'ಕಲಾಕಾರ್' ಹರೀಶ್ ರಾಜ್ ಗೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದ ಸುದೀಪ್
'ಬಿಗ್ ಬಾಸ್' ಮನೆಯೊಳಗೆ ವಾರ ಪೂರ್ತಿ ಎಲ್ಲರ ಕಣ್ಣು ಕುಕ್ಕುವ ಹಾಗೆ ಪರ್ಫಾಮೆನ್ಸ್ ನೀಡುವವರಿಗೆ ಕಿಚ್ಚ ಸುದೀಪ್ 'ಮೆಚ್ಚುಗೆಯ ಚಪ್ಪಾಳೆ' ತಟ್ಟುತ್ತಾರೆ. ಅದರಂತೆ ಈ ವಾರ 'ಕಿಚ್ಚನ ಮೆಚ್ಚುಗೆಯ ಚಪ್ಪಾಳೆ' ಲಭಿಸಿದ್ದು 'ಕಲಾಕಾರ್' ಹರೀಶ್ ರಾಜ್ ಗೆ.
ಯಾರೊಂದಿಗೂ ಸಿಡುಕದೆ, ಕಿರಿಕಿರಿ ಸ್ವಭಾವ ಇಲ್ಲದೆ, ಎಲ್ಲರೊಂದಿಗೆ ಜಾಲಿ ಮಾಡುವ ವ್ಯಕ್ತಿತ್ವ ಹೊಂದಿರುವವರು ಹರೀಶ್ ರಾಜ್. ಇಲ್ಲಿಯವರೆಗೂ ಹರೀಶ್ ರಾಜ್ ಯಾರೊಂದಿಗೂ ಕಿತ್ತಾಡಿರಲಿಲ್ಲ. ಹಾಗೇ ಹರೀಶ್ ರಾಜ್ ಮೇಲೆ ಯಾರೂ ಕೋಪಿಸಿಕೊಂಡಿರಲಿಲ್ಲ.
ಇಂತಿಪ್ಪ ಹರೀಶ್ ರಾಜ್ ಗೆ ಈ ವಾರ 'ಬಿಗ್ ಬಾಸ್' ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದರು. ಮನೆಯ ಸಮೀಕರಣ ಬದಲಾಗುವ ಹಾಗೆ ಒಂದು ಪ್ರಾಂಕ್ ಮಾಡಬೇಕು ಅಂತ 'ಬಿಗ್ ಬಾಸ್' ಹರೀಶ್ ರಾಜ್ ಗೆ ಹೇಳಿ ಕಳುಹಿಸಿದ್ದರು. ಅದರಂತೆ ಸುಜಾತ ಮೇಲೆ ಕ್ಯಾತೆ ತೆಗೆದರು ಹರೀಶ್ ರಾಜ್. ಪರಿಣಾಮ ಅಡುಗೆ ಮನೆಯಿಂದ ಸುಜಾತ ಹೊರಗೆ ಬರುವಂತಾಯಿತು.

ಒಂದ್ಕಡೆ ಸೀಕ್ರೆಟ್ ಟಾಸ್ಕ್ ನಲ್ಲಿ ಹರೀಶ್ ರಾಜ್ ಸಫಲರಾದರು. ಇನ್ನೊಂದ್ಕಡೆ 'ಬಿಗ್ ಬಾಸ್' ನೀಡಿದ ಲಾಟೀನು ಹಿಡಿಯುವ ಚಟುವಟಿಕೆಯಲ್ಲೂ ಇಡೀ ರಾತ್ರಿ ವೀಕ್ಷಕರ ಗಮನ ಸೆಳೆಯುವಂತೆ ಹರೀಶ್ ರಾಜ್ ಪರ್ಫಾಮ್ ಮಾಡಿದರು. ಇದನ್ನೆಲ್ಲ ಸೂಕ್ಷ್ಮವಾಗಿ ವೀಕ್ಷಿಸಿದ ಸುದೀಪ್, ಹರೀಶ್ ರಾಜ್ ಗೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು.
''ಈ ವಾರ ಉತ್ತಮ ಪ್ರದರ್ಶನ ನೀಡಿದವರು ಹರೀಶ್ ರಾಜ್. ಲಾಟೀನ್ ಟಾಸ್ಕ್ ಮಾಡುವಾಗ ಇಡೀ ರಾತ್ರಿ ಕ್ಯಾಮರಾದೊಂದಿಗೆ ಮಾತನಾಡುತ್ತ, ಮಿಮಿಕ್ರಿ ಮಾಡಿಕೊಂಡು ಹರೀಶ್ ರಾಜ್ ಕಾಲ ಕಳೆದರು. ಹಾಗೇ, ಕಾಬೂಲ್ ನ ಜಾದುಗಾರ ಆಗಿಯೂ ಸೂಪರ್ ಆಗಿ ಪರ್ಫಾಮ್ ಮಾಡಿದರು. 'ಬಿಗ್ ಬಾಸ್' ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್ ನೂ ಚೆನ್ನಾಗಿ ನಿಭಾಯಿಸಿದರು'' ಎನ್ನುತ್ತಾ ಹರೀಶ್ ರಾಜ್ ಗೆ ಸುದೀಪ್ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು.
ಮುಂದಿನ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆಯಲು ಯಾರು ಏನು ಸ್ಟ್ರಾಟೆಜಿ ಮಾಡ್ತಾರೋ, ನೋಡಬೇಕು.


Click it and Unblock the Notifications











