"ಸ್ನಾನ ಮಾಡುವಾಗ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು.. ಸರ್ಜರಿ ಬಳಿಕ ಖುಷಿಯಾಯ್ತು"-ನೀತು
ಬಿಗ್‌ಬಾಸ್-10 ಖ್ಯಾತಿಯ ತೃತೀಯ ಲಿಂಗಿ ನೀತು ವನಜಾಕ್ಷಿ ತಮ್ಮದೇ ಟ್ಯಾಟೂ ಸ್ಟುಡಿಯೋ ಕೂಡ ಹೊಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ತಮ್ಮ ಆಟದಿಂದ ಗಮನ ಸೆಳೆದ ನೀತು 49 ದಿನಗಳ ಬಳಿಕ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಮೂಲತಃ ಗದಗ ಜಿಲ್ಲೆಯವರಾದ ನೀತು ಅವರ ಮೂಲ ಹೆಸರು ಮಂಜುನಾಥ್.
ಸಂದರ್ಶನವೊಂದಲ್ಲಿ ನೀತು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಂಜುನಾಥ್ ಆಗಿದ್ದ ನಾನು ನೀನು ಆಗಿ ಬದಲಾಗಿದ್ದು ಯಾಕೆ ಎನ್ನುವುದನ್ನು ವಿವರಿಸಿದ್ದಾರೆ. 8ನೇ ತರಗತಿಯಲ್ಲಿ ಇದ್ದಾಗ ತಮ್ಮ ದೇಹದಲ್ಲಾದ ಒಂದಷ್ಟು ಬದಲಾವಣೆಗಳನ್ನು ಬಗ್ಗೆ ತಿಳಿದು ಹೆಣ್ಣಾಗಿ ಬದಲಾಗುವ ನಿರ್ಣಯ ಕೈಗೊಂಡಿದ್ದರು. ಇದಕ್ಕೆ ಅಮ್ಮನ ಬೆಂಬಲವೂ ಸಿಕ್ಕಿತ್ತು ಎಂದಿದ್ದಾರೆ.

ನನ್ನಲ್ಲಾದ ಬದಲಾವಣೆಗಳನ್ನು ನೋಡಿ ನನಗೆ ಚಿಂತೆ ಕಾಡಲು ಶುರುವಾಗಿತ್ತು. ಎಷ್ಟು ದಿನ ಮುಖವಾಡದ ಬದುಕು ಎನಿಸುತ್ತಿತ್ತು. ನಾನು ಒಂದು ಹೆಣ್ಣಾಗಿ ಜೀವನ ಮಾಡಬೇಕು ಎನಿಸುತ್ತಿತ್ತು. ಈ ರೀತಿ ಪರಿವರ್ತನೆ ಆಗಬೇಕು ಅಂದರೆ ಮಾನಸಿಕವಾಗಿ ಬಹಳ ಧೈರ್ಯ ಇರಬೇಕು. ನಾನೇ ಬದಲಾಗಬೇಕು ಎಂದು ಬಹಳ ತುಡಿತ ಶುರುವಾಗಿತ್ತು. ಹಾಗಾಗಿ ನಾನೇ ಹುಡುಕಾಟ ಶುರು ಮಾಡಿದೆ.
ಹಾರ್ಮೋನ್ ಬದಲಾವಣೆ ಬಳಿಕ ಶಸ್ತ್ರಚಿಕಿತ್ಸೆ ಮುಂದಾಗಿದ್ದೆ. ಇಂತಹ ಶಸ್ತ್ರಚಿಕಿತ್ಸೆಗೆ 10ರಿಂದ 12 ಲಕ್ಷ ಖರ್ಚಾಗುತ್ತದೆ. ಬಳಿಕ ಅದಕ್ಕೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಹಣ ಬೇಕು. ಶಸ್ತ್ರಚಿಕಿತ್ಸೆ ಆಗುತ್ತಿದ್ದಂತೆ ದಪ್ಪ ಆಗಿ ಬಿಡ್ತೀವಿ. ಅದಕ್ಕೆ ಮತ್ತೆ ಚಿಕಿತ್ಸೆ ಪಡೆಯಬೇಕು. ಹೀಗೆ ಸಾಕಷ್ಟು ಹಣ ಖರ್ಚಾಗುತ್ತದೆ. ನನಗೆ ದೆಹಲಿಯಲ್ಲಿ ಶಸ್ತ್ರ ಚಿಕಿತ್ಸೆ ಆಯಿತು ಎಂದು ನೀತು ವನಜಾಕ್ಷಿ ವಿವರಿಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಬಹಳ ನೋವು ಅನುಭವಿಸಿದೆ. 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಸಿಗ್ಮಾಯ್ಡ್ ಸರ್ಜರಿ ಎಂದು ಅದಕ್ಕೆ ಹೇಳುತ್ತಾರೆ. ಬಹಳ ನೋವಾದರೂ ನಾನು ಅಂದುಕೊಂಡಿದ್ದು ಸಾಧಿಸಿದೆ ಎನ್ನುವ ಸಂತೋಷ ಇರುತ್ತದೆ. ಇದೊಂದು ರೀತಿ ಮರುಹುಟ್ಟು. ಎಲ್ಲಾ ಸರ್ಜರಿ ಸಕ್ಸಸ್ ಆಗಲ್ಲ. ನಾನು ದೆಹಲಿಗೆ ಹೋದಾಗ ಒಂದೆರಡು ಸರ್ಜರಿ ಫೇಲ್ ಆಗಿದ್ದು ಗೊತ್ತಾಯಿತು.
"ಈಗ ತಂತ್ರಜ್ಞಾನ ಬಹಳ ಮುಂದುವರೆದಿದೆ. ಪುರುಷರು ಮಹಿಳೆಯಾಗಿ ಸಂಪೂರ್ಣವಾಗಿ ಬದಲಾಗಬಹುದು. ಅಂತಹ ಚಿಕಿತ್ಸೆ ಇದೆ. ಗರ್ಭಕೋಶ ಮಾತ್ರ ಇರಲ್ಲ. ಇನ್ನುಳಿದಂತೆ ಸಂಪೂರ್ಣ ಒಂದು ಹೆಣ್ಣಿನ ರೀತಿಯಲ್ಲಿ ನಾವು ಜೀವನ ಸಾಗಿಸಬಹುದು. ಆ ರೀತಿ ಪರಿವರ್ತನೆ ಆಗಬಹುದು" ಎಂದು ನೀತು ವನಜಾಕ್ಷಿ ಹೇಳಿದ್ದಾರೆ.
ಸರ್ಜರಿ ಪ್ರಕ್ರಿಯೆ ಹೇಗೆ ಇತ್ತು?
"ಸರ್ಜರಿ ಅಂದರೆ ಬಹಳ ರಿಸ್ಕ್. ಬೆಂಗಳೂರಿನಿಂದ ದೆಹಲಿಗೆ ಸರ್ಜರಿ ಮಾಡಿಸಿಕೊಳ್ಳಲು ನಾನು ಒಬ್ಬಳೇ ಹೋಗಿದ್ದೆ. ಅಮ್ಮನಿಗೆ ಹೇಳಿ ಹೋಗಿದ್ದೆ. ದೆಹಲಿಗೆ ಹೋದ ಕೂಡಲೇ ವೈದ್ಯರ ಜೊತೆ ಚರ್ಚೆ ನಡೆಯುತ್ತದೆ. ಯಾವ ರೀತಿಯ ಸರ್ಜರಿ ಎಂದು ಸಮಾಲೋಚನೆ ನಡೆಯುತ್ತದೆ. ಅರ್ಜಿ ಎಲ್ಲಾ ಭರ್ತಿ ಮಾಡಬೇಕು. ಸರ್ಜರಿ ವೇಳೆ ಪ್ರಾಣಾಪಾಯ ಆದರೂ ಆಸ್ಪತ್ರೆಯವರು ಜವಾಬ್ದಾರರಲ್ಲ ಎಂದು ಬರೆದುಕೊಡಬೇಕು ಬಳಿಕ ಸರ್ಜರಿ ಪ್ರಕ್ರಿಯೆ ಆರಂಭವಾಗುತ್ತದೆ" ಎಂದು ವಿವರಿಸಿದ್ದಾರೆ.
ಬಳಿಕ ಬಹಳ ನೋವು ಅನುಭವಿಸಿದೆ
"ಅರ್ಜಿ ಭರ್ತಿ ಮಾಡುವಾಗ ನನಗೆ ದುಃಖ ಅಲ್ಲ ಸಂತೋಷ ಆಗುತ್ತಿತ್ತು. ಸ್ನಾನ ಮಾಡುವಾಗ ನನ್ನ ಖಾಸಗಿ ಅಂಗ ನೋಡಲು ನೋಡಲು ಆಗುತ್ತಿರಲಿಲ್ಲ. ಯಾವಾಗ ಹೆಣ್ಣಾಗಿ ಬದಲಾಗುತ್ತೀನೋ ಎನಿಸುತ್ತಿತ್ತು. ಹಾಗಾಗಿ ಖುಷಿಯಿಂದ ಅರ್ಜಿ ಭರ್ತಿ ಮಾಡಿದೆ. ಆಸ್ಪತ್ರೆಯಲ್ಲಿ ಮಲಗಿದ್ದಾಗ ಖುಷಿ ಆಗುತ್ತಿತ್ತು. ಅನೇಸ್ತೆಷಿಯಾ ಕೊಟ್ಟು ಸರ್ಜರಿ ಮಾಡುತ್ತಾರೆ. ಅನೇಸ್ತೆಷಿಯಾ ಕಮ್ಮಿ ಆಗುತ್ತಿದ್ದಂತೆ ನೋವು ಜಾಸ್ತಿ ಆಗುತ್ತಾ ಹೋಗುತ್ತದೆ. ಡಾಕ್ಟರ್ ಬಂದು ಆಪರೇಷನ್ ಆದ ಭಾಗಕ್ಕೆ ಡ್ರೆಸ್ಸಿಂಗ್ ಮಾಡುವಾಗ ಮತ್ತಷ್ಟು ನೋವಾಗುತ್ತದೆ" ಎಂದು ನೀತು ಹೇಳಿದ್ದಾರೆ.
ನೀತು ಲವ್ ಸ್ಟೋರಿ
"ನನಗೂ ಕಾಲೇಜ್ ಸಮಯದಲ್ಲಿ ಲವ್ವಾಗಿತ್ತು. ಆದರೆ ಅದನ್ನು ಅವರಿಗೆ ಹೇಳಿರಲಿಲ್ಲ. ನನ್ನ ಬಗ್ಗೆ ನನಗೆ ಗೊತ್ತಿದ್ದರಿಂದ ಅದನ್ನು ಮುಂದುವರೆಸಲಿಲ್ಲ ಎಂದು ನೀತು ಹೇಳಿಕೊಂಡಿದ್ದಾರೆ. ನೀತು 2019ರಲ್ಲಿ ಸೂಪರ್ ಕ್ವೀನ್ ಮಿಸ್ ಟ್ರಾನ್ಸ್‌ಕ್ವೀನ್ ಪಟ್ಟವನ್ನೂ ಪಡೆದಿದ್ದರು. 2020ರಲ್ಲಿ ಮಿಸ್ ಇಂಟರ್‌ನ್ಯಾಶನಲ್ ಕ್ವೀನ್ ಕಿರೀಟ ಮುಡಿಗೇರಿಸಿಕೊಂಡಿದ್ದರು.


Click it and Unblock the Notifications











