ಕುಕ್ಕರ್ ಮುಚ್ಚಳ ಹಾಕಲು ಬಾರದ ವಾಸುಕಿ ವೈಭವ್ ಅಡುಗೆ ಮಾಡಿದಾಗ...
ಒಂದ್ಸಲಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ರೆ ಮುಗೀತು... 'ಬಿಗ್ ಬಾಸ್' ಹೇಳಿದ್ದನ್ನ ಎಲ್ಲಾ ಸ್ಪರ್ಧಿಗಳು ಪಾಲಿಸಲೇಬೇಕು. ಜೀವನದಲ್ಲಿ ಮಾಡದೇ ಇರುವ ಕೆಲಸಗಳನ್ನೂ 'ಒಂಟಿ ಮನೆ'ಯೊಳಗೆ ಮಾಡಲೇಬೇಕು.
ಮನೆಯಲ್ಲಿದ್ದಾಗ ಬಾತ್ ರೂಮ್ ತೊಳೆಯದೇ ಇದ್ದವರು.. 'ಬಿಗ್ ಬಾಸ್' ಮನೆಯಲ್ಲಿ ಒಮ್ಮೆಯಾದರೂ ಬಾತ್ ರೂಮ್ ಡ್ಯೂಟಿ ವಹಿಸಿಕೊಳ್ಳಲೇಬೇಕು. ಹಾಗೇ, ಜೀವನದಲ್ಲಿ ಅಡುಗೆ ಮನೆಯೊಳಗೆ ಕಾಲಿಡದೇ ಇದ್ದವರೂ 'ದೊಡ್ಮನೆ'ಯೊಳಗೆ ಅಡುಗೆ ಮಾಡಲೇಬೇಕು. ಇಂತಹ ಪರಿಸ್ಥಿತಿ ನಿನ್ನೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಗೆ ಉದ್ಭವ ಆಗಿತ್ತು.
ಅಡುಗೆ ಮಾಡಲು ಬರುವುದಿಲ್ಲ ಅಂತ ಇಷ್ಟು ದಿನ ಅಡುಗೆ ಮನೆಯೊಳಗೆ ಕಾಲಿಡದ ವಾಸುಕಿ ವೈಭವ್ ಗೆ 'ಬಿಗ್ ಬಾಸ್' ನಿನ್ನೆ ವಿಶೇಷ ಚಟುವಟಿಕೆ ನೀಡಿದ್ದರು. ಅದರ ಅನುಸಾರ, ಮಧ್ಯಾಹ್ನದ ಊಟವನ್ನ ವಾಸುಕಿ ವೈಭವ್ ಸಿದ್ಧ ಪಡಿಸಬೇಕಿತ್ತು. ಊಟದಲ್ಲಿ ಒಂದು ಸಿಹಿ ತಿನಿಸು ಇರಲೇಬೇಕಿತ್ತು. ಅಡುಗೆ ಮಾಡುವ ಕ್ರಮವನ್ನ ಚಂದನಾ ವಿವರಿಸಬೇಕು, ಆದರೆ ಸಹಾಯ ಮಾಡುವಂತಿರಲಿಲ್ಲ. ಹಾಗೇ, ವಾಸುಕಿ ವೈಭವ್ ಅಡುಗೆ ಮಾಡುವಾಗ.. ಕಿಚನ್ ಒಳಗೆ ಬೇರೆ ಯಾರಿಗೂ ಪ್ರವೇಶ ಇರಲಿಲ್ಲ.

ಅಡುಗೆ ಮಾಡಲು ಬರದ ವಾಸುಕಿ ವೈಭವ್.. ಕಿಚನ್ ಒಳಗೆ ಕಾಲಿಡುತ್ತಿದ್ದಂತೆಯೇ ಟೆನ್ಷನ್ ಮಾಡಿಕೊಂಡುಬಿಟ್ಟರು. ಗಡಿಬಿಡಿಯಲ್ಲಿ ಒಂದು ತಟ್ಟೆ ಮತ್ತು ಒಂದು ಮೊಟ್ಟೆ ಒಡೆದು ಹಾಕಿದರು. ಆಲುಗೆಡ್ಡೆಯನ್ನ ಕಟ್ ಮಾಡಲು ಒದ್ದಾಡಿದ ವಾಸುಕಿ ವೈಭವ್, ಕುಕ್ಕರ್ ಮುಚ್ಚಳ ಹಾಕಲು ಹರಸಾಹಸ ಪಟ್ಟರು.
ಇಷ್ಟೆಲ್ಲಾ ಸರ್ಕಸ್ ಆದರೂ, ಊಟದ ರುಚಿ ಮಾತ್ರ ಚೆನ್ನಾಗಿತ್ತಂತೆ. ಹಾಗಂತ ಪೃಥ್ವಿ ಮತ್ತು ಹರೀಶ್ ರಾಜ್ ಸರ್ಟಿಫಿಕೇಟ್ ಕೊಟ್ಟರು. ವಾಸುಕಿ ವೈಭವ್ ಜೊತೆಗೆ ಚಂದನಾಗೂ ಹರೀಶ್ ರಾಜ್ ಭೇಷ್ ಎಂದರು. ಒಟ್ನಲ್ಲಿ, 'ಬಿಗ್ ಬಾಸ್' ಮನೆಗೆ ಬಂದ ವಾಸುಕಿ ವೈಭವ್ ಅಡುಗೆ ಕಲಿತ ಹಾಗೆ ಆಯ್ತು.


Click it and Unblock the Notifications











