Bigg Boss: ಸುದೀಪ್ ಸರ್ ನೀವು ಹೇಳಿದ್ದೇನು? ಈಗ ಆಗ್ತಿರೋದೇನು? ಸಂಗೀತಾ ಸಹೋದರ ಬೇಸರ
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ತಿಕ್ಕಾಟ ತಾರಕ್ಕೇರುತ್ತಲೇ ಇದೆ. ಈ ವಾರ ಸ್ಪರ್ಧಿಗಳನ್ನು ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ಆದರೆ ಟಾಸ್ಕ್ ವೇಲೆ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ.
ದಿಢೀರನೇ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ. ಟಾಸ್ಕ್ ವೇಳೆ ಸೋಪು ನೊರೆಯ ನೀರನ್ನು ಇಬ್ಬರ ಮುಖಕ್ಕೆ ಎರಚಿದ್ದರಿಂದ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗ್ತಿದೆ. ಚೇರ್ ಮೇಲೆ ಕೂರಿಸಿ ನೀರು ಎರಚಿದ ವೇಳೆ ಸಂಗೀತಾ, ಪ್ರತಾಪ್ ಮೂಗು, ಕಣ್ಣು ಹಾಗೂ ಮೂಗು, ಬಾಯಿಗೆ ನೀರು ಬಿದ್ದು ನೋವಿನಿಂದ ಒದ್ದಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.

ಸದ್ಯ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಸಂಗೀತಾ ಶೃಂಗೇರಿ ಸಹೋದರ ಸಂತೋಷ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಸುದೀಪ್ ಹಾಗೂ ಕಲರ್ಸ್ ಕನ್ನಡ ಕುರಿತು ಬೇಸರಗೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು ಅದರ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ.
"ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ. ಏನು ಆಗಲ್ಲ ಅಂತ. ಆದರೆ ಈಗ ನೋಡಿದ್ರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಅಂತ ಕಾಣಲ್ಲ. ಕೇವಲ ಹಿಂಸೆಯೇ ಕಾಣ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಕಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ" ಎಂದು ಪ್ರಶ್ನಿಸಿದ್ದಾರೆ.
"ಕಲರ್ಸ್ ಕನ್ನಡ.. ನಾವ್ ಸುದೀಪ್ ಸರ್ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.
ಬಿಗ್‌ಬಾಸ್ ಕನ್ನಡ ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್ ಬಹಳ ರೋಚಕವಾಗಿ ಮೂಡಿ ಬರುತ್ತಿದೆ. ಅದಕ್ಕೆ ಕಾರಣ ಕೊಡುತ್ತಿರುವ ಟಾಸ್ಕ್‌ಗಳು. ಇನ್ನು ಸ್ಪರ್ಧಿಗಳು ಕೂಡ ಈ ಬಾರಿ ಬಹಳ ಅಗ್ರೆಸ್ಸಿವ್ ಆಗಿ ಆಡಲು ಆರಂಭಿಸಿದ್ದಾರೆ. ವಿನಯ್, ಕಾರ್ತಿಕ್, ತನಿಷಾ ಕೊಂಚ ಹೆಚ್ಚೇ ಅಗ್ರೆಸ್ಸಿವ್ ಆಗುತ್ತಿದ್ದಾರೆ. ಇದು ಇತರ ಮನೆಯಲ್ಲಿ ತಿಕ್ಕಾಟಕ್ಕೆ ಕಾರಣವಾಗಿದೆ.

ಈ ವಾರ ಕೊಟ್ಟಿರುವ ರಾಕ್ಷಕರು ಹಾಗೂ ಗಂಧರ್ವರ ನಡುವಿನ ಟಾಸ್ಕ್‌ಗಳಂತೂ ಮಿತಿ ಮೀರಿದೆ. ಟಾಸ್ಕ್ ವೇಳೆ ಒಬ್ಬರನ್ನು ಒಬ್ಬರು ಕೆಣಕುವುದು. ಗೆಲ್ಲಬೇಕು ಎನ್ನುವ ಹುಮ್ಮಸ್ಸಿನಂತೆ ಫಿಸಿಕಲ್ ಅಟ್ಯಾಕ್ ಹೆಚ್ಚಾಗುತ್ತಿದೆ. ಮೊದಲಿಗೆ ರಾಕ್ಷಸರಾಗಿದ್ದ ಸಂಗೀತಾ ಮತ್ತವರ ತಂಡ, ಬಳಿಕ ಗಂಧರ್ವರಾದರು. ಗಂಧರ್ವರಾಗಿದ್ದಾಗ ಕಿರುಕುಳ ಅಪಮಾನ ಎದುರಿಸಿದ್ದ ವರ್ತೂರು ಸಂತೋಷ್ ಮತ್ತವರ ತಂಡ ರಾಕ್ಷಸರಾದ ಬಳಿಕ ಬಹಳ ಆವೇಶದಿಂದ ಗಂಧರ್ವರ ತಂಡದ ಮೇಲೆ ದಾಳಿ ಮಾಡಿದ್ದಾರೆ. ಇದು ಎಲ್ಲೆ ಮೀರಲು ಕಾರಣವಾಗಿದೆ.
ಒಂದು ಹಂತದಲ್ಲಿ ಸಂಗೀತಾ "ನನ್ನಿಂದ ಇನ್ನು ಸಾಧ್ಯವಿಲ್ಲ" ಎಂದು ಸುಮ್ಮನಾಗಿಬಿಟ್ಟರು. ಬಿಗ್‌ಬಾಸ್ ಮನೆಯಲ್ಲಿ ಇಡೀ ವಾರ ಏನೇ ನಡೆದರೂ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅದನ್ನೆಲ್ಲಾ ಚರ್ಚಿಸಿ, ಯಾರದ್ದು ತಪ್ಪು? ಯಾರದ್ದು ಸರಿ? ಎಂದು ಹೇಳುತ್ತಾರೆ. ತಪ್ಪು ಮಾಡಿದವರಿಗೆ ಛೀಮಾರಿ, ಮೆಚ್ಚುಗೆ ಪಡೆದವರಿಗೆ ಚಪ್ಪಾಳೆ ಸಿಗುತ್ತದೆ. ಈ ವೀಕೆಂಡ್‌ನಲ್ಲೂ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ 24 ಗಂಟೆ ಉಚಿತವಾಗಿ ಸ್ಟ್ರೀಮಿಂಗ್ ಆಗುತ್ತಿದೆ.
ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಾಪಾಸ್ ಬಿಗ್ ಬಾಸ್‌ಗೆ ಮರಳಿದ್ದಾರೆ. ಸೇಫ್ಟಿ ಗ್ಲಾಸ್ ತೊಟ್ಟು ಮನೆಯೊಳಗೆ ಬರುತ್ತಿದ್ದಂತೆ ಸ್ಪರ್ಧಿಗಳು ಭಾವುಕರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳಿಗೆ ಕೆಮಿಕಲ್ ಬಳಸುವುದಕ್ಕೆ ಬಿಟ್ಟಿದ್ದು ಏಕೆ? ಅಂತ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದ್ದಾರೆ.
ಅದೇ ಇನ್ನೊಂದು ಕಡೆ ಬಿಗ್ ಬಾಸ್‌ನಲ್ಲಿ ಅಸಭ್ಯ ಪದಗಳ ಬಳಕೆ ಹಾಗೂ ಚಪ್ಪಲಿ ಎಸೆಯುವಂತಹ ಸನ್ನಿವೇಶಗಳ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಹೀಗಾಗಿ ಬಿಗ್ ಬಾಸ್ ವೀಕ್ಷಕರು ಹಾಗೂ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗುತ್ತಿದೆ.


Click it and Unblock the Notifications











