ಕ್ರಿಕೆಟ್ ಮೈದಾನದಿಂದ ಬಿಗ್‌ಬಾಸ್ ಮನೆಗೆ ಬಂದ ರಾಜೀವ್
ಕ್ರಿಕೆಟ್ ಮೈದಾನದಿಂದ ಸಿಸಿಎಲ್ ಆಟಗಾರ ಮತ್ತು ನಟ ರಾಜೀವ್ ಅವರು ಬಿಗ್‌ಬಾಸ್ ಮನೆಗೆ ಬಂದಿದ್ದಾರೆ.
ಪೊಲೀಸ್ ಕುಟುಂಬದ ರಾಜೀವ್ ಅವರಿಗೆ ಪೊಲೀಸ್ ಉದ್ಯೋಗ ಅರಸಿ ಬಂದಿತ್ತು ಆದರೆ ಅದನ್ನು ತ್ಯಜಿಸಿದ ರಾಜೀವ್ ನಟರಾಗುವ ಕನಸು ಹೊತ್ತು ಬಣ್ಣ ಹಚ್ಚಿದರು. ಆದರೆ ನಟರಾಗಿ ಬಹಳ ಖ್ಯಾತಿ ಪಡೆಯಲಿಲ್ಲವಾದರೂ ಕ್ರಿಕೆಟರ್ ಆಗಿ ಚಿತ್ರೋದ್ಯಮದಲ್ಲಿ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಆಡುವ ರಾಜೀವ್ ಬಹಳ ಒಳ್ಳೆಯ ಕ್ರಿಕೆಟ್ ಆಟಗಾರ. ಸುದೀಪ್ ಅವರೊಟ್ಟಿಗೂ ಸಹ ರಾಜೀವ್ ಕ್ರಿಕೆಟ್ ಆಡಿದ್ದಾರೆ. ರಾಜೀವ್ ಆಟವನ್ನು ಸುದೀಪ್ ಬಹುವಾಗಿ ಮೆಚ್ಚಿಕೊಂಡಿದ್ದಾರೆ ಸಹ.
ಇದೀಗ ರಾಜೀವ್ ಅವರು ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿದ್ದು, ಇಲ್ಲಿ ಯಾವ ರೀತಿಯ ಆಟ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಜೀವ್ ಅವರೇ ಹೇಳಿರುವ ಪ್ರಕಾರ, ಅವರೊಬ್ಬ ಶಾಂತ ಸ್ವಭಾವದ ವ್ಯಕ್ತಿ ಆದರೆ ಅವರಿಗೆ ಸೂಕ್ತ ಸಮಯಕ್ಕೆ ಊಟ ಸಿಗಲಿಲ್ಲವೆಂದರೆ ಅವರಿಗೆ ಸಿಟ್ಟು ನೆತ್ತಿಗೆ ಹತ್ತಿ ತಾಳ್ಮೆಯ ಕಟ್ಟೆ ಒಮ್ಮೆಲೆ ಒಡೆದೇ ಹೋಗುತ್ತದಂತೆ.
'ಬಿಗ್‌ಬಾಸ್ ಮನೆಗೆ ಬರುವ ಮುನ್ನಾ ಯಾವುದೇ ನಿರ್ದಿಷ್ಟ ಗೇಮ್ ಪ್ಲ್ಯಾನ್ ಅಥವಾ ಆಲೋಚನೆಯನ್ನು ಹೊತ್ತುಕೊಂಡು ಬಂದಿಲ್ಲ. ಬಾಲ್ ಹೇಗೆ ಬರುತ್ತದೆಯೋ ಹಾಗೆ ಆಡುವುದು ಕ್ರಿಕೆಟಿಗನ ಕಾರ್ಯ, ಬಿಗ್‌ಬಾಸ್‌ನಲ್ಲಿಯೂ ಹಾಗೆಯೇ ಇರಲಿದ್ದೇನೆ. ಪರಿಸ್ಥಿತಿಗೆ ತಕ್ಕಂತೆ ವರ್ತಿಸಲಿದ್ದೇನೆ' ಎಂದರು ರಾಜೀವ್.


Click it and Unblock the Notifications











