ಬಿಗ್ ಬಾಸ್ ಕನ್ನಡ 9 ಸೀಸನ್‌ಗಳಲ್ಲಿ ಏನೇನಾಯ್ತು? ಸ್ಪೆಷಲ್ ಜರ್ನಿ ವೀಡಿಯೋ ರಿಲೀಸ್
ಬರ್ತಾ ಬರ್ತಾ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಅಬ್ಬರ ಹೆಚ್ಚಾಗುತ್ತಿದೆ. ರಿಯಾಲಿಟಿ ಶೋಗಳು ಅಂತ ಬಂದಾಗ ಹೆಚ್ಚು ಜನರನ್ನು ರಂಜಿಸುವ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಕೂಡ ಒಂದಾಗಿದೆ.
ಬಿಗ್ ಬಾಸ್ ಕಾರ್ಯಕ್ರಮ ರಂಜನೆಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಈ ಶೋ ಹಿಂದಿಯಲ್ಲಿ ಶುರುವಾದ ಬಳಿಕ, ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ಶುರುವಾಯ್ತು. ಆದರೆ ಕನ್ನಡದಲ್ಲಿ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿದೆ.
ಎಲ್ಲಾ ಭಾಷೆಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ತನ್ನದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದೆ. ಆಯಾ ಭಾಷೆಗಳಲ್ಲಿ ಪ್ರತಿ ಸೀಸನ್‌ಗೂ ವಿವಿಧ ಕ್ಷೇತ್ರಗಳ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

ಬಹಳ ಸದ್ದು ಮಾಡುವ ಶೋ
ಕಿರುತೆರೆಯ ಅತಿ ದೊಡ್ಡ ಶೋ. ಒಂದಲ್ಲೊಂದು ವಿವಾದಗಳಿಂದ ಸದಾ ಸದ್ದು ಮಾಡುವ ರಿಯಾಲಿಟಿ ಶೋ ಅಂದ್ರೆ ಅದು 'ಬಿಗ್ ಬಾಸ್'. ಪ್ರತಿ ಆವೃತ್ತಿಯಲ್ಲಿ ಒಂದಲ್ಲಾ ಒಂದು ವಿಶಿಷ್ಟ ಕಾನ್ಸೆಪ್ಟ್‌ಗಳನ್ನು ಹೊತ್ತು ತರುತ್ತದೆ. ಒಂದಾದ ಬಳಿಕ ಒಂದು ಸೀಸನ್ ಭಿನ್ನವಾಗಿ ಇದ್ದೇ ಇರುತ್ತದೆ. ಹಲವು ಹೊಸ ಹೊಸ ರೂಪು-ರೇಷೆ ಜೊತೆಗೆ ಈ ಕಾರ್ಯಕ್ರಮ ಮೂಡಿ ಬರುತ್ತಲೇ ಇದೆ. ದುಃಖ, ಕೋಪ, ತಮಾಷೆ, ಕಷ್ಟ, ಸಂಕಷ್ಟ, ಸಂತೋಷ, ಎಲ್ಲಾ ಬಗೆಯ ಭಾವನೆಗಳನ್ನು ಇಲ್ಲಿ ಬಿತ್ತರಿಸಲಾಗುತ್ತದೆ. ಮೊದಲ ಸೀಸನ್‌ನಿಂದಲೂ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ.
ಇದುವರೆಗೂ 9 ಸೀಸನ್‌ಗಳು ಪ್ರಸಾರ
ಬಿಗ್ ಬಾಸ್ ಸೀಸನ್ 10 ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಬಹಳ ಕುತೂಹಲದಿಂದ ವೀಕ್ಷಕರು ಬಿಗ್ ಬಾಸ್ ಸೀಸನ್ 10ಅನ್ನು ನೋಡಲು ಕಾಯುತ್ತಿದ್ದಾರೆ. ಈ ಬಾರಿಯ ಸೀಸನ್ ಬಹಳ ವಿಶೇಷವಾಗಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಬಿಗ್ ಬಾಸ್ ಕನ್ನಡದಲ್ಲಿ ಒಟ್ಟು 9 ಸೀಸನ್‌ಗಳು ಪ್ರಸಾರ ಕಂಡಿದ್ದು, ಈ ಬಗ್ಗೆ ಕಲರ್ಸ್ ಕನ್ನಡ ವೀಡಿಯೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಕಳೆದ 9 ಸೀಸನ್ ಗಳು ಹೇಗೆ ಪ್ರಸಾರ ಕಂಡಿತು ಎಂದು ತೋರಿಸಿದೆ. ನೀವು ಕೂಡ ಈ ವೀಡಿಯೋ ನೋಡಿ ಒಮ್ಮೆ ಬಿಗ್ ಬಾಸ್ ಜರ್ನಿಯನ್ನು ಮೆಲುಕು ಹಾಕಿ.

ಬಿಗ್ ಬಾಸ್ ಜರ್ನಿ
ಇಂಗ್ಲೀಷ್‌ನ ಬಿಗ್ ಬ್ರದರ್ ಶೋನಿಂದ ಪ್ರೇರಣೆಗೊಂಡು ಬಂದ ಬಿಗ್‌ಬಾಸ್ ಶೋ ಹಿಂದಿಯಲ್ಲಿ ಸದ್ದು ಮಾಡಿತು. ನಂತರ ದಕ್ಷಿಣ ಭಾರತದಲ್ಲೂ ಕ್ರೇಜ್ ಶುರುವಾಯಿತು. ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ 2013ರಲ್ಲಿ ಈಟಿವಿ ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಪ್ರಸಾರವಾಯಿತು. 15 ರಿಂದ 20 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿ ಸರಿ ಸುಮಾರು 100 ದಿನಗಳ ನಂತರ ಜನರ ವೋಟಿಂಗ್ ಆಧಾರದಲ್ಲಿ ಒಬ್ಬರು ವಿಜೇತರಾಗಿ ಹೊರ ಹೊಮ್ಮಿದ್ದರು. ನಂತರ ಸೀಸನ್ 2 ಸುವರ್ಣ ವಾಹಿನಿಯಲ್ಲಿ 2014ರಲ್ಲಿ ಪ್ರಸಾರಗೊಂಡಿತು. ಸೀಸನ್ 3,4,5,6,7,8 ಮತ್ತು 9 ಕಲರ್ಸ್ ವಾಹಿನಿಯಲ್ಲಿ ಬಿತ್ತರಗೊಂಡಿತು. 2018ರಲ್ಲಿ ಆರನೇ ಸೀಸನ್ ಹಾಗೂ ಬಿಗ್ ಬಾಸ್ ಏಳನೇ ಸೀಸನ್ 2020 ಫೆಬ್ರವರಿಯಲ್ಲಿ ಮುಗಿಯಿತು.
ಹೊಸ ಮನೆಯಲ್ಲಿ ಸ್ಪೆಷಲ್ ಸೀಸನ್
2021ರಲ್ಲಿ ಬಿಗ್ ಬಾಸ್ ಸೀಸನ್ 8 ಹಾಗೂ ಮಿನಿ ಸೀಸನ್ ಕೂಡ ಪ್ರಸಾರ ಕಂಡಿತು. 2022ರಲ್ಲಿ ಒಟಿಟಿ ಸ್ಪೆಷಲ್ ಜೊತೆಗೆ ಸೀಸನ್ 9 ಪ್ರಸಾರವಾಯ್ತು. ಇದೀಗ 2023 ರಲ್ಲಿ ಬಿಗ್ ಬಾಸ್ ಸೀಸನ್ 10 ಪ್ರಸಾರ ಕಾಣಲು ಸಜ್ಜಾಗಿದೆ. ಇಷ್ಟು ಕಾಲ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇದ್ದ ಬಿಗ್ ಬಾಸ್ ಮನೆ ಈಗ ಬೆಂಗಳೂರಿನ ಹೊರವಲಯದ ದೊಡ್ಡ ಆಲದ ಮರದ ಸಮೀಪ ನಿರ್ಮಾಣವಾಗಿದೆ. ಬಿಗ್ ಬಾಸ್ ಅಭಿಮಾನಿಗಳು ಸೀಸನ್ 10ಅನ್ನು ನೋಡಲು ಬಹಳ ಕಾತುರರಾಗಿದ್ದಾರೆ.


Click it and Unblock the Notifications











