ಎರಡು ಸಲಿ ಸೇಫ್ ಆದವರೂ ಮೂರನೇ ಬಾರಿ ದೊಡ್ಮನೆಯಿಂದ ಹೊರ ಬರಬೇಕಾಯಿತು; ಭಾಗ್ಯಶ್ರೀಗೆ ಕೈ ಹಿಡಿಯದ 'ಭಾಗ್ಯ'
ಬಿಗ್‌ಬಾಸ್ ಕನ್ನಡ ಸೀಸನ್ 10 ರ ಆರನೇ ವಾರದ ಎಲಿಮಿನೇಷನ್‌ನಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಹೋಗಿದ್ದಾರೆ. ಈಗಾಗಲೇ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದರು. ಅವರ ಜೊತೆಗೆ ಇಬ್ಬರು ಸೇರಿಕೊಂಡಿದ್ದಾರೆ. ಎರಡು ವಾರ ಅದೃಷ್ಟದಿಂದ ಎಲಿಮಿನೇಷನ್ ಆಗದೆ ಉಳಿದಿದ್ದ ಇಬ್ಬರೂ ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಕಿಚ್ಚನ ಪಂಚಾಯಿತಿಯ ಆರಂಭದಲ್ಲೇ ಈ ವಾರ ಡಬಲ್ ಎಲಿಮಿನೇಷನ್ ಎಂಬುದನ್ನು ಸುದೀಪ್ ತಿಳಿಸಿದ್ದರು. ಹೀಗಾಗಿ ಈ ಬಾರಿ ಇಬ್ಬರು ಮನೆ ಬಿಟ್ಟು ಹೋಗಲಿದ್ದಾರೆ ಎಂಬುದು ತಿಳಿದಿತ್ತು. ದಸರಾ ಹಬ್ಬ ಮತ್ತು ವರ್ತೂರ್ ಸಂತೋಷ್ ಕೃಪೆಯಿಂದಾಗಿ ಒಮ್ಮೆ ಭಾಗ್ಯಶ್ರೀ ಮತ್ತು ಒಮ್ಮೆ ಇಶಾನಿ ಎಲಿಮಿನೇಷನ್‌ನಿಂದ ತಪ್ಪಿಸಿಕೊಂಡು ಮನೆಯಲ್ಲಿಯೇ ಉಳಿಸಿದ್ದರು.

ಮತ್ತೆ ಕೈ ಹಿಡಿಯದ ಅದೃಷ್ಟ, ಮನೆಯಿಂದ ಹೊರ ಬಂದ ಭಾಗ್ಯಶ್ರೀ
ಬಿಗ್‌ಬಾಸ್ ಕನ್ನಡ 10ರಲ್ಲಿ ಕಿರುತೆರೆ ನಟಿ ಭಾಗ್ಯಶ್ರೀ ಅವರ ಪಯಣ ಭಾನುವಾರ ಕೊನೆಗೊಂಡಿದೆ. ಸೂಪರ್ ಸಂಡೆ ವಿತ್ ಸುದೀಪ ಎಪಿಸೋಡ್‌ನಲ್ಲಿ ಭಾಗ್ಯಶ್ರೀ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಬಗ್ಗೆ ಘೋಷಿಸಲಾಗಿದೆ. ಹೀಗಾಗಿ ಎರಡು ಬಾರಿ ಎಲಿಮಿನೇಷನ್‌ನಿಂದ ತಪ್ಪಿಸಿಕೊಂಡಿದ್ದ ಭಾಗ್ಯಶ್ರೀ ಕೊನೆಗೂ ಮನೆ ಬಿಟ್ಟು ಹೊರ ಬಂದಿದ್ದಾರೆ.
ಶನಿವಾರದ ಇಶಾನಿ ಮನೆಯಿಂದ ಹೊರಬಂದಿದ್ದರು. ಹೀಗಾಗಿ ಈ ಬಾರಿ ಇಬ್ಬರು ಮನೆಯೊಂದ ಆಚೆ ಬಂದಿದ್ದಾರೆ. ಇನ್ನು, ನಟಿ ಭಾಗ್ಯಶ್ರೀ ದಸರಾ ಹಬ್ಬದ ಸಂದರ್ಭದಲ್ಲಿಯೇ ದೊಡ್ಮನೆಯಿಂದ ಹೊರಬರಬೇಕಾಗಿತ್ತು. ಆದರೆ, ಹ್ಬಬದ ಸಂದರ್ಭ ಎಂದು ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಬಳಿಕ ವರ್ತೂರ್ ಸಂತೋಷ್ ಅವರ ಡ್ರಾಮಾದಿಂದಾಗಿ, ಡ್ರೋನ್ ಪ್ರತಾಪ್ ಅವರಿಂದಾಗಿಯೂ ಮತ್ತೆ ಉಳಿದುಕೊಂಡಿದ್ದರು. ಆದರೆ, ಈ ಬಾರಿ ಅವರನ್ನು ಯಾವುದೇ 'ಭಾಗ್ಯ' ಕೈ ಹಿಡಿದಿಲ್ಲ.
ಮಾತು ಮಾತಿಗೂ ಕಣ್ಣೀರು ಸುರಿಸುತ್ತಿದ್ದ ಭಾಗ್ಯಶ್ರೀ
ನಟಿ ಭಾಗ್ಯಶ್ರೀ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಟಾಸ್ಕ್‌ಗಳಲ್ಲಿ ಅಷ್ಟೊಂದು ಉತ್ಸಾಹದಿಂದ ಭಾಗವಹಿಸುತ್ತಿರಲಿಲ್ಲ. ಇದಕ್ಕೆ ಅವರ ವಯಸ್ಸಿನ ಕಾರಣವೂ ಇರಬಹುದು. ಜೊತೆಗೆ ಮಾತು ಮಾತಿಗೂ ಕಣ್ಣೀರು ಸುರಿಸುವ ಅವರ ಸ್ವಭಾವದಿಂದ ಅಳುಮುಂಜಿ ಎಂದೇ ಬಿಂಬಿತರಾಗಿದ್ದರು. ಇದೇ ಕಾರಣಕ್ಕೆ ಬಿಗ್ ಬಾಸ್ ವೀಕ್ಷಕರು ಅನೇಕ ಬಾರಿ ಮನೆಯಿಂದ ಹೊರ ಕಳಿಸಿ ಎಂದೂ ಒತ್ತಾಯಿಸಿದ್ದರು. ಆದರೂ ಎರಡು ವಾರ ಹೆಚ್ಚಾಗಿಯೇ ಮನೆಯಲ್ಲಿ ಉಳಿದುಕೊಂಡಿದ್ದರು.

ಎಲಿಮಿನೇಷನ್ ಬಳಿಕ ಚುರುಕಾಗಿದ್ದ ಭಾಗ್ಯಶ್ರೀ
ದಸರಾ ಹಬ್ಬದ ಸಂದರ್ಭದಲ್ಲಿ ಎಲಿಮಿನೇಷನ್‌ನಿಂದ ಬಜಾವ್ ಆಗಿದ್ದ ಭಾಗ್ಯಶ್ರೀ ಚುರುಕಾಗಿದ್ದರು. ಮನೆಯಲ್ಲಿ ಸಕತ್ ಆಗಿ ಎಲ್ಲರ ಜೊತೆಗೆ ಮಿಂಗಲ್ ಆಗುವುದು, ಟಾಸ್ಕ್‌ಗಳಲ್ಲಿ ತಮ್ಮ ಶಕ್ತಿ ಮೀರಿ ಕೆಲಸ ಮಾಡುವುದು ಕಾಣಿಸುತ್ತಿತ್ತು. ಮೊದಲ ಮೂರನೇ ವಾರಕ್ಕೆ ಮನೆಯಿಂದ ಔಟ್ ಆಗಬೇಕಿದ್ದ ಭಾಗ್ಯಶ್ರೀ ಆರು ವಾರಗಳ ವರೆಗೆ ದೊಡ್ಮನೆಯಲ್ಲಿ ಉಳಿದುಕೊಂಡಿದ್ದರು. ಕೊನೆಗೂ ಬಿಗ್‌ಬಾಸ್ ಮನೆಯಿಂದ ಔಟ್ ಆಗಿರುವ ಸ್ನೇಕ್ ಶ್ಯಾಮ್, ರಕ್ಷಕ್, ಗೌರೀಶ್ ಅಕ್ಕಿ, ಇಶಾನಿ, ಸಾಲಿಗೆ ಭಾಗ್ಯಶ್ರೀ ಅವರು ಸೇರಿಕೊಂಡಿದ್ದಾರೆ.
ಶನಿವಾರವೇ ಮನೆಯಿಂದ ಹೊರ ಬಂದ ಇಶಾನಿ
ರಾಪರ್ ಇಶಾನಿ ಕೂಡ ಕಳೆದ ವಾರವೇ ಎಲಿಮಿನೇಷನ್ ಆಗಬೇಕಿತ್ತು. ಆದರೆ, ಸೇಫ್ ಆದರೂ ಮನೆಯಿಂದ ಹೊರ ಹೊಗುತ್ತೇನೆ ಎಂದು ವರ್ತೂರು ಸಂತೋಷ್ ಹಠ ಹಿಡಿದಿದ್ದ ಕಾರಣ ಸುದೀಪ್ ವೇದಿಕೆ ಬಿಟ್ಟು ಎಲಿಮಿನೇಟ್ ಮಾಡದೇ ಹೊರ ಹೋಗಿದ್ದರು. ಇದೇ ಕಾರಣಕ್ಕೆ ಇಶಾನಿ ಮನೆಯಲ್ಲಿ ಮತ್ತೊಂದು ವಾರ ಉಳಿದುಕೊಳ್ಳುವ ಅದೃಷ್ಟ ಸಿಕ್ಕಿತ್ತು.
ಆದರೆ, ಈ ಡಬಲ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮತ್ತೆ ಯಾವ ಅದೃಷ್ಟವೂ ಅವರ ಕೈ ಹಿಡಿದಿಲ್ಲ. ಹೀಗಾಗಿ ಮನೆಯಿಂದ ಹೊರ ಬಂದಿದ್ದಾರೆ. ಜೊತೆಗೆ ಮತ್ತೆ ಒಂದು ಚಾನ್ಸ್ ಕೊಡಿ ಎಂದು ಬಿಗ್ ಬಾಸ್ ಮತ್ತು ಸುದೀಪ್ ಅವರ ಬಳಿ ಮನೆವಿ ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಒಮ್ಮೆ ಮಾತ್ರ ಅವಕಾಶ ಸಿಗುವುದು ಎಂದು ಸುದೀಪ್ ಉತ್ತರಿಸಿದ್ದಾರೆ.


Click it and Unblock the Notifications











