ್ನ ಪಾತ್ರ ಇತ್ತು ಎಂಬ ಕಾರಣಕ್ಕೆ ನಾಟಕದ ಕಂಪನಿಯವರು ಟೆಲಿಗ್ರಾಮ್ ನ ಮುಚ್ಚಿಟ್ಟುಬಿಟ್ಟಿದ್ದರು'' - ರಾಜು ತಾಳಿಕೋಟೆ, ನಟ

ಅಮ್ಮನ ಮುಖ ನೋಡಲು ಆಗಲಿಲ್ಲ
''ಹಾಗೋ ಹೀಗೋ ನನಗೆ ಸುದ್ದಿ ಬಂತು. ನಾನು ಹೋಗಿ ನೋಡುವಷ್ಟರಲ್ಲಿ ಮಣ್ಣು ಮಾಡಲಾಗಿತ್ತು. ಕೊನೆಗೆ ನನ್ನ ತಾಯಿಯ ಮುಖವನ್ನು ನನಗೆ ನೋಡಲು ಆಗಲಿಲ್ಲ. ಆಡಿದ ಮಾತಿನಂತೆ ಕೊನೆಗೂ ನನ್ನ ತಾಯಿ ನನಗೆ ಮುಖ ತೋರಿಸಲೇ ಇಲ್ಲ. ಅಮ್ಮ ಕ್ಷಮಿಸಿ'' ಎನ್ನುತ್ತ ರಾಜು ತಾಳಿಕೋಟೆ ಭಾವುಕರಾದರು.


Click it and Unblock the Notifications











