Bigg Boss: ಫಿನಾಲೆ ಹೊಸ್ತಿಲಲ್ಲಿ ನಮತ್ರಾ ಗೌಡ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್?
ಬಿಗ್‌ಬಾಸ್ ಕನ್ನಡ ಸೀಸನ್-10ರ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿಯಿದೆ. ಸೀಸನ್‌ನ ಕೊನೆಯ ಕಿಚ್ಚನ ಪಂಚಾಯಿತಿ ಸಖತ್ ಕಿಕ್ ಕೊಟ್ಟಿದೆ. ಸುದೀಪ್ ಮಾತುಗಳಿಗೆ ವೀಕ್ಷಕರು ಥ್ರಿಲ್ಲಾಗಿದ್ದಾರೆ. ಇನ್ನು ಸಂಗೀತಾ ಜೊತೆಗೆ ತುಕಾಲಿ ಸಂತು ಫೈನಲ್ ಹಂತಕ್ಕೆ ಏರಿದ್ದಾರೆ.
ಬುಧವಾರ ದಿಢೀರನೆ ತನಿಷಾ ಕುಪ್ಪಂಡ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು. ವೀಕೆಂಡ್‌ಗೆ ಏಳು ಜನ ಮಾತ್ರ ಉಳಿದುಕೊಂಡಿದ್ದರು. ಅದರಲ್ಲಿ ಇದೀಗ ಮತ್ತೊಬ್ಬರು ಎಲಿಮಿನೇಟ್ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ನಮ್ರತಾ ಗೌಡ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಪಯಣ ಮುಗಿಸಿ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.

ಕಿರುತೆರೆ ನಟಿ ನಮ್ರತಾ ಬಿಗ್‌ಬಾಸ್ ಸೀಸನ್-10ಕ್ಕೆ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಕೊಂಚ ಸೇಫ್ ಗೇಮ್ ಆಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಿಧಾನವಾಗಿ ಅಸಲಿ ಆಟ ಶುರು ಮಾಡಿದ್ದರು. ಕೊನೆ ಕೊನೆಗೆ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಂಡರು. ಕೊನೆ ವಾರದವರೆಗೂ ದೊಡ್ಮೆನೆಯಲ್ಲಿ ಉಳಿದುಕೊಂಡರು. ಆದರೆ ಬುಧವಾರ ತನಿಷಾ ಮನೆಯಿಂದ ಹೊರ ಬಂದಿದ್ದು ಕೆಲವರಿಗೆ ಅಚ್ಚರಿ ಮೂಡಿಸಿತ್ತು. ತನಿಷಾಗಿಂತ ನಮ್ರತಾ ಹೊರಗೆ ಬರಬೇಕಿತ್ತು ಎಂದವರು ಇದ್ದಾರೆ. ಇದೀಗ ನಮ್ರತಾ ಕೂಡ ಬಿಗ್‌ಬಾಸ್ ಮನೆಗೆ ಗುಡ್ ಬೈ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಬಿಗ್‌ಬಾಸ್ ಮನೆಗೆ ಈ ಸೀಸನ್‌ನಲ್ಲಿ ಮೊದಲ ಸ್ಪರ್ಧಿಯಾಗಿ ನಮ್ರತಾ ಎಂಟ್ರಿ ಕೊಟ್ಟಿದ್ದರು. ಮನೆಯೊಳಗೆ ಹೋಗಿ ಹಾಲು ಉಕ್ಕಿಸಿದ್ದರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಮ್ರತಾ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕ ವೀಕ್ಷಕರ ಮನಗೆದ್ದಿದ್ದರು. 'ನಾಗಿಣಿ- 2' ಇತ್ತೀಚೆಗೆ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಬಿಗ್‌ಬಾಸ್ ಮನೆಯಲ್ಲಿ ವಿನಯ್ ಹಾಗೂ ಕಾರ್ತಿಕ್ ಜೊತೆ ಬಹಳ ಆತ್ಮೀಯವಾಗಿ ಗುರ್ತಿಸಿಕೊಂಡಿದ್ದರು.
ಆರಂಭದಲ್ಲಿ ಮಾತು ಕಡಿಮೆ ಇರುತ್ತಿತ್ತು. ಇದೇ ಕಾರಣಕ್ಕೋ ಏನೋ ಕೆಲವರು ಆಕೆ ಸೇಫ್ ಗೇಮ್ ಆಡುತ್ತಿದ್ದಾರೆ ಎಂದಿದ್ದರು. ಕೊನೆ ಕೊನೆಗೆ ಫಿಸಿಕಲ್ ಟಾಸ್ಕ್‌ಗಳಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ಕೊಟ್ಟಿದ್ದರು. ಇನ್ನು ತನಿಷಾ ಜೊತೆ ನಮ್ರತಾ ಭಾರೀ ಪೈಪೋಟಿಗೆ ಇಳಿದಿದ್ದು ವಾಕ್ಸಮರ ನಡೆಸಿದ್ದು ಇದೆ. ನಾಗಿಣಿಯಂತೆ ತನಿಷಾ ಮೇಲೆ ಬುಸುಗುಟ್ಟಿದ್ದನ್ನು ವೀಕ್ಷಕರು ನೋಡಿದ್ದಾರೆ.
ನಡುವೆ ಒಮ್ಮೆ ಸಾಕಪ್ಪ ಸಾಕು, ಬಿಗ್‌ಬಾಸ್ ಸಹವಾಸ ಎಂದು ನಮ್ರತಾ ಗೌಡ ಹೊರ ಬರುವ ಮಾತಾಡಿದ್ದು ಇದೆ. ಬಳಿಕ ಗ್ರ್ಯಾಂಡ್ ಫಿನಾಲೆವರೆಗೆ ಬಂದರು. ತಮ್ಮನ್ನು ತಾವು ಸಾಬೀತು ಮಾಡಿ ತೋರಿಸಿದರು. ಇನ್ನು ನಮ್ರತಾ ಜೊತೆ ಕಾರ್ತಿಕ್ ಫ್ಲರ್ಟ್ ಮಾಡಿದ್ದು ಡೇಟ್ ಹೋಗೋಣ ಎಂದು ಮಾತನಾಡಿದ್ದ ಎಪಿಸೋಡ್ ಹೈಲೆಟ್ ಆಗಿತ್ತು. ಇತರೆ ಸ್ಪರ್ಧಿಗಳು ಇದನ್ನು ನೋಡಿ ಸಖತ್ ಮಜಾ ತಗೊಂಡಿದ್ದರು.

ಇನ್ನು ಸ್ನೇಹಿತ್ ಕೂಡ ನಮ್ರತಾ ಗೌಡ ಹಿಂದೆ ಬಿದ್ದಿದ್ದು ಇದೆ. ಒಮ್ಮೆ ಕ್ಯಾಪ್ಟೆನ್ಸಿ ಟಾಸ್ಕ್‌ಯಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಸ್ನೇಹಿತ್ ಮೇಲೆ ನಮ್ರತಾ ಗರಂ ಆಗಿದ್ದರು. ಇನ್ನು ಸ್ಪರ್ಧಿಗಳು ತಮ್ಮ ಜೀವನ ಕಹಿ ಘಟನೆಗಳನ್ನು ಬಿಗ್‌ಬಾಸ್ ಮನೆಯಲ್ಲಿ ಹೇಳಿಕೊಳ್ಳುವ ಸಮಯ ಬಂದಾಗ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಮನದ ನೋವನ್ನು ತೋಡಿಕೊಂಡಿದ್ದರು.
ಮುಂದಿನ ವಾರ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ತುಕಾಲಿ ಸಂತು, ಸಂಗೀತಾ ಫೈನಲ್ ಹಂತ ಪ್ರವೇಶಿಸಿದ್ದಾರೆ. ಯಾರು ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











